ಸಾರಾಂಶ
ಬದ್ಧತೆಯಿಂದ ಕೆಲಸ ಮಾಡುವ ಉತ್ತಮ ಶಿಕ್ಷಕರನ್ನು ಸಮಾಜ ಖಂಡಿತವಾಗಿಯೂ ಗುರುತಿಸಿ ಗೌರವಿಸುತ್ತದೆ ಎಂದು ಮೈಸೂರಿನ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಡಿ. ರವಿಕುಮಾರ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಬದ್ಧತೆಯಿಂದ ಕೆಲಸ ಮಾಡುವ ಉತ್ತಮ ಶಿಕ್ಷಕರನ್ನು ಸಮಾಜ ಖಂಡಿತವಾಗಿಯೂ ಗುರುತಿಸಿ ಗೌರವಿಸುತ್ತದೆ ಎಂದು ಮೈಸೂರಿನ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಡಿ. ರವಿಕುಮಾರ್ ಅಭಿಪ್ರಾಯಪಟ್ಟರು.ಪಟ್ಟಣದ ಸಾಹುಕಾರ್ ಚಿಕ್ಕಣ್ಣಗೌಡ ಸಭಾಂಗಣದಲ್ಲಿ ಡಾ.ಅ.ಮ.ಶ್ಯಾಮೇಶ್ ವಿದ್ಯಾರ್ಥಿಬಳಗ, ಪ್ರಗತಿ ಸೇವಾ ಟ್ರಸ್ಟ್, ಪಾಂಡವಪುರ ಹಾಗೂ ಅತ್ತಿಗುಪ್ಪೆ ಗೆಳೆಯರ ಬಳಗ ಆಶ್ರಯದಲ್ಲಿ ನಡೆದ ಡಾ. ಶ್ಯಾಮೇಶ್ ಅತ್ತಿಗುಪ್ಪೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಇಂದಿನ ಕಾಲಘಟ್ಟದಲ್ಲಿ ಶಿಕ್ಷಕರ ಜವಾಬ್ದಾರಿ ಬಹಳ ದೊಡ್ಡದು. ನಾಗರಿಕತೆ ಹಾಗೂ ತಂತ್ರಜ್ಞಾನ ಒಂದೆಡೆ ಮುಂದುವರೆಯುತ್ತಿದ್ದರೆ ಇನ್ನೊಂದೆಡೆ ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಹೀಗಾಗಿ ಪ್ರಸ್ತುತ ಸಮುದಾಯದ ಆಶಯಗಳಿಗೆ ಹಾಗೂ ತಮ್ಮ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುವ ಶಿಕ್ಷಕರು ಮಾತ್ರ ನಿಜವಾದ ಅರ್ಥದಲ್ಲಿ ಉತ್ತಮ ಶಿಕ್ಷಕರಾಗಿರುತ್ತಾರೆ ಎಂದರು.ಉತ್ತಮ ಶಿಕ್ಷಕರ ಸಾಲಿನಲ್ಲಿ ನಿಂತಿರುವ ಶ್ಯಾಮೇಶ್ ನಿಜಕ್ಕೂ ಆದರ್ಶ ಶಿಕ್ಷಕರು. ಅವರ ಹೆಸರಿನಲ್ಲಿ ಉತ್ತಮ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತಿರುವ ವಿದ್ಯಾರ್ಥಿಗಳ ಕಾರ್ಯವೂ ಅರ್ಥಪೂರ್ಣವಾಗಿದೆ ಎಂದರು.
ವಿಶ್ರಾಂತ ಪ್ರಾಂಶುಪಾಲ ಶಿ. ಕುಮಾರಸ್ವಾಮಿ ಮಾತನಾದರು. ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಆರ್.ಸಿ. ನಾಗೇಗೌಡ, ತಾಲೂಕಿನ ಅರೆಬೊಪ್ಪನಹಳ್ಳಿ ಶಾಲೆ ಸಹಶಿಕ್ಷಕಿ ಎಂ.ಎಲ್. ವಾಣಿ, ಶ್ರೀರಂಗಪಟ್ಟಣ ತಾಲೂಕಿನ ಬಸ್ತಿಪುರ ಶಾಲೆ ಸಹಶಿಕ್ಷಕ ಸೈಯದ್‌ಖಾನ್ ಹಾಗೂ ಮಂಡ್ಯ ಉತ್ತರ ವಲಯದ ದುದ್ದ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ರಾವುಳಯ್ಯ ಅವರಿಗೆ ಡಾ. ಶ್ಯಾಮೇಶ್ ಅತ್ತಿಗುಪ್ಪೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕಾರ್ಯಕ್ರಮದಲ್ಲಿ ಪ್ರಗತಿ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ನಾಗೇಶ್ ರಾಗಿಮುದ್ದನಹಳ್ಳಿ, ನಾಗರಾಜು, ಸಾಹಿತಿ ಮಾರೇನಹಳ್ಳಿ ಲೋಕೇಶ್, ಶ್ಯಾಮೇಶ್ ವಿದ್ಯಾರ್ಥಿ ಬಳಗದ ಎನ್.ಜಿ. ಸಾಗರ್, ಸೈಯದ್ ಮುಜಾಕೀರ್, ಮಲ್ಲಿಕಾರ್ಜುನ್, ಸಂತೋಷ, ಉದಯರವಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಸೋಮಶೇಖರ್, ಜಾನಪದ ಪರಿಷತ್ ಅಧ್ಯಕ್ಷ ಕತ್ತರಘಟ್ಟವಾಸು ಉಪಸ್ಥಿತರಿದ್ದರು.