ಕೋಲಾರ ನಗರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

| Published : Jan 04 2025, 12:32 AM IST

ಸಾರಾಂಶ

ಸಂಸತ್‌ನಲ್ಲಿ ಡಾ.ಅಂಬೇಡ್ಕರ್‌ಗೆ ಬಹ ಸಚಿವ ಅಮಿತ್‌ ಶಾ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ನಡೆದ ಕೋಲಾರ ನಗರ ಬಂದ್‌ ಶಾತಿಯುತವಾಗಿತ್ತು. ಬಸ್ಸುಗಳು ಸೇರಿದಂತೆ ಯಾವ ವಾಹನಗಳೂ ರಸ್ತೆಗೆ ಇಳಿಯಲಿಲ್ಲ. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಹೊರಗಿನಿಂದ ಬಂದವರು ಪರದಾಡುವ ಸ್ಥಿತಿ ಉಂಟಾಗಿತ್ತು.

ಕನ್ನಡಪ್ರಭ ವಾರ್ತೆ ಕೋಲಾರಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಕುರಿತು ನೀಡಿದ ಹೇಳಿಕೆ ಖಂಡಿಸಿ ಶುಕ್ರವಾರ ಕರೆ ನೀಡಿದ್ದ ಕೋಲಾರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಳಗ್ಗೆ ೫ ಗಂಟೆಗೆ ಟೈರ್‌ಗೆ ಬೆಂಕಿ ಹಾಕುವ ಮೂಲಕ ರಸ್ತೆಗಳಿದ ಪ್ರತಿಭಟನಾಕಾರರು ರಸ್ತೆತಡೆ ಆರಂಭಿಸಿದರು. ದಲಿತಪರ ಸಂಘಟನೆ, ಕನ್ನಡಪರ, ಪ್ರಗತಿ ಪರ ಸಂಘಟನೆಗಳು, ವರ್ತಕರ ಸಂಘ, ಕಾಂಗ್ರೆಸ್, ಸಿಪಿಎಂ ಸೇರಿದಂತೆ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿದ್ದವು.

ಅಮಿತ್‌ಶಾ ಹೇಳಿಕೆ ತೀವ್ರವಾಗಿ ಖಂಡಿಸಿ ಸಚಿವರನ್ನು ವಜಾಗೊಳಿಸಿ ಭಾರತ ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯದ ಘೋಷಣೆಗಳು ಕೂಗುತ್ತಿದ್ದರು. ಕೋಲಾರ ಕೆಎಸ್‌ಆರ್‌ಟಿಸಿ ಡಿಪೋ ಎದುರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು

ನಗರದಲ್ಲಿ ವಾಹನ ಸಂಚಾರ ಸ್ತಬ್ಧ

ದಲಿತ ಪರ ಸಂಘಟನೆಗಳು, ರೈತ ಸಂಘ, ವಿದ್ಯಾರ್ಥಿ ಸಂಘಟನೆ, ಕಾರ್ಮಿಕ ಸಂಘಟನೆ ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ಬಳಿ ಸಂಘಟಿತರಾಗಿ ಯಾವುದೇ ವಾಹನಗಳು ಹೊರಬಾರದಂತೆ ತಡೆ ಹಿಡಿದ ಪ್ರತಿಭಟನಾಕಾರರು, ಬಸ್ ಡಿಪೋನಿಂದ ಬಸ್‌ಗಳು ಹೊರಗೆ ಬಿಡದಂತೆ ಎಚ್ಚರಿಕೆ ನೀಡಿದರು. ನಗರದಲ್ಲಿ ಯಾವುದೇ ಆಟೋ, ಟಿಪ್ಪರ್, ಟೆಂಪೊಗಳು ಬಸ್‌ಗಳು ರಸ್ತೆಗೆ ಇಳಿಯಲಿಲ್ಲ, ಬಹುತೇಕ ಅಂಗಡಿ ಮುಂಗಟ್ಟು, ಹೋಟೆಲ್‌ಗಳು ಬಂದ್ ಆಗಿದ್ದವು.

ಬೇರೆ ಭಾಗದಿಂದ ನಗರಕ್ಕೆ ಬರುವಂತ ಸಾರಿಗೆ ಬಸ್ ಹಾಗೂ ಖಾಸಗಿ ಬಸ್‌ಗಳು ನಗರದೊಳಗೆ ಬಾರದೆ ಹೊರ ಭಾಗದಲ್ಲಿ ಪ್ರಯಾಣಿಕರನ್ನು ಇಳಿಸಿ ಪ್ರಯಾಣ ಮುಂದುವರಿಸಿದವು. ಇದರಿಂದಾಗಿ ಪ್ರಯಾಣಿಕರು, ಸಾರ್ವಜನಿಕರು ನಡೆದುಕೊಂಡೇ ಹೋಗಬೇಕಾಯಿತು. ಬಿಗಿ ಪೊಲೀಸ್‌ ಬಂದೋಬಸ್ತ್‌

ಪೊಲೀಸ್ ಬಿಗಿ ಬಂದೋ ಬಸ್ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ವಾಹನಗಳು ನಗರದ ಎಲ್ಲ ರಸ್ತೆಗಳಲ್ಲಿ ಸಂಚರಿಸುತ್ತಾ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಕಾಪಾಡುವಂತೆ ಪ್ರತಿಭಟನಕಾರರ ಗುಂಪುಗಳಿಗೆ ಸೂಚಿಸುತ್ತಿದ್ದರು. ಪ್ರತಿಭಟನಾಕಾರರು ದ್ವಿಚಕ್ರವಾಹನಗಳಲ್ಲಿ ನಗರದಲ್ಲಿ ಸಂಚರಿಸಿ ಅಲ್ಲಲ್ಲಿ ತೆರೆದಿದ್ದ ಸಣ್ಣಪುಟ್ಟ ಅಂಗಡಿಗಳನ್ನು ಬಂದ್ ಮಾಡಲು ಸೂಚಿಸಿದರು.

ಬಸ್‌ ನಿಲ್ದಾಣ ಖಾಲಿ ಖಾಲಿ

ಬಸ್ ಸಿಗದೆ ವಿಶೇಷಚೇತನರು, ಹೂ ವ್ಯಾಪಾರಿಗಳು ಪರದಾಡುವಂತಾಯಿತು. ಬಸ್ ಇಲ್ಲದೆ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ನಿಂತು ಕಾಯುತ್ತಿರುವ ವ್ಯಕ್ತಿ ಮಹಿಳೆಯರು, ವಿದ್ಯಾರ್ಥಿಗಳಿಗೂ ಇದೇ ಪರಿಸ್ಥಿತಿ ಎದುರಾಯಿತು. ರಸ್ತೆಗೆ ಅಡ್ಡಲಾಗಿ ಬೈಕ್ ನಿಲ್ಲಿಸಿದ ಪ್ರತಿಭಟನಾಕಾರರು ಬಸ್ ನಿಲ್ದಾಣ ಖಾಲಿ, ಖಾಲಿಯಾಗಿತ್ತು, ಆಟೋಗಳಿಲ್ಲ, ಶಾಲೆಗಳಿಲ್ಲದೆ ವಿದ್ಯಾರ್ಥಿಗಳು ವಾಪಸಾಗಬೇಕಾಯಿತು. ಇನ್ನೂ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ಸ್ವಯಂ ಪ್ರೇರಿತ ಬಂದ್‌

ಪ್ರಗತಿಪರ ಸಂಘಟನೆಗಳು ಹಲವು ದಿನಗಳ ಹಿಂದಿನಿಂದ ಜ೩ರ ಬಂದ್‌ಗೆ ಕರೆ ನೀಡಿ ಪ್ರಚಾರ ಮಾಡಿದ್ದವು. ಗುರುವಾರ ನಗರದಲ್ಲಿ ಬೈಕ್ ರ್‍ಯಾಲಿ ಮೂಲಕ ಸಾರ್ವಜನಿಕರಿಗೆ ಶುಕ್ರವಾರ ಕೋಲಾರ ನಗರ ಬಂದ್ ಬಗ್ಗೆ ಕರೆ ನೀಡಿ ಪ್ರಚಾರ ಮಾಡಿದ್ಗ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಾರಿಗಳು, ಹೋಟೆಲ್, ಸಿನಿಮಾ ಮಂದಿರಗಳು, ಶಾಲಾ, ಕಾಲೇಜುಗಳು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದ ಹಿನ್ನೆಲೆಯಲ್ಲಿ ಕೋಲಾರ ಬಂದ್ ಬಹುತೇಕ ಯಶಸ್ವಿಯಾಯಿತು.ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಚಂದ್ರಮೌಳಿ, ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ವರದೇನಹಳ್ಳಿ ವೆಂಕಟೇಶ್, ಜಯದೇವ್, ಮಾರ್ಜೆನಹಳ್ಳಿ ಬಾಬು, ನರಸಾಪುರ ನಾರಾಯಣಸ್ವಾಮಿ, ಪಂಡಿತ್ ಮುನಿವೆಂಕಟಪ್ಪ, ಪಿ ಸಿ ಕೃಷ್ಣಪ್ಪ, ಚೇತನ್ ಬಾಬು, ಜಯದೇವ್, ದಲಿತ ನಾರಾಯಣಸ್ವಾಮಿ, ಶ್ರೀರಂಗನ್, ರಾಮಯ್ಯ ಮತ್ತಿತರರು ಇದ್ದರು.