ಮಂಗಳೂರಿನಲ್ಲಿ ‘ಸಾವಯವ ಸಂತೆ’ಗೆ ಉತ್ತಮ ಪ್ರತಿಕ್ರಿಯೆ

| Published : Feb 02 2025, 11:49 PM IST

ಸಾರಾಂಶ

ಇತ್ತೀಚೆಗೆ ನಗರದ ಸಂಘನಿಕೇತನದಲ್ಲಿ ನಡೆದ ಸಾವಯವ ಗೆಡ್ಡೆ- ಗೆಣಸು- ಸೊಪ್ಪಿನ ಮೇಳದ ಯಶಸ್ಸಿನ ಬಳಿಕ ಈ ಸಾವಯವ ಸಂತೆಗೆ ಸಾವಯವ ಕೃಷಿಕ ಗ್ರಾಹಕ ಬಳಗ ಕೈ ಹಾಕಿದೆ. ರಾಜ್ಯದ ವಿವಿಧೆಡೆಯ ಸಾವಯವ ರೈತರು ತಮ್ಮ ಉತ್ಪನ್ನಗಳನ್ನು ತಂದು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಹಣ್ಣು, ತರಕಾರಿ, ಸೊಪ್ಪುಗಳೂ ರಾಸಾಯನಿಕವಾಗಿರುವ ಕಾಲಘಟ್ಟದಲ್ಲಿ ‘ವಿಷಮುಕ್ತ ಅನ್ನದ ಬಟ್ಟಲು’ ಉದ್ದೇಶದಿಂದ ಸಾವಯವ ಕೃಷಿಕ ಗ್ರಾಹಕ ಬಳಗ ನೇತೃತ್ವದಲ್ಲಿ ‘ಸಾವಯವ ಸಂತೆ’ ನಗರದ ನಂತೂರು ಶ್ರೀ ಭಾರತಿ ಕಾಲೇಜು ಆವರಣದಲ್ಲಿ ಶನಿವಾರ ಆರಂಭಗೊಂಡಿದೆ. ಪ್ರತಿ ತಿಂಗಳ ಮೊದಲ ಶನಿವಾರ ಮತ್ತು ಭಾನುವಾರ ಇಲ್ಲಿ ಸಾವಯವ ಸಂತೆ ನಡೆಯಲಿದೆ.

ಇತ್ತೀಚೆಗೆ ನಗರದ ಸಂಘನಿಕೇತನದಲ್ಲಿ ನಡೆದ ಸಾವಯವ ಗೆಡ್ಡೆ- ಗೆಣಸು- ಸೊಪ್ಪಿನ ಮೇಳದ ಯಶಸ್ಸಿನ ಬಳಿಕ ಈ ಸಾವಯವ ಸಂತೆಗೆ ಸಾವಯವ ಕೃಷಿಕ ಗ್ರಾಹಕ ಬಳಗ ಕೈ ಹಾಕಿದೆ. ರಾಜ್ಯದ ವಿವಿಧೆಡೆಯ ಸಾವಯವ ರೈತರು ತಮ್ಮ ಉತ್ಪನ್ನಗಳನ್ನು ತಂದು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ.

ನೆಲ, ಜಲ, ಗೋರಕ್ಷಣೆಯಾಗಲಿ: ಸಾವಯವ ಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಕಡೆಗೋಳಿ ರಾಧಾಸುರಭಿ ಗೋಮಂದಿರದ ಶ್ರೀ ಭಕ್ತಿಭೂಷಣ್‌, ನೆಲ, ಜಲ, ಗೋವುಗಳ ರಕ್ಷಣೆ ಮಾಡದಿದ್ದರೆ ಮನುಷ್ಯರಿಗೆ ಉಳಿಗಾಲವಿಲ್ಲ. ಕಾಡು ನಳಿಸುತ್ತಿದ್ದು, ಭೂಮಿ ವಿಷಕಾರಿಯಾಗಿ, ಜಲ ಮಲಿನಗೊಂಡಿದೆ. ಇದೆಲ್ಲ ನಮ್ಮನ್ನು ವಿನಾಶದತ್ತ ತಳ್ಳುತ್ತಿದೆ. ಮರಳಿ ಸಾವಯವ ಕೃಷಿಯತ್ತ ಜನರು ಮುಖಮಾಡಬೇಕಿದೆ ಎಂದು ಕರೆ ನೀಡಿದರು.

ಉದ್ಯಮಿ ಬಸ್ತಿ ಪುರುಷೋತ್ತಮ ಶೆಣೈ, ಸಾವಯವ ಬಳಗ ಅಧ್ಯಕ್ಷ ಜಿ.ಆರ್‌. ಪ್ರಸಾದ್‌, ಗೌರವಾಧ್ಯಕ್ಷ ಅಡ್ಡೂರು ಕೃಷ್ಣರಾವ್‌, ಕಾರ್ಯದರ್ಶಿ ರತ್ನಾಕರ ಕುಳಾಯಿ, ಶರತ್‌ ಇದ್ದರು. ಟ್ರಸ್ಟಿ ರಾಮಚಂದ್ರ ಭಟ್‌ ಸ್ವಾಗತಿಸಿದರು. ದಯಾನಂದ್‌ ವಂದಿಸಿದರು.