ದುರ್ಯೋಧನ ಮನಸ್ಥಿತಿಯವರಿಗೆ ಒಳ್ಳೆಯ ಕೆಲಸಗಳು ಕಾಣುವುದಿಲ್ಲ-ಶಾಸಕ ಮಾನೆ

| Published : Nov 11 2025, 02:15 AM IST

ದುರ್ಯೋಧನ ಮನಸ್ಥಿತಿಯವರಿಗೆ ಒಳ್ಳೆಯ ಕೆಲಸಗಳು ಕಾಣುವುದಿಲ್ಲ-ಶಾಸಕ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ದುರ್ಯೋಧನ ಮನಸ್ಥಿತಿಯವರಿಗೆ ಒಳ್ಳೆಯ ಕೆಲಸಗಳು ಕಾಣುವುದಿಲ್ಲ, ಅಭಿವೃದ್ಧಿಗೆ ಆತಂಕ ಮಾಡುವುದೇ ಅವರ ಗುರಿ, ಅದಾವುದು ಹಾನಗಲ್ಲ ತಾಲೂಕಿನ ಅಭಿವೃದ್ಧಿಗೆ ಅಡ್ಡಿಯಾಗದಂತೆ ತಾಲೂಕಿನ ಹಿತಕ್ಕೆ ಬದ್ಧ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಹಾನಗಲ್ಲ: ದುರ್ಯೋಧನ ಮನಸ್ಥಿತಿಯವರಿಗೆ ಒಳ್ಳೆಯ ಕೆಲಸಗಳು ಕಾಣುವುದಿಲ್ಲ, ಅಭಿವೃದ್ಧಿಗೆ ಆತಂಕ ಮಾಡುವುದೇ ಅವರ ಗುರಿ, ಅದಾವುದು ಹಾನಗಲ್ಲ ತಾಲೂಕಿನ ಅಭಿವೃದ್ಧಿಗೆ ಅಡ್ಡಿಯಾಗದಂತೆ ತಾಲೂಕಿನ ಹಿತಕ್ಕೆ ಬದ್ಧ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು. ಸೋಮವಾರ ತಾಲೂಕಿನ ಹಳ್ಳಿಬೈಲ್ ಗ್ರಾಮವನ್ನು ನೂತನ ಪಾಂಡವಪುರ ಕಂದಾಯ ಗ್ರಾಮ ಎಂದು ಹೆಸರಿಸಿ, ಅಲ್ಲಿ 40-50 ವರ್ಷಗಳಿಂದ ಮನೆ ಕಟ್ಟಿಕೊಂಡು ಮನೆಯ ಹಕ್ಕಿನ ದಾಖಲೆ ಇಲ್ಲದವರಿಗೆ ಹಕ್ಕುಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಈ ಗ್ರಾಮದಲ್ಲಿ ಗ್ರಾಮಸ್ಥರು ವಾಸವಿದ್ದ ಮನೆಗಳ ತೆರವಿಗೆ ಆಗಾಗ ಬುಲ್ಡೋಜರ್ ಬಂದು ನಿಲ್ಲುತ್ತಿತ್ತು. ನಾಳೆ ಏನಾಗುತ್ತದೆಯೋ ಎನ್ನುವ ಆತಂಕದಲ್ಲಿಯೇ ದಿನದೂಡುವಂಥ ಸ್ಥಿತಿ ಇತ್ತು. ತಮ್ಮ ಮನೆಗಳನ್ನು ಉಳಿಸಿಕೊಳ್ಳಲು ಗ್ರಾಮಸ್ಥರು ಸಾಕಷ್ಟು ಹೋರಾಟ ನಡೆಸಿದ್ದರು. ಅಮರಣಾಂತ ಉಪವಾಸ ಸಹ ನಡೆಸಿದ್ದರು. ಗ್ರಾಮಸ್ಥರ ಹೋರಾಟ ಕೊನೆಗೂ ಫಲ ನೀಡಿದ್ದು ಇಂದು ಪಾಂಡವಪುರ ಹೆಸರಿನಲ್ಲಿ ನೂತನ ಕಂದಾಯ ಗ್ರಾಮ ರಚಿಸಿ ಎಲ್ಲ ಕುಟುಂಬಗಳಿಗೂ ಮನೆ ಮಾಲಿಕತ್ವದ ಹಕ್ಕುಪತ್ರ ವಿತರಿಸಲಾಗಿದ್ದು, ಗ್ರಾಮದ ಪ್ರತಿಯೊಂದು ಕುಟುಂಬಗಳೂ ಅತಂತ್ರದ ಕಡೆಯಿಂದ ಸ್ವತಂತ್ರದ ಕಡೆಗೆ ಬಂದಿವೆ. ಪಾಂಡವಪುರ ಮತ್ತು ಹಳ್ಳಿಬೈಲ್ ಗ್ರಾಮಗಳ 375 ಕ್ಕೂ ಹೆಚ್ಚು ಕುಟುಂಬಗಳು ಮನೆ ಮಾಲಿಕತ್ವ ಪಡೆಯುತ್ತಿದ್ದು, 20 ವರ್ಷದ ರಾಜಕಾರಣದ ಜೀವನದಲ್ಲಿ ಮನೆಗಳಿಗೆ ಮಾಲಿಕತ್ವ ದೊರಕಿಸಿದ ವಿಷಯ ಹೆಚ್ಚು ತೃಪ್ತಿ ತಂದುಕೊಟ್ಟಿದೆ ಎಂದರು.

ಪಾಂಡವರ ಈ ಪುಣ್ಯಭೂಮಿಯಲ್ಲಿ ಪ್ರತಿಯೊಂದು ಒಳ್ಳೆಯ ಕಾರ್ಯಗಳಿಗೂ ದುರ್ಯೋಧನನ ಮನಸ್ಥಿತಿಯವರು ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ಹಕ್ಕುಪತ್ರ ಕೊಡುವುದು ದೊಡ್ಡ ಸಾಧನೆಯೇನಲ್ಲ ಎನ್ನುವರಿಗೆ ಮನೆ ಮಾಲಿಕತ್ವ ಇಲ್ಲದ ಕುಟುಂಬಗಳ ಕಷ್ಟಗಳು ಅರಿವಿಗೆ ಬಂದಿಲ್ಲ ಎಂದು ಹರಿಹಾಯ್ದ ಅವರು, ತಾಲೂಕಿನಲ್ಲಿ ಆಡಳಿತವನ್ನು ಜನರ ಬಳಿಗೆ ಒಯ್ಯುವ ಕೆಲಸ ಮಾಡಲಾಗುತ್ತಿದೆ. ಭೂಸುರಕ್ಷಾದಡಿ 40 ಲಕ್ಷ ಪುಟಗಳ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. 220 ಕೋಟಿ ರು. ವೆಚ್ಚದ ನರೇಗಲ್, ಕೂಸನೂರು ಏತ ನೀರಾವರಿ ಯೋಜನೆಗೆ ಅನುಮೋದನೆ ಸಿಕ್ಕಿದೆ. ಧರ್ಮಾ ಕಾಲುವೆಯ ಪುನಶ್ಚೇತನಕ್ಕೆ 50 ಕೋಟಿ ರು. ಬಿಡುಗಡೆಯಾಗಿದೆ. 77 ಕೋಟಿ ರು. ವೆಚ್ಚದಲ್ಲಿ ನಾನಾ ಹೆದ್ದಾರಿ ಅಭಿವೃದ್ಧಿ ಪಡಿಸಲಾಗಿದೆ. 50 ಕೋಟಿ ರು. ಮುಖ್ಯಮಂತ್ರಿಗಳ ವಿಶೇಷ ಅನುದಾನ ಲಭಿಸಿದೆ. ಮಳೆಯಿಂದ ಹಾನಿಗೀಡಾದ ರಸ್ತೆಗಳನ್ನು ದುರಸ್ತಿ ಪಡಿಸಲು ಸರ್ಕಾರದ ಗಮನ ಸೆಳೆಯಲಾಗಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ಗ್ರಾಮದ ವಿರಕ್ತಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ನಾನಾ ಸಮಸ್ಯೆ, ಹಲವು ವರ್ಷಗಳ ಹೋರಾಟ, ಸಂಕಟದ ಮಧ್ಯೆ ಶಾಸಕ ಶ್ರೀನಿವಾಸ ಮಾನೆ ಅವರ ಕಾಲದಲ್ಲಿ ಹಳ್ಳಿಬೈಲ್ ಗ್ರಾಮಸ್ಥರು ಎದುರಿಸುತ್ತಿದ್ದ ನರಕಯಾತನೆ ಕೊನೆಯಾಗಿದೆ. ಕೊಟ್ಟ ಮಾತನ್ನು ಶಾಸಕ ಮಾನೆ ಉಳಿಸಿಕೊಂಡಿದ್ದು ಗ್ರಾಮಸ್ಥರ ಮೊಗದಲ್ಲಿ ಹರ್ಷ ಮೂಡಿಸಿದ್ದಾರೆ. ಹಕ್ಕು, ಸೌಲಭ್ಯಗಳಿಂದ ವಂಚಿತರಾಗಿದ್ದ ಗ್ರಾಮಸ್ಥರೀಗ ನೆಮ್ಮದಿ ಕಂಡಿದ್ದಾರೆ ಎಂದರು. ತಾಲೂಕು ತಹಸೀಲ್ದಾರ್‌ ಎಸ್.ರೇಣುಕಾ ಮಾತನಾಡಿ, ಎರಡು ವರ್ಷಗಳ ನಿರಂತರ ಶ್ರಮದ ಫಲವಾಗಿ ಇಂದು ಜನ ಭಾಷೆಯಲ್ಲಿನ ವಡ್ಡರಗೇರಿ ಈಗ ಪಾಂಡವಪುರವಾಗಿ ಮನೆಗಳ ಹಕ್ಕು ಪತ್ರ ನೀಡುವಂತಾಗಿದೆ. ಅತಿ ಹೆಚ್ಚು ಪರಿಶ್ರಮದಿಂದ ದಾಖಲೆಗಳನ್ನು ಮಾಡಿ ನಿಮ್ಮ ಕೈಗೆ ಕೊಡುತ್ತಿದ್ದೇವೆ. ಇವನ್ನು ಜೋಪಾನವಗಿಟ್ಟುಕೊಳ್ಳಿ ಎಂದರು. ಕಿರವಾಡಿ ಗ್ರಾಪಂ ಅಧ್ಯಕ್ಷೆ ಪುಷ್ಪಾ ಹಿರೇಮಠ, ಉಪಾಧ್ಯಕ್ಷ ಮಾರುತಿ ಮೂಕನವರ, ಸದಸ್ಯರಾದ ನಿರಂಜನ ಪಾಟೀಲ, ಮಮತಾ ಕುಬಟೂರ, ಮಂಜಮ್ಮ ಹೊಳಿಯಣ್ಣನವರ, ಯಲ್ಲಪ್ಪ ಕಲ್ಲೇರ, ತಹಶೀಲ್ದಾರ್ ರೇಣುಕಾ ಎಸ್., ಉಷಾ ಮಾನೆ, ವಿಜಯಕುಮಾರ ದೊಡ್ಡಮನಿ, ಮಂಜು ಗೊರಣ್ಣನವರ, ಟಾಕನಗೌಡ ಪಾಟೀಲ, ಪುಟ್ಟಪ್ಪ ನರೇಗಲ್, ಕೊಟ್ರಪ್ಪ ಕುದರಿಸಿದ್ದನವರ, ಜಗದೀಶಗೌಡ ಪಾಟೀಲ, ಯಲ್ಲಪ್ಪ ಕಲ್ಲೇರ, ಸುನೀಲಗೌಡ ಪಾಟೀಲ, ಚಂದ್ರಪ್ಪ ಜಾಲಗಾರ, ಯಾಸೀರ್‌ಅರಾಫತ್ ಮಕಾನದಾರ, ಪ್ರಕಾಶ ವಡ್ಡರ, ಸಿದ್ದನಗೌಡ ಪಾಟೀಲ, ಹನುಮಂತಪ್ಪ ಮರಗಡಿ, ಪರಶುರಾಮ ಹೊಳಿಯಣ್ಣನವರ, ಸಿದ್ದರಾಮಗೌಡ ಸಿ.ಕೆ., ವೀರನಗೌಡ ಪಾಟೀಲ, ಮಧು ಪಾಣಿಗಟ್ಟಿ, ಚಂದ್ರಣ್ಣ ಗೂಳಿ, ಮತೀನ ಶಿರಬಡಗಿ, ವಸಂತ ವೆಂಕಟಾಪುರ , ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ಇದ್ದರು. ಇಲ್ಲಿನ ಸರ್ಕಾರಿ ಶಾಲೆಯ ವೈಷ್ಣವಿ, ಹರ್ಷಿತ, ಪ್ರಕೃತಿ ಮೊದಲಾದವರು ಪ್ರಾರ್ಥನೆ ಹಾಡಿದರು. ಶಿಕ್ಷಕಿ ಜ್ಯೋತಿ ಸುರಳೇಶ್ವರ ಕಾರ್ಯಕ್ರಮ ನಿರೂಪಿಸಿದರು.ಉಡಿ ತುಂಬಿದರು: ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರ ಧರ್ಮಪತ್ನಿ ಉಷಾ ಮಾನೆ ಅವರಿಗೆ ಸುಮಂಗಲೆಯರು ಉಡಿ ತುಂಬಿದ್ದು ಗಮನ ಸೆಳೆಯಿತು. ಇಡೀ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಪ್ರಮುಖ ಬೀದಿಗಳನ್ನು ತಳಿರು, ತೋರಣಗಳಿಂದ ಸಿಂಗರಿಸಲಾಗಿತ್ತು. ಪ್ರತಿಯೊಂದು ಮನೆಗಳ ಎದುರು ರಂಗೋಲಿ ಚಿತ್ತಾರ ಬಿಡಿಸಲಾಗಿತ್ತು. ಶ್ರೀನಿವಾಸ ಮಾನೆ ದಂಪತಿಗೆ ಆರತಿ ಬೆಳಗಿ ಗ್ರಾಮಸ್ಥರು ಹೊಸ ಗ್ರಾಮ ಪಾಂಡವಪುರಕ್ಕೆ ಸ್ವಾಗತಿಸಿದರು.