ಪಂಚ ಗ್ಯಾರಂಟಿ ಯೋಜನೆಗಳ ಸಹಾಯದಿಂದ ಇಂದು ಮಹಿಳೆಯರು, ಬಡವರು ಸ್ವಂತ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಪ್ರತಿ ಅರ್ಹ ಫಲಾನುಭವಿಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವುದು ಇಲಾಖೆಗಳ ಕರ್ತವ್ಯವಾಗಿದೆ.

ಧಾರವಾಡ:

ಜಿಲ್ಲೆಯಲ್ಲಿ ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ದೊರೆತ್ತಿದ್ದು ನಿತ್ಯ ಸಾವಿರಕ್ಕೂ ಅಧಿಕ ಪ್ರಯಾಣಿಕರು ಯೋಜನೆ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.

ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆಗಳ ಸಹಾಯದಿಂದ ಇಂದು ಮಹಿಳೆಯರು, ಬಡವರು ಸ್ವಂತ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಪ್ರತಿ ಅರ್ಹ ಫಲಾನುಭವಿಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವುದು ಇಲಾಖೆಗಳ ಕರ್ತವ್ಯವಾಗಿದೆ ಎಂದರು.

ಕ್ಷೇತ್ರಮಟ್ಟದಲ್ಲಿ ಯೋಜನೆ ತಲುಪಿಸುವ ಅಧಿಕಾರಿ, ಸಿಬ್ಬಂದಿಗಳು ತೋರುವ ವರ್ತನೆ ಮತ್ತು ಸೌಜನ್ಯತೆಗಳು ಯೋಜನೆಗೆ ಯಶಸ್ಸನ್ನು ತಂದು ಕೊಡುತ್ತದೆ. ಮಹಿಳಾ ಪ್ರಯಾಣಿಕರು ಮತ್ತು ವಿದ್ಯಾರ್ಥಿನೀಯರು ಸೇರಿದಂತೆ ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ನಿತ್ಯ ಧಾರವಾಡ ಹಾಗೂ ಹುಬ್ಬಳ್ಳಿಯಿಂದ ಕಲಘಟಗಿ ತಾಲೂಕಿನ ದಾಸ್ತಿಕೊಪ್ಪಕ್ಕೆ ಪ್ರಯಾಣಿಸುತ್ತಿದ್ದು ಕಲಘಟಗಿಗೆ ಬರುವ ತಡೆರಹಿತ ಬಸ್‌ಗಳಿಗೆ ನಿಲುಗಡೆ ನೀಡಲು ಕ್ರಮವಹಿಸಬೇಕು. ಜತೆಗೆ ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು, ಧಾರವಾಡ ಜಿಲ್ಲೆಗೆ ಹೆಚ್ಚುವರಿ ಬಸ್‌ಗಳ ಅವಶ್ಯಕತೆ ಇದೆ ಹಾಗೂ ಜನಸಾಮಾನ್ಯರಿಗೆ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಬಸ್‌ಗಳನ್ನು ಸರಿಯಾದ ಸಮಯಕ್ಕೆ ಷೆಡ್ಯೂಲ್‌ ನಿರ್ಮಿಸಬೇಕು ಎಂದು ಸೂಚಿಸಿದರು.

ಯುವ ನಿಧಿ ಫಲಾನುಭವಿಗಳಿಗೆ ಯುವನಿಧಿ ಪ್ಲಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ಕಿಲ್ ಇಕೋ ಸಿಸ್ಟಮ್‌ನಲ್ಲಿ ಅವರಿಗೆ ತರಬೇತಿ ನೀಡಲಾಗುತ್ತದೆ. ಒಟ್ಟು ೧೩ ಸಂಸ್ಥೆಗಳು ಕೌಶಲ್ಯ ಅಭಿವೃದ್ಧಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರು.

ಯೋಜನೆಗಳ ಪ್ರಗತಿ:

ಯುವನಿಧಿ ಯೋಜನೆಯಡಿ ಈ ವರೆಗೆ ಒಟ್ಟು ೧೦,೦೧೯ ಅರ್ಜಿಗಳು ಸ್ವೀಕೃತವಾಗಿದ್ದು, ಡಿಬಿಟಿ ಮೂಲಕ ೭,೯೨೦ ಫಲಾನುಭವಿಗಳಿಗೆ ಒಟ್ಟು ₹ ೧೯.೯೫ ಕೋಟಿ ಸಹಾಯಧನ ಪಡೆದಿದ್ದಾರೆ. ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಒಟ್ಟು ೫೩,೦೦,೪೧,೦೪೨ ಮಹಿಳೆಯರು ಪ್ರಯಾಣಿಸಿದ್ದು ಸರ್ಕಾರದಿಂದ ₹ ೧೩೨೨.೬೯ ಕೋಟಿ ಬಿಡುಗಡೆಯಾಗಿದೆ. ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಗೆ ಒಟ್ಟು ೫,೧೮,೭೧೦ ಫಲಾನುಭವಿಗಳಿಗೆ ಒಟ್ಟು ₹ ೬೧೫೭೦.೨೫ ಲಕ್ಷ, ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ೪,೦೪,೮೪೮ ಫಲಾನುಭವಿಗಳಿಗೆ ₹ ೧೬೬೩.೮೭ ಕೋಟಿ, ಅನ್ನಭಾಗ್ಯ ಯೋಜನೆಯಡಿ ೩,೬೨,೫೧೬ ಫಲಾನುಭವಿಗಳಿಗೆ ₹ ೩೫೮.೨೯ ಲಕ್ಷ ವೆಚ್ಚ ಮಾಡಲಾಗಿದೆ ಎಂದು ಪಾಟೀಲ ಮಾಹಿತಿ ನೀಡಿದರು.

ಈ ವೇಳೆ ಜಿಪಂ ಸಿಇಒ ಭುವನೇಶ ಪಾಟೀಲ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮುರಗಯ್ಯ ವಿರಕ್ತಮಠ, ರೇಹನ್ ರಝಾ ಐನಾಪೂರಿ, ರತ್ನಾ ತೇಗೂರಮಠ, ಸುಧೀರ ಎಸ್. ಬೋಳಾರ ಇದ್ದರು.