ದೇಶದ ಏಕತೆ, ಸಮಾನತೆಗೆ ಸದ್ಭಾವನೆ ಕನ್ನಡಿ: ಟಿ.ಎಂ. ಭಾಸ್ಕರ್

| Published : Aug 22 2024, 12:52 AM IST

ದೇಶದ ಏಕತೆ, ಸಮಾನತೆಗೆ ಸದ್ಭಾವನೆ ಕನ್ನಡಿ: ಟಿ.ಎಂ. ಭಾಸ್ಕರ್
Share this Article
  • FB
  • TW
  • Linkdin
  • Email

ಸಾರಾಂಶ

ಶಿಗ್ಗಾಂವಿ ತಾಲೂಕಿನ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಪ್ರತಿಜ್ಞಾ ವಿಧಿ ಬೋಧಿಸಿದರು.

ಶಿಗ್ಗಾಂವಿ: ಭಾರತವು ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ‍್ಟವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಸಹಬಾಳ್ವೆಯ ನೀತಿಪಾಠವನ್ನು ಜಗತ್ತಿಗೆ ಭಾರತವು ತಿಳಿಸುತ್ತದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಹೇಳಿದರು.

ತಾಲೂಕಿನ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು. ಸದ್ಭಾವನೆ ಎನ್ನುವುದು ದೇಶದ ಏಕತೆ ಮತ್ತು ಸಮಾನತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.

ಸಾಹಿತ್ಯಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ವಲಯದ ಚಿಂತನ ಮಂಥನ ಮಾಡುವ ಸಂದರ್ಭದಲ್ಲಿ ದೇಶದ ಏಕತೆ ಮತ್ತು ಸಾಮರಸ್ಯದ ಬಗ್ಗೆ ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯ ಕುರಿತು ಚಿಂತನೆ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.

ಸದ್ಭಾವನಾ ದಿನಾಚರಣೆ ಆಚರಿಸುವುದೆಂದರೆ ನಮ್ಮ ಮನಸ್ಸಿಗೆ ಮತ್ತು ಬಾಹ್ಯ ಪರಿಸರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತಾರತಮ್ಯ ಹಾಗೂ ಅಸಮಾನತೆಯ ಕುರಿತು ಜಾಗ್ರತಿ ಮೂಡಿಸುವುದಾಗಿದೆ. ಇಂದು ಜಗತ್ತು ಬದಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಹಿನ್ನೆಲೆಯಲ್ಲಿ ಹೊಸ ಬಗೆಯ ಓದಿನಿಂದ ದೇಶ ಬದಲಾಗಬೇಕಿದೆ. ದೇಶದ ಏಕತೆ ಮತ್ತು ಸಮಗ್ರತೆಯ ದೃಷ್ಟಿಯಿಂದ ಎಲ್ಲರೊಂದಿಗೆ ಬೆರೆಯುವ ಅವಶ್ಯಕತೆ ಇದೆ. ಎಲ್ಲರೂ ಒಂದೆ ಭಾವನೆಯಿಂದ ಜೀವನ ನಡೆಸಿದಾಗ ನಿಜವಾದ ಸದ್ಭಾವನೆ ದಿನಕ್ಕೆ ಅರ್ಥ ಬರುತ್ತದೆ ಎಂದರು.

ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ್ ಮಾತನಾಡಿ, ಸಮಾನತೆಯ ಹಿನ್ನೆಲೆಯಲ್ಲಿ ಎಲ್ಲರನ್ನೂ ಒಟ್ಟಿಗೆ ಸೇರಿಸುವ ಮತ್ತು ಅಹಿಂಸೆಯ ತತ್ವ ಸಾರುವ ಪ್ರಮುಖ ಉದ್ದೇಶ ಸದ್ಬಾವನೆ ದಿನಾಚರಣೆಯದ್ದಾಗಿದೆ. ಕೇಂದ್ರ ಸರ್ಕಾರದ ಆದೇಶದಂತೆ ಇಂದು ಎಲ್ಲರೂ ಸಮಾನರು ಎನ್ನುವ ಆಶಯವನ್ನು ಬಿತ್ತಿ ಜಾಗೃತಿ ಮೂಡಿಸುವ ಸಲುವಾಗಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನವನ್ನು ದೇಶದಲ್ಲೆಡೆ ಸದ್ಭಾವನಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಎನ್ಎಸ್ಎಸ್ ಸಂಯೋಜಕ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ಗಿರೇಗೌಡ ಅರಳಿಹಳ್ಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಕುಲಸಚಿವರಾದ ಶಹಜಹಾನ್ ಮುದಕವಿ, ಹಿರಿಯ ಸಂಶೋಧನಾಧಿಕಾರಿ ಡಾ. ಪ್ರೇಮಕುಮಾರ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಹಾಜರಿದ್ದರು. ಶರೀಫ ಮಾಕಪ್ಪನವರ ಸದ್ಭಾವನಾ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಸಹಾಯಕ ಸಂಶೋಧನಾಧಿಕಾರಿ ಡಾ. ಮಲ್ಲಿಕಾರ್ಜುನ ಮಾನ್ಪಡೆ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಹಣಮಂತರಾಯಗೌಡ ವಂದಿಸಿದರು.