ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಒಳಿತು ಕೆಡಕುಗಳ ಬಗ್ಗೆ ಅರಿತು ಮಕ್ಕಳನ್ನು ಸರಿದಾರಿಗೆ ಕರೆದೊಯ್ಯುವ ಕೆಲಸವನ್ನು ತಾಯಂದಿರು ಮಾಡಬೇಕಿದೆ, ತಾಯಿ ವಿದ್ಯಾವಂತ, ಪ್ರಜ್ಞಾವಂತಳಾದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ನಗರದಲ್ಲಿ ಭಾನುವಾರ ನಡೆದ ‘ನಮ್ಮ ಕರಾವಳಿ ಉತ್ಸವ’ದಲ್ಲಿ ಮಾತನಾಡಿದ ಗಣ್ಯರು ಅಭಿಪ್ರಾಯಪಟ್ಟರು.ಭಾನುವಾರ ಬೆಂಗಳೂರಿನ ಜೆ.ಪಿ.ನಗರದ ಆರ್‌ಬಿಐ ಲೇಔಟ್ ಬಿಬಿಎಂಪಿ ಆಟದ ಮೈದಾನದಲ್ಲಿ ಕರಾವಳಿಗರ ಒಕ್ಕೂಟದಿಂದ ನಡೆದ ‘ನಮ್ಮ ಕರಾವಳಿ ಉತ್ಸವ’ ಉದ್ಘಾಟಿಸಿ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ ಡಾ। ಹರೀಶ್‌ಕುಮಾರ್, ಮೂಲ ಸೊಗಡನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಹಾಗೂ ಎಲ್ಲರನ್ನೂ ಒಳಗೊಳ್ಳುವ ಆಚರಣೆಗಳನ್ನು ಪ್ರೋತ್ಸಾಹಿಸಲು ಮಹಾನಗರಗಳಲ್ಲಿ ಪ್ರಾದೇಶಿಕ ಉತ್ಸವಗಳು ನಡೆಯಬೇಕು. ಔದ್ಯೋಗಿಕ ಕಾರಣಕ್ಕೆ ಬೆಂಗಳೂರಿನಂತಹ ನಗರಕ್ಕೆ ಬಂದು ನೆಲೆಸಿರುವ ಜನ ಮುಂದಿನ ಪೀಳಿಗೆಗೆ ತಮ್ಮ ಮೂಲ ಊರಿನ ಸಂಸ್ಕೃತಿಯನ್ನು ವರ್ಗಾಯಿಸುವ ದೃಷ್ಟಿಯಿಂದ ಇಂತಹ ಉತ್ಸವ ಹೆಚ್ಚು ಅನುಕೂಲಕರ. ಸಮಾಜ ಒಡೆಯುವ ಮಾತುಗಳೇ ಹೆಚ್ಚಾಗಿರುವ ಈ ಹೊತ್ತಿನಲ್ಲಿ ಉತ್ಸವಗಳು ಒಳಗೊಳ್ಳುವ, ಎಲ್ಲ ವರ್ಗದ ಜನರನ್ನು ಸೇರಿಸುವ ಕಾರ್ಯಕ್ರಮ ಆಗಬೇಕು ಎಂದರು.
ನಿವೃತ್ತ ಪೊಲೀಸ್ ಅಧಿಕಾರಿ ಡಾ। ಜಿ.ಎ.ಬಾವಾ, ರಾಜಕೀಯ ಕಾರಣಕ್ಕೆ ಕರಾವಳಿಯಲ್ಲಿ ವೈಮನಸ್ಸು ಉಂಟಾಗಲು ಅವಕಾಶ ಕೊಡಬಾರದು. ಹಿಂದಿನಿಂದ ನಮ್ಮಲ್ಲಿರುವ ಸೌಹಾರ್ದತೆಯನ್ನು ಹೆಚ್ಚು ಪೋಷಿಸುವ ಅಗತ್ಯವಿದೆ. ಸಮಾಜ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ದೊಡ್ಡದು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕರಾವಳಿ ಒಕ್ಕೂಟದ ಗೌರವಾಧ್ಯಕ್ಷ ಡಾ। ಜಿ.ಕೆ.ಸುರೇಶ್, ಕರಾವಳಿಯ ಜನ ತಮ್ಮೂರನ್ನು ಬಿಟ್ಟು ಬಂದಾಗ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಲಹೆ ಸಹಕಾರ, ನೆರವು ನೀಡುವ ನಿಟ್ಟಿನಲ್ಲಿ ಸಂಘ ಮುಂದಿನ ದಿನಗಳಲ್ಲಿ ಕೆಲಸ ಮಾಡಲಿದೆ ಎಂದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ। ವೈ.ನವೀನ್ ಭಟ್, ಡಿಸಿಪಿ ಅಬ್ದುಲ್ ಅಹದ್, ಬಿಎಂಟಿಎಫ್ ಜಂಟಿ ಆಯುಕ್ತೆ ಗಾಯತ್ರಿ ನಾಯಕ್, ಕರಾವಳಿ ಒಕ್ಕೂಟದ ಅಧ್ಯಕ್ಷ ಕೆ.ಸುಬ್ರಾಯ ಭಟ್, ಉದ್ಯಮಿ ದಿನೇಶ ವೈದ್ಯ ಅಂಪಾರು, ಕಾರ್ಯದರ್ಶಿ ಚರಣ್ ಬೈಂದೂರು ಇದ್ದರು.ಕರಾವಳಿಯ ಯಕ್ಷಗಾನ, ವಿಶೇಷ ಅಡುಗೆ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.