ಸಾರಾಂಶ
- ಡಾ.ಬಸವಪ್ರಭು ಶ್ರೀ ಅಭಿಮತ । ದಾವಣಗೆರೆ-ಚಿತ್ರದುರ್ಗ ಅಂತರ ಜಿಲ್ಲಾಮಟ್ಟದ ಯೋಗಾಸನ ಚಾಂಪಿಯನ್‌ಶಿಪ್ ಸ್ಪರ್ಧೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಉತ್ತಮ ಆಹಾರ, ಆಲೋಚನೆಗಳನ್ನು ಇಟ್ಟುಕೊಂಡಾಗ ಮಾತ್ರ ಆರೋಗ್ಯ ಚೆನ್ನಾಗಿರಲು ಸಾಧ್ಯ. ಸದೃಢ ಆರೋಗ್ಯ ಇದ್ದರೆ ಜೀವನದಲ್ಲಿ ಸಾಧನೆಯೂ ಸಾಧ್ಯ. ಆದ್ದರಿಂದ ಮಕ್ಕಳು ಮೊಬೈಲ್‌ಗಳನ್ನು ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳಿಗೆ ಮಾತ್ರ ಇತಿಮಿತಿಯಾಗಿ ಬಳಸಲಿ. ಯೋಗ, ನೃತ್ಯ, ಸಂಗೀತ ಕಲಿಕೆ, ಈಜು ಮುಂತಾದ ಆರೋಗ್ಯಕರ ಚಟುವಟಿಕೆಗಳನ್ನು ಕಲಿತು ಬದುಕನ್ನು ರೂಪಿಸಿಕೊಳ್ಳಬೇಕು ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ನುಡಿದರು.ನಗರದ ಎಸ್.ನಿಜಲಿಂಗಪ್ಪ ಬಡಾವಣೆಯ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ, ದಾವಣಗೆರೆ ಜಿಲ್ಲಾ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್, ಜಿಲ್ಲಾ ಯೋಗ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ ದಾವಣಗೆರೆ-ಚಿತ್ರದುರ್ಗ ಅಂತರ ಜಿಲ್ಲಾಮಟ್ಟದ ಯೋಗಾಸನ ಚಾಂಪಿಯನ್‌ಶಿಪ್ ಸ್ಪರ್ಧೆ-2025 ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಇಂದು ಕಷ್ಟಪಟ್ಟು ಹಣವನ್ನು ಸಂಪಾದನೆ ಮಾಡುತ್ತೇವೆ, ಶ್ರೀಮಂತರಾದ ಮೇಲೆ ದುಡಿದಿದ್ದ ಹಣ ಆರೋಗ್ಯ ಸಂಪಾದನೆ ಮಾಡಿಕೊಳ್ಳಲು ಖರ್ಚು ಮಾಡುತ್ತೇವೆ. ಹಣವೂ ಬೇಕು ಆರೋಗ್ಯವೂ ಬೇಕು. ಹಣಕ್ಕಿಂತ ಹೆಚ್ಚಿನ ಮೌಲ್ಯ ಆರೋಗ್ಯಕ್ಕೆ ಇದೆ ಎಂಬ ಸತ್ಯ ತಿಳಿದುಕೊಳ್ಳಬೇಕಾಗಿದೆ. ಫ್ಯಾನ್ ಕೆಳಗೆ, ಎಸಿ ರೂಮಿನಲ್ಲಿ ಕುಳಿತು ದೈಹಿಕ ಶ್ರಮವಿಲ್ಲದಂತಹ ಕಾಯಕ ಮಾಡುತ್ತಿದ್ದೇವೆ. ದೈಹಿಕ ಶ್ರಮ ಕಡಿಮೆಯಾದಂತೆ ಶರೀರ ಕಾಯಿಲೆಗಳ ಗೂಡಾಗುತ್ತದೆ. ಆದ್ದರಿಂದ ನಿತ್ಯ ಚಟುವಟಿಕೆಗಳಲ್ಲಿ ತೊಡಗಿ, ದೇಹ ದಂಡಿಸಿ, ಆರೋಗ್ಯ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.ದಾ-ಹ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಯೋಗಾಸನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಯೋಗಾಸನವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮೃದ್ಧಿ ಜೀವನ, ಶಾಂತಿ, ಸಮಾಧಾನ, ಚಟುವಟಿಕೆಗಳಿಂದ ಉಲ್ಲಾಸದ ಜೀವನ ಮಾಡಬೇಕೆಂದರೆ ಯೋಗಾಸನ ಅತ್ಯಗತ್ಯ. ಮಕ್ಕಳಾಗಲಿ, ಹಿರಿಯರಾಗಲಿ ನಿತ್ಯ ಯೋಗ ಮಾಡುವುದರಿಂದ ಇಡೀ ದಿನ ಚಟುವಟಿಕೆಯಿಂದ ಇರಲು ಸಾಧ್ಯ. ಶಾಲಾ- ಕಾಲೇಜುಗಳಲ್ಲಿಯೂ ಯೋಗಕಲೆ ಕಡ್ಡಾಯ ಆಗಬೇಕು ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ ಎಸ್. ಒಡೇನಪುರ ಮಾತನಾಡಿ, ಇದು ಕ್ರೀಡಾಪಟುಗಳಿಗೆ ಸ್ಪರ್ಧೆ ಎನಿಸುತ್ತಿಲ್ಲ. ಸಮಾಜಕ್ಕೆ ಒಂದು ಉತ್ತಮ ಸಂದೇಶ ಕೊಡುವಂತಹ ಕಾರ್ಯಕ್ರಮ ಎನಿಸಿದೆ. ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಂತಹ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ. ಯೋಗಾಸನ, ಕ್ರೀಡಾ ಚಟುವಟಿಕೆಗಳು, ಸಾಂಸ್ಕೃತಿಕ ಚಟುವಟಿಕೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಯೋಗ ಒಕ್ಕೂಟ ಅಧ್ಯಕ್ಷ ವಾಸುದೇವ ರಾಯ್ಕರ್, ಪ್ರಧಾನ ಕಾರ್ಯದರ್ಶಿ ಡಾ.ಎನ್.ಪರಶುರಾಮ್, ನಿವೃತ್ತ ಆಯುಷ್ ಅಧಿಕಾರಿ ಡಾ.ಯು.ಸಿದ್ದೇಶ, ಡಾ.ನಿರಂಜನ ರೆಡ್ಡಿ, ಡಾ.ಜಿ.ಡಿ.ರಂಜಿತ್, ಬಾತಿ ಶಂಕರ್, ತೀರ್ಥರಾಜ ಹೋಲೂರು, ಡಾ.ಜೈಮುನಿ, ರಾಜು ಬದ್ದಿ ಸೇರಿದಂತೆ ಇತರರು ಇದ್ದರು.
- - -(ಬಾಕ್ಸ್) * ಯೋಗಾಭ್ಯಾಸ ಎಲ್ಲರಿಗೂ ಮುಖ್ಯ: ಉಮಾಪತಿ ಜಿಲ್ಲಾ ಯೋಗ ಒಕ್ಕೂಟ ಗೌರವಾಧ್ಯಕ್ಷ, ಉದ್ಯಮಿ ಬಿ.ಸಿ.ಉಮಾಪತಿ ಮಾತನಾಡಿ, ಯೋಗಾಸನ ಪ್ರಸ್ತುತ ದಿನಗಳಲ್ಲಿ ಬಹಳ ಅವಶ್ಯಕತೆ ಇದೆ. ಪ್ರತಿಯೊಬ್ಬರೂ ಯೋಗ ಕಲಿಯಬೇಕು. ವಿದ್ಯಾರ್ಥಿಗಳಿಗೂ ಪ್ರತಿನಿತ್ಯ ಯೋಗಾಸನ ಮಾಡಿಸುವುದರಿಂದ ಮಕ್ಕಳಿಗೆ ಆರೋಗ್ಯ ವೃದ್ಧಿಸುವುದು. ಯೋಗಾಸನ ಮಾಡುವವರಿಗೆ ದೈವಭಕ್ತಿ ಜಾಸ್ತಿ ಇರುತ್ತದೆ. ಪ್ರಾಮಾಣಿಕರಾಗಿ, ಒಳ್ಳೆಯವರಾಗಿರಬೇಕು, ಸಹಾಯ ಮಾಡಬೇಕು ಎಂಬ ಭಾವನೆ ಬರುತ್ತದೆ. ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸುವಂತಹವರು ಉನ್ನತ ಮಟ್ಟದಲ್ಲಿ ಹೆಸರು, ಕೀರ್ತಿ ತರುವಂತಾಗಲಿ ಎಂದು ಹಾರೈಸಿದರು.
- - --(ಫೋಟೋಗಳಿವೆ.)