ಹಿಂದುಗಳ ಒಳ್ಳೆತನ ದೌರ್ಬಲ್ಯ ಅಲ್ಲ: ಬಿ.ವೈ.ರಾಘವೇಂದ್ರ

| Published : Apr 23 2024, 12:45 AM IST

ಹಿಂದುಗಳ ಒಳ್ಳೆತನ ದೌರ್ಬಲ್ಯ ಅಲ್ಲ: ಬಿ.ವೈ.ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ರಾಜ್ಯ ಬಿಜೆಪಿ ಕರೆಯಂತೆ ಬೈಂದೂರು ಮಂಡಲ ಬಿಜೆಪಿ ವತಿಯಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ ನೇಹಾಳ ಕೊಲೆ ಲವ್ ಜಿಹಾದ್ ನ ಒಂದು ಭಾಗ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಬೈಂದೂರು

ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ರಾಜ್ಯ ಬಿಜೆಪಿ ಕರೆಯಂತೆ ಬೈಂದೂರು ಮಂಡಲ ಬಿಜೆಪಿ ವತಿಯಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ನೇಹಾಳ ಕೊಲೆ ಲವ್ ಜಿಹಾದ್ ನ ಒಂದು ಭಾಗ. ಕಾಂಗ್ರೆಸ್ ಸರ್ಕಾರ ನೇಹಾಳ ಕುಟುಂಬಕ್ಕೆ ರಕ್ಷಣೆ ನೀಡುವುದನ್ನು ಬಿಟ್ಟು ಕೊಲೆಗಾರ ಫಯಾಜ್ ನ ಮನೆಗೆ ರಕ್ಷಣೆ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಮನವಮಿ ಪಾನಕ ಹಂಚಿದರೆ ಕೇಸ್, ಮೋದಿ ಬಗ್ಗೆ ಹಾಡು ಬರೆದರೆ ಹಲ್ಲೆ, ಮಡಿಕೇರಿ ಕುಟ್ಟಪ್ಪ, ಶಿವಮೊಗ್ಗ ಹರ್ಷ, ಭಟ್ಕಳದ ಪರೇಶ್ ಮೆಸ್ತಾ ಸಾವಿಗೆ ಹಿಂದೂ ಸಮಾಜ ಉತ್ತರ ನೀಡಲೇಬೇಕಾಗಿದೆ. ಹಿಂದೂಗಳ ಒಳ್ಳೆತನ ದೌರ್ಬಲ್ಯ ಅಲ್ಲ. ಈ ಘಟನೆಗೆ ಹಿಂದೂ ಸಮಾಜ ಸರಿಯಾದ ಉತ್ತರ ನೀಡಲಿದೆ. ಈ ಚುನಾವಣೆಯಲ್ಲಿ ಮತದಾರರು ಚೊಂಬು ಕೊಟ್ಟು ಮನೆಗೆ ಕಳುಹಿಸಲಿದ್ದಾರೆ ಎಂದು ಎಚ್ಚರಿಸಿದರು.

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಪ್ರೀತಿ ಒಪ್ಪಿಕೊಂಡಿಲ್ಲ ಎಂದರೆ ಚಾಕು ಹಾಕುತ್ತಾರೆ, ಪ್ರೀತಿ ಒಪ್ಪಿಕೊಂಡರೆ ಸೂಟ್ ಕೇಸಿಗೆ ಹಾಕುತ್ತಾರೆ. ಇದೆಲ್ಲಕ್ಕಿಂತ ದುರಂತವೆಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಲೇ ಇವೆಲ್ಲಾ ನಡೆಯುತ್ತವೆ. ಇದೇ ಕೃತ್ಯ ಉತ್ತರ ಪ್ರದೇಶದಲ್ಲಿ ಆಗಿದ್ದರೆ ಬುಲ್ಡೋಜರ್ 24 ಗಂಟೆಯ ಒಳಗೆ ಮನೆ ಕೆಡುವುತ್ತಿತ್ತು. ನಮ್ಮಲ್ಲಿ ಸರ್ಕಾರ ಬುಲ್ಡೊಜರನ್ನು ಫಯಾಜ್ ನ ಮನೆ ಕಾಯಲು ನಿಲ್ಲಿಸಿದೆ. ಹಿಂದೂ ಸಮಾಜ ಎಚ್ಚೆತ್ತುಕೊಂಡಿದೆ ಉತ್ತರ ಕೊಡುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಮಹೇಂದ್ರ ಪೂಜಾರಿ, ಉಮೇಶ್ ಶೆಟ್ಟಿ ಮೊದಲಾದವರು ಪ್ರತಿಭಟನೆಯಲ್ಲಿದ್ದರು.