ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ, ಹಾವೇರಿಸರ್ಕಾರಿ ಶಾಲೆಗಳಲ್ಲೇ ಎಲ್‌ಕೆಜಿ, ಯುಕೆಜಿ ಶಿಕ್ಷಣ ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ರಾಜ್ಯಾದ್ಯಂತ ಪೋಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ 6,469 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಆರಂಭಗೊಂಡಿದ್ದು, ಈಗಾಗಲೇ 1,06,676 ಮಕ್ಕಳು ದಾಖಲಾತಿ ಪಡೆದಿದ್ದಾರೆ.
ಗ್ರಾಮೀಣ ಪ್ರದೇಶಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಆರಂಭಿಕ ಹಂತದಲ್ಲೇ ಒದಗಿಸುವ ಉದ್ದೇಶದಿಂದ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲಾಗಿದೆ. ಕಳೆದ ಸಾಲಿನಲ್ಲೇ ಕೆಲವು ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭಿಸಲಾಗಿತ್ತು. ಅದಕ್ಕೆ ಪೋಷಕರಿಂದ ಉತ್ತಮ ಸ್ಪಂದನೆ ಸಿಕ್ಕ ಹಿನ್ನೆಲೆಯಲ್ಲಿ ಯೋಜನೆಯನ್ನು ಸರ್ಕಾರ ವಿಸ್ತರಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷ 6469 ಶಾಲೆಗಳಲ್ಲಿ ಕೆಜಿ ತರಗತಿಗಳನ್ನು ಆರಂಭಿಸಲಾಗಿದೆ. ಮಕ್ಕಳ ಸ್ನೇಹಿ ಕಲಿಕಾ ವಾತಾವರಣ, ಉಚಿತ ಪಠ್ಯಸಾಮಗ್ರಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳು ಪೋಷಕರನ್ನು ಸೆಳೆಯುತ್ತಿವೆ.ಶಿಕ್ಷಣ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಎಲ್‌ಕೆಜಿಗೆ 56,239 ಹಾಗೂ ಯುಕೆಜಿಗೆ 50,437 ಮಕ್ಕಳು ಪ್ರವೇಶ ಪಡೆದಿದ್ದಾರೆ. ಇನ್ನೂ ದಾಖಲಾತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಮಕ್ಕಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಹೊಂದಲಾಗಿದೆ.
ಇದುವರೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಲಭ್ಯವಾಗುತ್ತಿದ್ದ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಈಗ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲೂ ಸಿಗುತ್ತಿರುವುದರಿಂದ ಅನೇಕ ಪೋಷಕರು ಆಸಕ್ತಿ ತೋರಿಸುತ್ತಿದ್ದಾರೆ. ಅಂಗನವಾಡಿಗಳ ಬದಲಾಗಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣವನ್ನು ಪೂರ್ವ ಪ್ರಾಥಮಿಕ ತರಗತಿ ಮಕ್ಕಳಿಗೆ ನೀಡುತ್ತಿರುವುದರಿಂದ ಪೋಷಕರು ಆಕರ್ಷಿತರಾಗಿದ್ದಾರೆ. ಇದರಿಂದ ಪೂರ್ವ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿಯೂ ಸರ್ಕಾರಿ ಶಾಲೆಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದಿರುವುದು ಗಮನಾರ್ಹ ಅಂಶವಾಗಿದೆ.
ದ್ವಿಭಾಷಾ ಮಾಧ್ಯಮದ ಶಿಕ್ಷಣ: ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ದ್ವಿಭಾಷಾ ಮಾಧ್ಯಮದಲ್ಲಿ (ಕನ್ನಡ ಮತ್ತು ಆಂಗ್ಲ) ನಡೆಸಲಾಗುತ್ತಿದೆ. ಇದರಿಂದ ಮಕ್ಕಳು ಆರಂಭದಿಂದಲೇ ಇಂಗ್ಲಿಷ್ ಭಾಷೆಯನ್ನೂ ಸುಲಭವಾಗಿ ಕಲಿಯುತ್ತಿದ್ದಾರೆ. ಪ್ರವೇಶ ಪಡೆದ ಮಕ್ಕಳಿಗೆ ಉಚಿತವಾಗಿ ಅಭ್ಯಾಸ ಪುಸ್ತಕಗಳು ಮತ್ತು ಆಕರ್ಷಕ ಕಲಿಕಾ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ. ಈ ಮಕ್ಕಳಿಗೂ ಬಿಸಿಯೂಟ, ಹಾಲು, ಮೊಟ್ಟೆ ಅಥವಾ ಬಾಳೆಹಣ್ಣು ನೀಡುವ ಯೋಜನೆ ಜಾರಿಗೆ ತಂದಿರುವುದು ಪೋಷಕರನ್ನು ಮತ್ತಷ್ಟು ಆಕರ್ಷಿಸಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ತರಗತಿಗಳು ನಡೆಯುವುದರಿಂದ ಗ್ರಾಮೀಣ ಕೃಷಿ ಕಾರ್ಮಿಕ ಪೋಷಕರಿಗೆ ಅನುಕೂಲವಾಗಿದೆ.
ಮಕ್ಕಳು ಎಲ್‌ಕೆಜಿ, ಯುಕೆಜಿಗೆ ಸರ್ಕಾರಿ ಶಾಲೆಗೇ ಬರುವುದರಿಂದ ಮುಂದೆ ಒಂದನೇ ತರಗತಿಗೂ ಅದೇ ಶಾಲೆಯಲ್ಲಿ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ. ಇದು ಸರ್ಕಾರಿ ಶಾಲೆಗಳು ಮುಚ್ಚುವುದನ್ನು ತಪ್ಪಿಸುತ್ತದೆ ಎಂಬುದು ಉದ್ದೇಶವಾಗಿದೆ.ಕಲಬುರಗಿ ಜಿಲ್ಲೆಯಲ್ಲಿ ಅತ್ಯಧಿಕ 536 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಶುರು ಮಾಡಲಾಗಿದೆ. ಹಾವೇರಿ ಜಿಲ್ಲೆಯ 190 ಶಾಲೆಗಳಲ್ಲಿ ಕೆಜಿ ತರಗತಿ ಆರಂಭವಾಗಿದ್ದು, ಎಲ್‌ಕೆಜಿಗೆ 3716 ಹಾಗೂ ಯುಕೆಜಿಗೆ 2563 ಸೇರಿದಂತೆ 6279 ಮಕ್ಕಳು ಪ್ರವೇಶಾತಿ ಪಡೆದಿದ್ದಾರೆ. ದಾಖಲಾತಿ ಸಂಖ್ಯೆ ಪ್ರಕಾರ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಅತಿಹೆಚ್ಚು 7590 ಮಕ್ಕಳು ದಾಖಲಾತಿ ಪಡೆದಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇಬ್ಬರು ಶಿಕ್ಷಕರು ಮತ್ತು ಒಬ್ಬರು ಆಯಾರನ್ನು ಗೌರವಧನದ ಆಧಾರದ ಮೇಲೆ ನೇಮಿಸಿಕೊಳ್ಳಲು ಸಂಬಂಧಪಟ್ಟ ಶಾಲಾ ಮುಖ್ಯಸ್ಥರಿಗೇ ಜವಾಬ್ದಾರಿ ನೀಡಲಾಗಿದೆ. ತಿಂಗಳಾಂತ್ಯದೊಳಗೆ ಇನ್ನೂ ಹೆಚ್ಚಿನ ಮಕ್ಕಳು ಪ್ರವೇಶ ಪಡೆಯುವ ನಿರೀಕ್ಷೆಯಿದೆ ಎಂದು ಹಾವೇರಿ ಡಿಡಿಪಿಐ ಮೋಹನ ದಂಡಿನ