ಸಾರಾಂಶ
ಹಾವೇರಿ: ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಸದ್ಬಳಕೆ ಪಡೆದುಕೊಂಡ ತಾಲೂಕಿನ ಅಗಡಿ ಗ್ರಾಮದ ರೈತನೋರ್ವ ಬಟನ್‌ರೋಸ್ ಹೂವನ್ನು ಬೆಳೆದು ಉತ್ತಮ ಆದಾಯದ ಮಾರ್ಗ ಕಂಡುಕೊಳ್ಳುವ ಮೂಲಕ ಬದುಕನ್ನು ಹೂವಾಗಿಸಿಕೊಂಡಿದ್ದಾರೆ. ರೈತರಾದ ನಾಗಪ್ಪ ಹೊಳಿಕಟ್ಟಿ ಅವರು ಈ ಮೊದಲು ಗೋವಿನಜೋಳ ಬೆಳೆದು ಅತೀವೃಷ್ಟಿ, ಅನಾವೃಷ್ಟಿಯಿಂದಾಗಿ ನಷ್ಟ ಅನುಭವಿಸುತ್ತಿದ್ದರು. ಹೀಗಾಗಿ ಪರ್ಯಾಯ ಆಲೋಚನೆ ಮಾಡಲು ಮುಂದಾಗಿದ್ದರು. ಆಗಲೇ ಉದ್ಯೋಗ ಖಾತರಿ ಯೋಜನೆಯಲ್ಲಿ ಹೂ ಬೆಳೆಯಲು ಗ್ರಾಮ ಪಂಚಾಯಿತಿ ಮತ್ತು ತೋಟಗಾರಿಕೆ ಇಲಾಖೆ ಸಹಾಯಧನ ನೀಡುತ್ತದೆ ಎಂದು ಮಾಹಿತಿ ಪಡೆದುಕೊಂಡು, ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಅಧಿಕಾರಿಗಳ ಮಾರ್ಗದರ್ಶನ ಮತ್ತು ಸಲಹೆಯಿಂದ ತನ್ನ ಜಮೀನಿನಲ್ಲಿ ಒಂದು ಎಕರೆ ಪ್ರದೇಶದಲ್ಲಿ ಬಟನ್‌ರೋಸ್ ಹೂವು ಬೆಳೆದುಕೊಂಡು ಉತ್ತಮ ಲಾಭ ಗಳಿಕೆಯಲ್ಲಿ ತೊಡಗಿಕೊಂಡಿದ್ದಾರೆ.ನಾಗಪ್ಪ ಹೋಳಿಕಟ್ಟಿ ಗುಲಾಬಿ ಸಸಿ ನಾಟಿ ಮಾಡಲು 60 ರಿಂದ 80 ಸಾವಿರ ರು. ಖರ್ಚು ಮಾಡಿದ್ದಾರೆ. ಇದೀಗ ಪ್ರಸ್ತುತ ಬಟನ್‌ರೋಸ್ ಸಮೃದ್ಧವಾಗಿ ಬೆಳೆದಿದ್ದರಿಂದ ಪ್ರತಿ 2 ದಿನಕ್ಕೆ 25 ರಿಂದ 30 ಕೆ.ಜಿ ತೂಕದ ಹೂವು ಬರುತ್ತಿದ್ದು, ಕನಿಷ್ಠ 1500 ರು. ಆದಾಯ ಪಡೆದು ತಿಂಗಳಿಗೆ 15 ರಿಂದ 20 ಸಾವಿರ ರು. ಗಳಿಸುತ್ತಿದ್ದಾರೆ. ಇದರ ಜೊತೆಗೆ ಖರ್ಚು ಮಾಡಿದ ಹಣವು ಮತ್ತು ಇಲಾಖೆಯಿಂದ ಅನುದಾನ ಸಿಗುತ್ತದೆ ಎಂದು ರೈತ ನಾಗಪ್ಪ ಹೋಳಿಕಟ್ಟಿ ಹೇಳುತ್ತಾರೆ.ಯೋಜನೆ ಪ್ರಯೋಜನ ಹೇಗೆ: ಮನರೇಗಾ ಯೋಜನೆಯಡಿ ಜಾಬ್ ಕಾರ್ಡ ಹೊಂದಿದವರಿಗಾಗಿ ಐ.ಇ.ಸಿ ಕಾರ್ಯಕ್ರಮದ ಮೂಲಕ ಮಾಹಿತಿ ನೀಡಲಾಗುತ್ತದೆ. ಇಂಥವರು ಸಣ್ಣ ಅತಿಸಣ್ಣ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ಯೋಜನೆಯಡಿ ವಿವಿಧ 21 ವಲಯ ಕಾಮಗಾರಿಗಳ ಬಗ್ಗೆಯೂ ಮಾಹಿತಿ ನೀಡಿ, ರೈತರಿಗೆ ಲಾಭ ಸಿಗುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಈ ಯೋಜನೆಯಲ್ಲಿ ಜೀವನ ಪರ್ಯಂತ 5 ಲಕ್ಷ ರುವರೆಗೂ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ. ಹಬ್ಬದ ದಿನಗಳಲ್ಲಿ ಬೇಡಿಕೆ:ಹಬ್ಬದ ದಿನಗಳಲ್ಲಿ ಗುಲಾಬಿ ಹೂಗಳಿಗೆ ಹೆಚ್ಚಿನ ಬೇಡಿಕೆ ಇದ್ದೇ ಇರುತ್ತದೆ. ಈ ನಡುವೆ ಹೊರ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಹರಿಯಾಣದ ವ್ಯಾಪಾರಸ್ಥರು ರೈತರ ಗುಲಾಬಿ ತೋಟಕ್ಕೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ, ಐದರಿಂದ ಆರು ವರ್ಷಗಳ ಕಾಲ ಹೂವು ನಮಗೆ ಪೂರೈಕೆ ಮಾಡಬೇಕೆಂದು ಒಪ್ಪಂದ ಮಾಡಿಕೊಂಡು ಅಡ್ವಾನ್ಸ್ ಕೂಡ ಕೊಟ್ಟು ಹೋಗುತ್ತಿದ್ದಾರೆ. ಇದರಿಂದ ತುಂಬಾ ಖುಷಿಯಾಗಿದೆ ಎಂದು ರೈತ ನಾಗಪ್ಪ ಸಂತಸ ವ್ಯಕ್ತಪಡಿಸುತ್ತಾರೆ.ನರೇಗಾ ಯೋಜನೆ ಗ್ರಾಮೀಣ ಭಾಗದ ಜನರ ಬದುಕಲ್ಲಿ ಹೊಸ ಭರವಸೆ ಹುಟ್ಟಿಸಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ಇದೊಂದು ನಿದರ್ಶನವಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆ ಲಾಭ ಪಡೆದುಕೊಳ್ಳಬೇಕು ಹಾವೇರಿ ತಾಪಂ ಇಒ ನವೀನಪ್ರಸಾದ ಕಟ್ಟಿಮನಿ ಹೇಳಿದರು.2023-24ನೇ ಸಾಲಿನಲ್ಲಿ ತೋಟಗಾರಿಕಾ ಇಲಾಖೆಯಿಂದ ನರೇಗಾ ಯೋಜನೆಯಡಿ ವಿವಿಧ ಬೆಳೆಗಳಿಗೆ ಸುಮಾರು 280 ಎಕರೆ ಪ್ರದೇಶ ವಿಸ್ತರಣೆ ಮಾಡಿದ್ದು, 28000 ಮಾನವ ದಿನಗಳನ್ನು ಸೃಜಿಸಲಾಗಿದೆ. ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಹಾವೇರಿ ಜಿಪಂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪರಶುರಾಮ ಹಲಕುರ್ಕಿ ಹೇಳಿದರು.