ಯುವನಿಧಿ ಯೋಜನೆಗೆ ಬಳ್ಳಾರಿ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ

| Published : Jan 07 2024, 01:30 AM IST

ಯುವನಿಧಿ ಯೋಜನೆಗೆ ಬಳ್ಳಾರಿ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಡಿ. 26ರಂದು ಘೋಷಣೆ ಮಾಡಿದ 5ನೇ ಗ್ಯಾರಂಟಿಯಾದ ಯುವನಿಧಿ ಯೋಜನೆಗೆ ಬಳ್ಳಾರಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕೆ.ಎಂ. ಮಂಜುನಾಥ್

ಬಳ್ಳಾರಿ: ರಾಜ್ಯ ಸರ್ಕಾರದ 5ನೇ ಗ್ಯಾರಂಟಿಯಾದ "ಯುವನಿಧಿ " ಯೋಜನೆಯ ನೋಂದಣಿಗೆ ಗಣಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿರುದ್ಯೋಗಿ ಯುವಕರು, ಸೇವಾಸಿಂಧು ಫೋರ್ಟಲ್ , ಕರ್ನಾಟಕ ಒನ್, ಅಟಲ್ ಜೀ ಕೇಂದ್ರ, ಬಳ್ಳಾರಿ ವನ್ ಸೇರಿದಂತೆ ಇತರ ಸೇವಾ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಕೆಗೆ ಮುಂದಾಗಿದ್ದಾರೆ.ಕಳೆದ ಡಿ. 26ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಈ ವರೆಗೆ ಜಿಲ್ಲೆಯಲ್ಲಿ 1180 ಫಲಾನುಭವಿಗಳು ಅರ್ಜಿ ಸಲ್ಲಿಕೆಯಾಗಿವೆ. ಇದು ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಲಿಸಿದರೆ ಬಳ್ಳಾರಿಯಲ್ಲಿ ಯೋಜನೆಯ ಪ್ರಯೋಜನ ಪಡೆಯಲು ಹೆಚ್ಚಿನ ಸಂಖ್ಯೆಯ ಯುವ ಜನರು ಉತ್ಸುಕರಾಗಿರುವುದು ಕಂಡುಬಂದಿದೆ.

ರಾಜ್ಯದ ವಿದ್ಯಾವಂತ ನಿರುದ್ಯೋಗಿ ಯುವ ಸಮುದಾಯಕ್ಕೆ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ ಯುವನಿಧಿ ಯೋಜನೆಯನ್ನು ಪ್ರಾರಂಭಿಸಿದ್ದು, ಈ ಯೋಜನೆಯಿಂದ ಅವರು ಹಣಕಾಸಿನ ಅಗತ್ಯಗಳಿಗೆ ಇತರರ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಲಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಡಿ. 26ರಂದು ಬೆಂಗಳೂರಿನಲ್ಲಿ ಐದನೇ ಗ್ಯಾರಂಟಿ ಯೋಜನೆಗೆ ಚಾಲನೆ ನೀಡಿದ್ದು, ಜ. 12ರಂದು ಸ್ವಾಮಿ ವಿವೇಕಾನಂದರ ಜನ್ಮದಿನದಂದು ಯುವನಿಧಿಯ ಭತ್ಯೆ ವಿತರಣೆ ಕಾರ್ಯಕ್ಕೆ ಸಿಎಂ ಚಾಲನೆ ನೀಡುವರು.

ಪದವಿ ಪಾಸ್ ಆದವರಿಗೆ ₹3 ಸಾವಿರ ಹಾಗೂ ಡಿಪ್ಲೊಮಾ ಪಾಸ್ ಆದವರಿಗೆ ₹1500 ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಫಲಾನುಭವಿಯ ಖಾತೆಗೆ ನೇರವಾಗಿ ಭತ್ಯೆ ಹಾಕಲಾಗುತ್ತದೆ. ಬಳ್ಳಾರಿಯಲ್ಲಿ 10 ಸಾವಿರ ಗುರಿ: 2023ರಲ್ಲಿ ಪದವಿ, ಡಿಪ್ಲೊಮಾ ಉತ್ತೀರ್ಣಗೊಂಡವರು, ಪದವಿ ಅಥವಾ ಡಿಪ್ಲೊಮಾ ನಂತರ ಕನಿಷ್ಠ 6 ತಿಂಗಳ ಅವಧಿ ವರೆಗೆ ಸರ್ಕಾರಿ/ ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ಶಿಕ್ಷಣ ಮುಂದುವರಿಸದವರಿಗೆ ಮಾತ್ರ ಯುವನಿಧಿ ಯೋಜನೆ ಲಾಭ ಪಡೆಯಲು ಅವಕಾಶವಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಸೇರಿದಂತೆ 30 ಪದವಿ ಕಾಲೇಜುಗಳು ಹಾಗೂ 4 ಡಿಪ್ಲೊಮಾ ಕಾಲೇಜುಗಳು ಇದ್ದು, ಯುವನಿಧಿ ಯೋಜನೆ ವ್ಯಾಪ್ತಿಗೆ ಸುಮಾರು 10 ಸಾವಿರ ನಿರುದ್ಯೋಗಿಗಳು ಬರಬಹುದು ಎಂದು ಅಂದಾಜಿಸಲಾಗಿದೆ.

ಸರ್ಕಾರದ 5ನೇ ಗ್ಯಾರಂಟಿ ಯೋಜನೆಯಿಂದ ಯಾರೂ ವಂಚಿತರಾಗಬಾರದು ಎಂಬ ಕಾರಣಕ್ಕೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ಜಿ.ಪಂ. ಸಿಇಒ ರಾಹುಲ್ ಶರಣಪ್ಪ ಸಂಕನೂರು ಅವರು ಕಳೆದ ಜ. 4ರಂದು ಎಲ್ಲ ಕಾಲೇಜುಗಳ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಸಭೆ ನಡೆಸಿ, ಯುವನಿಧಿ ಯೋಜನೆ ನೋಂದಣಿಗೆ ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ. ಅರ್ಹ ಫಲಾನುಭವಿಗಳು ಯಾವುದೇ ಕಾರಣಕ್ಕೂ ಯೋಜನೆಯಿಂದ ವಂಚಿತರಾಗಬಾರದು. ಹೀಗಾಗಿ ಆಯಾ ಕಾಲೇಜುಗಳು ಮುತುವರ್ಜಿ ವಹಿಸಿ, ತಮ್ಮಲ್ಲಿದ್ದ ಮಕ್ಕಳ ಮಾಹಿತಿ ಪಡೆದು ನೋಂದಣಿ ಪ್ರಕ್ರಿಯೆ ನಡೆಸಿ ಎಂದು ಸೂಚನೆ ನೀಡಿದ್ದಾರೆ. ಯುವನಿಧಿ ಯೋಜನೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಕೆಲಸವಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಅವರು ಹೆಚ್ಚು ಮುತುವರ್ಜಿ ವಹಿಸಿ, ಅರ್ಜಿ ಸಲ್ಲಿಕೆಗೆ ಕ್ರಮ ವಹಿಸುವಂತೆ ಆಯಾ ಕಾಲೇಜುಗಳ ಆಡಳಿತ ಮಂಡಳಿ ಜತೆ ಸಭೆ ನಡೆಸಿ, ಸೂಚನೆ ನೀಡಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ಕೌಶಲ್ಯಭಿವೃದ್ಧಿ ಅಧಿಕಾರಿ ಹಟ್ಟಪ್ಪ ತಿಳಿಸಿದ್ದಾರೆ.