ಸಾರಾಂಶ
ಗದಗ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಗದಗ ಜಿಲ್ಲೆಯಾದ್ಯಂತ ಮಹತ್ತರ ಪ್ರಮಾಣದಲ್ಲಿ ಅನುಷ್ಠಾನಗೊಂಡಿರುವುದು ಅಂಕಿ–ಅಂಶಗಳಿಂದ ಸ್ಪಷ್ಟವಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.2025ರ ಜುಲೈ ಅಂತ್ಯದವರೆಗಿನ ಒಟ್ಟಾರೆ ಪ್ರಗತಿ ಉತ್ತಮವಾಗಿದೆ. ಇದಕ್ಕೆಲ್ಲ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾರ್ಗದರ್ಶನ ಮೂಲಕ ಪ್ರಗತಿ ಸಾಧನೆ ಸಾಧ್ಯವಾಗಿದೆ ಎಂದರು.
ಯೋಜನೆ ಆರಂಭದಿಂದ ಗೃಹಲಕ್ಷ್ಮಿ ಯೋಜನೆಯಲ್ಲಿ 2.56 ಲಕ್ಷ ಫಲಾನುಭವಿಗಳಿಗೆ ನೆರವು ತಲುಪಿದ್ದು, ಇದರ ಅನುಷ್ಠಾನ ಪ್ರಮಾಣ 97.99% ಆಗಿದೆ. ಈ ಯೋಜನೆಯಡಿ ಜಿಲ್ಲೆಗೆ ₹ 935 ಕೋಟಿ ಸಹಾಯ ನೀಡಲಾಗಿದೆ. ಇದೊಂದು ಮಹತ್ತರ ಮೈಲುಗಲ್ಲಾಗಿದೆ ಎಂದರು.ಅನ್ನಭಾಗ್ಯ ಯೋಜನೆ ಮೂಲಕ 2.34 ಲಕ್ಷ ಜನರಿಗೆ ಅಕ್ಕಿ ವಿತರಣೆ ಆಗಿದ್ದು, ಇದರ ಅನುಷ್ಠಾನ ಪ್ರಮಾಣ 93.27% ಇದಕ್ಕೆ ₹ 216.82 ಕೋಟಿ ವೆಚ್ಚವಾಗಿದೆ. ಈ ಯೋಜನೆಯಿಂದ ಹಸಿವು ಮುಕ್ತ ಕರ್ನಾಟಕ ಸಾಧ್ಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಸಿವು ಮುಕ್ತ ಕರ್ನಾಟಕ ನನಸಾಗಿದೆ ಎಂದು ತಿಳಿಸಿದರು.
ಗೃಹಜ್ಯೋತಿ ಯೋಜನೆಯಡಿಯಲ್ಲಿ 2.77 ಲಕ್ಷ ಮನೆ ಮನೆಗಳಿಗೆ ಉಚಿತ ವಿದ್ಯುತ್ ಪ್ರಯೋಜನ ತಲುಪಿದ್ದು, ಪ್ರಗತಿ ಪ್ರಮಾಣ 98.68% ಈ ಯೋಜನೆಗೆ ₹ 226.25 ಕೋಟಿ ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ವೆಚ್ಚವಾಗಿದೆ.ಯುವ ನಿಧಿ ಯೋಜನೆ ಮೂಲಕ 0.059 ಲಕ್ಷ ಯುವಕರಿಗೆ ಹಣಕಾಸು ನೆರವು ತಲುಪಿದ್ದು, ಶೇ.100% ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ. ಇದರ ವೆಚ್ಚ ₹ 11.47 ಕೋಟಿಯಾಗಿದ್ದು, ನಿರುದ್ಯೋಗ ಯುವಕರಿಗೆ ಸಹಕಾರಿಯಾಗಿದೆ ಎಂದರು.
ಅದೇ ರೀತಿ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸಲಾಗಿದ್ದು, 1127.47 ಲಕ್ಷ ಪ್ರಯಾಣಗಳು ದಾಖಲಾಗಿವೆ. ಈ ಯೋಜನೆಯು ಕೂಡ 100% ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ₹ 369.29 ಕೋಟಿ ವೆಚ್ಚವಾಗಿದೆ. ಒಟ್ಟಾರೆ, ಪಂಚ ಗ್ಯಾರಂಟಿ ಯೋಜನೆಗಳಡಿ ಗದಗ ಜಿಲ್ಲೆಯಲ್ಲಿ 1135.202 ಲಕ್ಷ ಫಲಾನುಭವಿಗಳು ಪ್ರಯೋಜನ ಪಡೆದಿದ್ದು, ಸರ್ಕಾರ ಇದಕ್ಕಾಗಿ ₹ 1758.83 ಕೋಟಿ ವೆಚ್ಚಮಾಡಿದೆ. ಪಂಚ ಗ್ಯಾರಂಟಿ ಯೋಜನೆಗಳ ಸಕಾಲಿಕ ಜಾರಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಸರ್ಕಾರದ ಕಲ್ಯಾಣ ಕಾರ್ಯಗಳು ತಲುಪುತ್ತಿರುವುದಕ್ಕೆ ಇದೊಂದು ಸಾಕ್ಷಿಯಾಗಿದೆ ಎಂದರು.ರಾಜ್ಯಾಧ್ಯಕ್ಷ ಎಚ್.ಎಂ.ರೆವಣ್ಣ ಸೂಚನೆ ಮೇರೆಗೆ ತಾಲೂಕಿನಲ್ಲಿ 3-4 ಗ್ರಾಪಂ ಫಲಾನುಭವಿಗಳ ಸಮಸ್ಯೆ ಕುರಿತು ಜನಸ್ಪಂದನ ಸಭೆ ಜರುಗಿಸಲು ಸೂಚಿಸಿದ್ದಾರೆ ಅದನ್ನು ಸರಿಯಾಗಿ ನಿರ್ವಹಿಸೋಣ ಎಂದರು.
ಈ ಹಿಂದಿನ ಸಭೆಯಲ್ಲಿ ಪಡಿತರ ವಿತರಣೆ ಅಂಗಡಿಯಲ್ಲಿ ಗ್ಯಾರಂಟಿ ಯೋಜನೆಯ ಕುರಿತು ಪ್ಲೆಸ್ ಅಳವಡಿಕೆಗೆ ಸೂಚಿಸಲಾಗಿತ್ತು. ಈ ಬಗ್ಗೆ ವಿವರವಾದ ಮಾಹಿತಿ ಸಭೆಯಲ್ಲಿ ಸಲ್ಲಿಸುವಂತೆ ತಿಳಿಸಲಾಯಿತು. ಅದೇ ರೀತಿಯಾಗಿ ಹಿಂದಿನ ಸಭೆಗಳ ನಡಾವಳಿಗಳು ಹಾಗೂ ಅನುಸರಣ ವರದಿಗಳನ್ನು ಸಭೆಯಲ್ಲಿ ಮಂಡಿಸಿ ಚರ್ಚಿಸಿ ಕೈಗೊಂಡ ಕ್ರಮದ ಕುರಿತು ಸಂಬಂಧಿತ ಇಲಾಖೆ ಅಧಿಕಾರಿಗಳು ಮುಂದಾಗಬೇಕೆಂದು ತಿಳಿಸಲಾಯಿತು.ಈ ಹಿಂದೆ ಹಲವಾರು ಬಾರಿ ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿಲ್ದಾಣದ ಸ್ವಚ್ಛತೆ, ಸಾರ್ವಜನಿಕರಿಗೆ ಸರಿಯಾಗಿ ಕೂರಲು ಆಸನ ವ್ಯವಸ್ಥೆ ಸೇರಿದಂತೆ ಹಲವಾರು ಸೂಚನೆ ನೀಡಲಾಗಿದೆ. ಈ ಎಲ್ಲ ಸೂಚನೆಗಳು ಆದಷ್ಟು ಬೇಗನೆ ಪರಿಹಾರವಾಗಲಿ ಇಲ್ಲದಿದ್ದಲ್ಲಿ ಸಂಬಂಧಿತ ಇಲಾಖೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು ಎಂದರು.
ಸಭೆಯಲ್ಲಿ ಜಿಪಂ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು, ತಾಲೂಕಾಧ್ಯಕ್ಷರು, ಜಿಲ್ಲಾ ಸಮಿತಿ ಸದಸ್ಯರು ಪಾಲ್ಗೊಂಡು ಗ್ಯಾರೆಂಟಿ ಅನುಷ್ಠಾನಕ್ಕೆ ಹಾಗೂ ಅರ್ಹರಿಗೆ ಯೋಜನೆ ತಲುಪಿಸುವಲ್ಲಿ ಇರುವ ಸಮಸ್ಯೆ ಹಾಗೂ ಪರಿಹಾರ ಕುರಿತು ಚರ್ಚಿಸಿದರು.ಈ ವೇಳೆ ಜಿಲ್ಲಾ ಸಮಿತಿಯ ಉಪಾದ್ಯಕ್ಷ ಹೇಮಂತಗೌಡ ಪಾಟೀಲ, ಪಿ.ಬಿ. ಅಳಗವಾಡಿ, ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಿಪಂ ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ ಸೇರಿದಂತೆ ಅಧಿಕಾರಿಗಳು ಇದ್ದರು.
ಜಿಲ್ಲಾ ಸಮಿತಿಯ ಸದಸ್ಯ ಡಂಬಳದ ವಿರೂಪಾಕ್ಷಪ್ಪ ಯರಾಶಿ ಇತ್ತೀಚೆಗೆ ಅಕಾಲಿಕವಾಗಿ ಮರಣ ಹೊಂದಿದ ಕಾರಣ ಸಭೆಯಲ್ಲಿ ಮೌನಚರಣೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.