ಕಾರವಾರ ರೀಡ್ಸ್‌ಗೆ ಉತ್ತಮ ಪ್ರತಿಕ್ರಿಯೆ

| Published : Nov 18 2024, 12:03 AM IST

ಸಾರಾಂಶ

ಇಷ್ಟವಾದ ಪುಸ್ತಕವನ್ನು ತೆಗೆದುಕೊಂಡು ಬಂದು ಪ್ರಕೃತಿಯ ಮಡಿಲಲ್ಲಿ ಓದುವುದು, ಜ್ಞಾನ ವೃದ್ಧಿಸಿಕೊಳ್ಳುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಕಾರವಾರ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಆಸಕ್ತಿವಹಿಸಿ ಈ ಭಾನುವಾರದಿಂದ ವಿನೂತನವಾಗಿ ಆಯೋಜಿಸಿರುವ ಕಾರವಾರ ರೀಡ್ಸ್ ಯಶಸ್ಸು ಕಂಡಿತು.ನಗರದ ಎಂ.ಜಿ. ರಸ್ತೆಯಲ್ಲಿರುವ ಗಾಂಧಿ ಉದ್ಯಾನವನದಲ್ಲಿ ನಡೆದ ಕಾರವಾರ ರೀಡ್ಸ್‌ನಲ್ಲಿ ಡಿಸಿ ಲಕ್ಷ್ಮೀಪ್ರಿಯಾ, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೇಕರ ಮಹಾತ್ಮ ಗಾಂಧಿ ಪುತ್ಥಳಿಗೆ ಹಾರ ಹಾಕಿ ನಮನ ಸಲ್ಲಿಸಿದರು. ಇಷ್ಟವಾದ ಪುಸ್ತಕವನ್ನು ತೆಗೆದುಕೊಂಡು ಬಂದು ಪ್ರಕೃತಿಯ ಮಡಿಲಲ್ಲಿ ಓದುವುದು, ಜ್ಞಾನ ವೃದ್ಧಿಸಿಕೊಳ್ಳುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಪತಿ ಮೋಹಿಲ್ ಅವರೊಂದಿಗೆ ಪಾಲ್ಗೊಂಡಿದ್ದರು. ಪೌರಾಯುಕ್ತ ಜಗದೀಶ ಹುಲಗೆಜ್ಜಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಶಾಲಾ- ಕಾಲೇಜು ವಿದ್ಯಾರ್ಥಿಗಳು ಒಳಗೊಂಡು ೮೦ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.೨೧ರಿಂದ ಮಂಚೀಕೇರಿಯಲ್ಲಿ ಸಂಸ್ಕೃತಿ ಉತ್ಸವ

ಯಲ್ಲಾಪುರ: ಶ್ರೀ ರಾಜರಾಜೇಶ್ವರಿ ರಂಗ ಸಮೂಹ ಮತ್ತು ಸಪ್ತಕ ಬೆಂಗಳೂರು ಇವರ ಸಹಯೋಗದಲ್ಲಿ ನ. ೨೧, ೨೨, ೨೩ರಂದು ಮಂಚೀಕೇರಿಯ ರಾ.ರಾ. ರಂಗಮಂದಿರದಲ್ಲಿ ಸಂಸ್ಕೃತಿ ಉತ್ಸವ ನಡೆಯಲಿದೆ.ನ. ೨೧ರಂದು ಉತ್ಸವದ ಉದ್ಘಾಟನಾ ಸಮಾರಂಭ ಸಂಜೆ ೬.೩೦ಕ್ಕೆ ನಡೆಯಲಿದ್ದು, ಅಭ್ಯಾಗತರಾಗಿ ಪಂ. ಗಣಪತಿ ಭಟ್ಟ ಹಾಸಣಗಿ, ಆರ್.ಎನ್. ಹೆಗಡೆ ಗೋರ್ಸಗದ್ದೆ, ಜಿ.ಎನ್. ಶಾಸ್ತ್ರಿ ಜೋಗಭಟ್ರಕೇರಿ ಆಗಮಿಸುವರು. ನಂತರ ನೀನಾಸಂ ತಿರುಗಾಟ ತಂಡದವರಿಂದ ಭವಭೂತಿ ರಚಿಸಿದ ಮಾಲತೀಮಾಧವ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕಕ್ಕೆ ವಿನ್ಯಾಸ ಮತ್ತು ಸಂಗೀತವನ್ನು ವಿದ್ಯಾ ಹೆಗಡೆ, ಭಾರ್ಗವ ಕೆ.ಎನ್. ಮತ್ತು ಎಂ.ಎಚ್. ಗಣೇಶ ನೀಡಿದ್ದಾರೆ. ಕನ್ನಡ ರೂಪಕ್ಕೆ ನಾಟಕವನ್ನು ತರ್ಜುಮೆಗೊಳಿಸಿದ ಅಕ್ಷರ ಕೆ.ವಿ. ನಾಟಕವನ್ನು ನಿರ್ದೇಶಿಸಿದ್ದಾರೆ.ನ. ೨೨ರಂದು ಸಂಜೆ ೬.೩೦ಕ್ಕೆ ನಡೆಯುವ ಉತ್ಸವದ ಸಭಾ ಕಾರ್ಯಕ್ರಮಕ್ಕೆ ಪತ್ರಕರ್ತ ಬಂಡು ಕುಲಕರ್ಣಿ, ಆರ್.ಜಿ. ಹೆಗಡೆ ಬೆದೆಹಕ್ಕಲು ಹಾಗೂ ಶಾಂತಾರಾಮ ಭಟ್ಟ ಹುಬ್ಬಳ್ಳಿ ಅಭ್ಯಾಗತರಾಗಿ ಪಾಲ್ಗೊಳ್ಳುವರು. ನಂತರ ಅಭಿರಾಮ ಭಡ್ಕಮ್ಕರ್ ರಚಿಸಿದ ಜಯಂತ ಕಾಯ್ಕಿಣಿ ಕನ್ನಡಕ್ಕೆ ರೂಪಾಂತರಿಸಿದ ಅಂಕದಪರದೆ ನಾಟಕವನ್ನು ನೀನಾಸಂ ತಿರುಗಾಟ ತಂಡದವರು ಪ್ರಸಾದ ನಿರ್ದೇಶನದಲ್ಲಿ ಪ್ರಸ್ತುತಪಡಿಸುವರು.ನ. ೨೩ರಂದು ಸಂಜೆ ೬.೩೦ಕ್ಕೆ ನಡೆಯುವ ಮುಕ್ತಾಯ ಸಮಾರಂಭದಲ್ಲಿ ಸಪ್ತಕದ ಅಧ್ಯಕ್ಷ ಜಿ.ಎಸ್. ಹೆಗಡೆ, ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ಟ, ರಂಗಕರ್ಮಿ ರಮಾನಂದ ಐನ್‌ಕೈ ಪಾಲ್ಗೊಳ್ಳುವರು. ನಂತರ ಮೈಸೂರಿನ ನಿರ್ದಿಗಂತ ತಂಡದವರು ಡಾ. ಶ್ರೀಪಾದ ಭಟ್ಟರ ನಿರ್ದೇಶನದಲ್ಲಿ ಮಂಟೆಸ್ವಾಮಿ ಕಾವ್ಯಪ್ರಯೋಗ ಪ್ರದರ್ಶಿಸುವರು.