ಉತ್ತಮ ಸೇವೆಗೆ ಗ್ರಾಹಕರ ಸ್ಪಂದನೆಯೂ ಅಗತ್ಯ: ಮೋಹನ್

| Published : Feb 06 2025, 12:19 AM IST

ಸಾರಾಂಶ

ನಾನು 40 ವರ್ಷಕ್ಕೂ ಮೇಲ್ಪಟ್ಟು ಈ ಬ್ಯಾಂಕಿನ ಗ್ರಾಹಕನಾಗಿ ವ್ಯವಹರಿಸುತ್ತಿದ್ದೇನೆ, ಬ್ಯಾಂಕಿನಲ್ಲಿ ಉತ್ತಮ ಸೇವೆ ಸಿಗುತ್ತಿದೆ, ನಗು ಮೊಗದಿಂದ ಎಲ್ಲರೂ ಸೇವೆ ನೀಡುತ್ತಾರೆ, ಮೋಹನ್ ರವರು ಗ್ರಾಹಕರೊಂದಿಗೆ ಒಳ್ಳೆಯ ವಿಶ್ವಾಸವನ್ನು ಇಟ್ಟುಕೊಂಡಿದ್ದರು, ಬಡ್ತಿ ಮೇಲೆ ವರ್ಗಾವಣೆಗೊಂಡಿರುವ ಅವರಿಗೆ ಮುಂದಿನ ದಿನಗಳಲ್ಲಿಯೂ ದೇವರು ಶ್ರೇಯಸ್ಸನ್ನು ನೀಡಲಿ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಗ್ರಾಹಕರಿಗೆ ಬ್ಯಾಂಕ್ ಉತ್ತಮ ಸೇವೆಯನ್ನು ನೀಡಿದೆ ಎಂದರೆ ಇದಕ್ಕೆ ಗ್ರಾಹಕರು ಉತ್ತಮ ಸ್ಪಂದನೆ ನೀಡಿರುವುದು ಕಾರಣ ಎಂದು ಹೊಯ್ಸಳೇಶ್ವರ ಕಾಲೇಜು ಮುಂಭಾಗ ಇರುವ ಕರ್ನಾಟಕ ಬ್ಯಾಂಕ್ ಸ್ಪೆಷಲ್ ಅಸಿಸ್ಟೆಂಟ್ ಮೋಹನ್ ಅಭಿಪ್ರಾಯಪಟ್ಟರು

ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಬ್ಯಾಂಕಿನ ಹಿರಿಯ ಗ್ರಾಹಕರ ವೇದಿಕೆಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಬ್ಯಾಂಕಿನಲ್ಲಿ ನಾನು ಸೇವೆ ಸಲ್ಲಿಸಿದ ಅವಧಿಯಲ್ಲಿ ನೀವು ನೀಡಿರುವ ಪ್ರೋತ್ಸಾಹ ನನ್ನ ಯಶಸ್ಸಿಗೆ ಕಾರಣವಾಗಿದೆ, ನಾನು ನಿಮಗೆ ಕೃತಜ್ಞನಾಗಿದ್ದೇನೆ ಎಂದು ತಿಳಿಸಿದರು.

ಹಿರಿಯ ಗ್ರಾಹಕರಾದ ಚಂದ್ರಣ್ಣ ಮಾತನಾಡಿ, ನಾನು 40 ವರ್ಷಕ್ಕೂ ಮೇಲ್ಪಟ್ಟು ಈ ಬ್ಯಾಂಕಿನ ಗ್ರಾಹಕನಾಗಿ ವ್ಯವಹರಿಸುತ್ತಿದ್ದೇನೆ, ಬ್ಯಾಂಕಿನಲ್ಲಿ ಉತ್ತಮ ಸೇವೆ ಸಿಗುತ್ತಿದೆ, ನಗು ಮೊಗದಿಂದ ಎಲ್ಲರೂ ಸೇವೆ ನೀಡುತ್ತಾರೆ, ಮೋಹನ್ ರವರು ಗ್ರಾಹಕರೊಂದಿಗೆ ಒಳ್ಳೆಯ ವಿಶ್ವಾಸವನ್ನು ಇಟ್ಟುಕೊಂಡಿದ್ದರು, ಬಡ್ತಿ ಮೇಲೆ ವರ್ಗಾವಣೆಗೊಂಡಿರುವ ಅವರಿಗೆ ಮುಂದಿನ ದಿನಗಳಲ್ಲಿಯೂ ದೇವರು ಶ್ರೇಯಸ್ಸನ್ನು ನೀಡಲಿ ಎಂದು ಹಾರೈಸಿದರು.

ಐ. ಆರ್. ಮಠ್ ಮಾತನಾಡಿ, ಈ ಬ್ಯಾಂಕಿನ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಯಲ್ಲಿ ಮಾನವೀಯತೆ ಇದೆ, ನನ್ನ ಪತ್ನಿ ದೈವಾಧೀನರಾದಾಗ ಇಡೀ ಬ್ಯಾಂಕ್ ಸಿಬ್ಬಂದಿ ಬಂದು ಸಂತಾಪ ವ್ಯಕ್ತಪಡಿಸಿದ್ದರು. ಒಬ್ಬ ಗ್ರಾಹಕನ ದುಃಖದಲ್ಲಿಯೂ ಅವರು ಭಾಗಿಯಾದದ್ದು ನಾನು ಜೀವಮಾನದಲ್ಲಿ ಮರೆಯುವಂತಿಲ್ಲ, ಮೋಹನ್ ರ ಹಸನ್ಮುಖಿ ವ್ಯಕ್ತಿತ್ವ ಹಾಗೂ ಸೇವೆ ಶ್ಲಾಘನೀಯ ಎಂದರು.

ನಿವೃತ್ತ ಪ್ರಾಂಶುಪಾಲ ಬಸವರಾಜ್ ಮಾತನಾಡಿ, ನಾನು 10 ವರ್ಷಗಳಿಂದ ಬ್ಯಾಂಕಿನ ಗ್ರಾಹಕನಾಗಿದ್ದೇನೆ. ನಾವು ಬ್ಯಾಂಕಿಗೆ ಬಂದರೆ ಇದು ಬ್ಯಾಂಕ್ ಎನ್ನಿಸುವುದಿಲ್ಲ, ಇಲ್ಲಿನ ಸಿಬ್ಬಂದಿ ಒಂದು ಕುಟುಂಬದಂತೆ ಕೆಲಸ ನಿರ್ವಹಿಸುತ್ತಾರೆ, ಈ ಬ್ಯಾಂಕಿನಲ್ಲಿ ವ್ಯವಹರಿಸುವುದೇ ಒಂದು ಹೆಮ್ಮೆ ಎಂದರು.

ಕಾರ್ಯಕ್ರಮದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಶ್ರೀಧರ್, ಶ್ರೀರಾಮ್ ಜಮದಗ್ನಿ, ಪತ್ರ ಬರಹಗಾರ ಚಂದ್ರಶೇಖರ್, ಎಲ್ಐಸಿ ಪರಮೇಶ್ ,ಬಿ.ಜಿ. ಶಿವಕುಮಾರ್, ಜಯದೇವಪ್ಪ, ಚೆನ್ನ ರುದ್ರಯ್ಯ ಉಪಸ್ಥಿತರಿದ್ದರು.