ಸಂವಿಧಾನ ವೃತ್ತದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಶಾಸಕ ಜಿ.ಡಿ. ಹರೀಶ್ ಗೌಡ, ಸಂವಿಧಾನದಡಿ ಮೀಸಲಾತಿ ಪಡೆಯುವುದು ಪ.ಜಾತಿ ಸಮುದಾಯದ ಹಕ್ಕಾಗಿದೆ. 56 ಸಾವಿರ ಪ.ಜಾತಿ ಮತದಾರರನ್ನು ಹೊಂಡಿರುವ ಹುಣಸೂರು ಕ್ಷೇತ್ರದಲ್ಲಿ ಬನ್ನಿಕುಪ್ಪೆ ಜಿಪಂ ಕ್ಷೇತ್ರದಲ್ಲಿ ಅತಿಹೆಚ್ಚು (9200) ಪರಿಶಿಷ್ಟ ಮತದಾರರಿದ್ದಾರೆ.

ಕನ್ನಡಪ್ರಭ ವಾರ್ತೆ ಹುಣಸೂರು

ಜಿಪಂ ಕ್ಷೇತ್ರಗಳ ಮೀಸಲು ಕರಡು ಪಟ್ಟಿಯಲ್ಲಿ ತಾಲೂಕಿನ ಬಹುಸಂಖ್ಯಾತ ಪ.ಜಾತಿ ಸಮುದಾಯಕ್ಕೆ ಮೀಸಲು ನೀಡದಿರುವುದನ್ನು ಖಂಡಿಸಿ ಜಿಪಂ ಮೀಸಲು ಹೋರಾಟ ಸಮಿತಿ ಕರೆ ನೀಡಿದ್ದ ಶುಕ್ರವಾರದ ಹುಣಸೂರು ಬಂದ್ ಗೆ ಉತ್ತಮ ಸ್ಪಂದನೆ ದೊರೆಯಿತು.

ತಾಲೂಕಿನ 6 ಜಿಪಂ ಕ್ಷೇತ್ರಗಳ ಪೈಕಿ ಕನಿಷ್ಠ ಒಂದು ಕ್ಷೇತ್ರವನ್ನೂ ಪ.ಜಾತಿಗೆ ಮೀಸಲು ಮಾಡದಿರುವುದನ್ನು ಖಂಡಿಸಿ ಜಿಪಂ ಮೀಸಲು ಹೋರಾಟ ಸಮಿತಿ ಅ. 23 ರಂದು ಹುಣಸೂರು ಬಂದ್ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಸುವ ನಿರ್ಧಾರ ಪ್ರಕಟಿಸಿತ್ತು. ಅದರಂತೆ ಶುಕ್ರವಾರ ಹುಣಸೂರು ನಗರದಾದ್ಯಂತ ಎಲ್ಲಾ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಹೋರಾಟಕ್ಕೆ ಬೆಂಬಲ ನೀಡಿದರು. ನಗರದ ಹಳೇ ಬಸ್ ನಿಲ್ದಾಣ, ಗ್ರಾಮಾಂತರ ಬಸ್ ನಿಲ್ದಾಣ, ಎಸ್.ಜೆ. ರಸ್ತೆ, ಜೆ.ಎಲ್.ಬಿ. ರಸ್ತೆ, ಬಜಾರ್ ರಸ್ತೆ, ಸೇತುವೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತವಾಗಿತ್ತು.

ಬೆಳಗಿನಿಂದಲೇ ಸಮಿತಿ ಸದಸ್ಯರು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಅಂಗಡಿಗಳನ್ನು ಬಂದ್ ಮಾಡಲು ವರ್ತಕರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು. ಜೊತೆಗೆ ಮಧ್ಯಾಹ್ನದ ನಂತರ ಖಾಸಗಿ ಶಾಲೆಗಳಿಗೆ ರಜೆ ನೀಡಲಾಯಿತು.

ಪ್ರತಿಭಟನಾ ಮೆರವಣಿಗೆ:

ಸಂವಿಧಾನ ವೃತ್ತದಲ್ಲಿ ಹೊರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು, ವಿವಿಧ ಸಮುದಾಯದ ಮುಖಂಡರು ಪಕ್ಷತೀತವಾಗಿ ಮತ್ತು ಜಾತ್ಯತೀತವಾಗಿ ಜಮಾಯಿಸಿ. ಬೆಳಗ್ಗೆ 11 ಗಂಟೆಗೆ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಎಸ್.ಜೆ ರಸ್ತೆ, ಜೆ.ಎಲ್.ಬಿ ರಸ್ತೆ, ಕಾರ್ಯಾನೆ ರಸ್ತೆ, ಬಜಾರ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ. ಮೀಸಲಾತಿ ವಿರೋಧಿಗಳಿಗೆ ಧಿಕ್ಕಾರ, ಮೀಸಲಾತಿ ನಮ್ಮ ಹಕ್ಕು ನಿಮ್ಮ ಭಿಕ್ಷೆ ಅಲ್ಲ ಎಂಬ ಹಲವು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಎಚ್.ಡಿ.ಕೋಟೆ ವೃತ್ತದ ಬಳಿ ಮೈಸೂರು-ಕೊಡಗು ಸಂಸದ ಯದುವೀರ್ ಮತ್ತು ಶಾಸಕ ಜಿ.ಡಿ. ಹರೀಶ್ ಗೌಡ ಅವರು ಸಹ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ತಾವು ಸಹ ಪ್ರತಿಭಟನೆ ಸೇರಿಕೊಂಡರು.

ಜೆ.ಎಲ್.ಬಿ. ರಸ್ತೆ ಬಜಾರ್ ರಸ್ತೆ ಮೂಲಕ ಹಳೇ ಬಸ್ ನಿಲ್ದಾಣದ ಬಳಿ ಸಂವಿಧಾನ ವೃತ್ತದಲ್ಲಿ ಮೆರವಣಿಗೆ ಪೂರ್ಣಗೊಂಡಿತು. ಮೆರವಣಿಗೆಯಲ್ಲಿ ಸಮಿತಿ ಅಧ್ಯಕ್ಷ ದೇವರಾಜ್ ಒಡೆಯರ್, ಮುಖಂಡರಾದ ನಗರ ಯೋಜನಾಧಿಕಾರದ ಅಧ್ಯಕ್ಷ ಎಚ್.ಪಿ. ಅಮರ್ ನಾಥ್, ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾದ್ಯಕ್ಷೆ ಡಾ. ಪುಷ್ಪಾವತಿ ಅಮರನಾಥ್, ಮಾಜಿ ಹುಡಾ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಸತೀಶ್ ಪಾಪಣ್ಣ, ಹರವೇ ಶ್ರೀಧರ್, ಹೊನ್ನಪ್ಪ, ನಿಂಗರಾಜ್ ಮಲ್ಲಾಡಿ, ನಾಗರಾಜ್ ಮಲ್ಲಾಡಿ, ಕಟ್ಟೆಮಳಲವಾಡಿ ದೇವರಾಜ್, ಬಿಳಿಕೆರೆ ಪ್ರಸನ್ನ, ರತ್ನಪುರಿ ಪ್ರಭಾಕರ್, ಚಿಕ್ಕಸ್ವಾಮಿ, ದೊಡ್ಡಹೆಜ್ಜೂರು ರಮೇಶ್, ಇಂಟೆಕ್ ರಾಜು, ಡಿ. ಕುಮಾರ್, ಸತ್ಯಪ್ಪ, ಪುಟ್ಟರಾಜು ಸೇರಿದಂತೆ ದಲಿತ ಮತ್ತು ಎಲ್ಲಾ ಸಮುದಾಯದ ಮುಖಂಡರು ಹಾಜರಿದ್ದರು.

ಮೀಸಲಾತಿ ಕೈಬಿಟ್ಟ ತಪ್ಪಿಗೆ ಕಾರಣ ಯಾರು?

ಸಂವಿಧಾನ ವೃತ್ತದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಶಾಸಕ ಜಿ.ಡಿ. ಹರೀಶ್ ಗೌಡ, ಸಂವಿಧಾನದಡಿ ಮೀಸಲಾತಿ ಪಡೆಯುವುದು ಪ.ಜಾತಿ ಸಮುದಾಯದ ಹಕ್ಕಾಗಿದೆ. 56 ಸಾವಿರ ಪ.ಜಾತಿ ಮತದಾರರನ್ನು ಹೊಂಡಿರುವ ಹುಣಸೂರು ಕ್ಷೇತ್ರದಲ್ಲಿ ಬನ್ನಿಕುಪ್ಪೆ ಜಿಪಂ ಕ್ಷೇತ್ರದಲ್ಲಿ ಅತಿಹೆಚ್ಚು (9200) ಪರಿಶಿಷ್ಟ ಮತದಾರರಿದ್ದಾರೆ. ಧರ್ಮಾಪುರದಲ್ಲಿ 8500 ಮತದಾರರು, ಚಿಲ್ಕುಂದದಲ್ಲಿ 8100 ಮತದಾರರಿದ್ದಾರೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಪ.ಜಾತಿ ಮತದಾರರನ್ನು ಹೊಂದಿರುವ 5ನೇ ಸ್ಥಾನದಲ್ಲಿರುವ ಹುಣಸೂರು ತಾಲೂಕು, ಹೀಗಿದ್ದೂ ಒಂದು ಸ್ಥಾನವನ್ನು ಪರಿಶಿಷ್ಟರಿಗೆ ಮೀಸಲಿಟ್ಟಿಲ್ಲವೆಂದರೆ ಈ ತಪ್ಪಿಗೆ ಕಾರಣ ಯಾರು ಎಂಬುದು ನನಗೆ ತಿಳಿಯದಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಂಸದ ಯದುವೀರ್ ಕೃಷ್ಣದತ್ತ ಜಾಮರಾಜ ಒಡೆಯರ್ ಮಾತನಾಡಿ, ಅನ್ಯಾಯಕ್ಕೊಳಗಾದ ಸಮುದಾಯದ ಮೀಸಲಾತಿಗಾಗಿ ಪಕ್ಷಭೇದ ಮರೆತು ಎಲ್ಲಾರು ಒಂದಾಗಿ ಹೋರಾಟ ನಡೆಸಿರುವುದು ಸಂತಸ ತಂದಿದೆ. ಜರುಗಿರುವ ಅನ್ಯಾಯವನ್ನು ಸರಿಪಡಿಸುವತ್ತ ಗಮನಿಸೋಣ, ಎಲ್ಲಾ ಒಟ್ಟಾಗಿ ಸೇರಿ ನ್ಯಾಯಕ್ಕಾಗಿ ಹೋರಾಡೋಣ. ಈ ಹೋರಾಟಕ್ಕೆ ನನ್ನ ಬೆಂಬಲ ಎಂದಿಗೂ ಇದೆ ಎಂದರು.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪ ಅಮರನಾಥ್ ಮಾತನಾಡಿ, ಜಿಲ್ಲಾ ಪಂಚಾಯ್ತಿ ಸ್ಪರ್ಧೆಯ ಆಕಾಂಕ್ಷಿಯಲ್ಲದಿದ್ದರೂ ನನ್ನ ಸಮುದಾಯಕ್ಕೆ ಆದ ಅನ್ಯಾಯದ ವಿರುದ್ಧ ಹೋರಾಡಲು ನಾನು ಈ ಪ್ರತಿಭಟನೆಗೆ ಕೈ ಜೋಡಿಸಿದ್ದೇನೆ. ಸರ್ಕಾರದ ಪರವಾಗಿ ಮಾತನಾಡಲೂ ನಾನು ಬಂದಿಲ್ಲ, ನಾವು ಯಾರೊಂದಿಗೂ ಭಿಕ್ಷೆ ಬೇಡಬೇಕಿಲ್ಲ. ಸಂಬಂಧಪಟ್ಟ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ವಿಷಯ ತಿಳಿಸಿದ್ದೇನೆ ಎಂದು ಹೇಳಿದರು.

ಮಾಜಿ ಶಾಸಕರ ಮನವಿ:

ತಾಲೂಕಿನ ಜಿಪಂ ಕ್ಷೇತ್ರಗಳಿಗೆ ಮೀಸಲು ಕರಡು ಪಟ್ಟಿಯಲ್ಲಿ ಪ.ಜಾ. ಗೆ ಮೀಸಲು ಅವಕಾಶ ನೀಡುವಲ್ಲಿ ಆಗಿರುವ ಲೋಪದೋಷಗಳ ಕುರಿತು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಿ. ರಂದೀಪ್ ಅವರನ್ನು ಭೇಟಿ ಮಾಡಿ ಮೀಸಲಾತಿ ಪಟ್ಟಿಯನ್ನು ಕುರಿತು ಚರ್ಚಿಸಿದ್ದೇನೆ ಎಂದರು.

ತಾಲೂಕಿನ 6 ಜಿಪಂ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರಕ್ಕೂ ಪಜಾ ಮೀಸಲಾತಿ ನೀಡದಿರುವ ಬಗ್ಗೆ ಮಾಹಿತಿ ನೀಡಿ ಚುನಾವಣಾ ಆಯೋಗ ಹೊರಡಿಸಿರುವ ಮೀಸಲಾತಿ ಪಟ್ಟಿಯಲ್ಲಿ ಪ.ಜಾತಿ ಸಮುದಾಯಕ್ಕೆ ಆಗಿರುವ ತಪ್ಪನ್ನು ಸರಿಪಡಿಸಬೇಕಾದ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಟ್ಟದ್ದೇನೆ ಎಂದರು.