ಮಂಗಳೂರು: ಇತ್ತೀಚಿನ ದಿನಗಳಲ್ಲಿ ಬಹುತೇಕರು ಆನ್‌ಲೈನ್‌ ಪಾವತಿಗಾಗಿ ಬಳಸುವ ‘ಗೂಗಲ್‌ ಪೇ’ಯಲ್ಲಿ ಹಾರ್ಟ್‌ ಸಿಂಬಲ್‌ ಇರುವ ‘ಪಾಕೆಟ್‌ ಮನಿ’ ಐಕಾನ್‌ನ್ನು ಒತ್ತಿದರೆ ಬ್ಯಾಂಕ್‌ ಖಾತೆಯಲ್ಲಿರುವ ಹಣ ಪೂರ್ತಿ ಖಾಲಿಯಾಗುತ್ತದೆ ಎಂಬ ಸಂದೇಶ ಹಲವು ದಿನಗಳಿಂದ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು ಅನೇಕರು ಆತಂಕಿತರಾಗಿದ್ದಾರೆ. ಆದರೆ ಇದು ಸಂಪೂರ್ಣ ಸುಳ್ಳು ಮಾಹಿತಿ. ಇದು ಬ್ಯಾಂಕ್‌ ಅಕೌಂಟ್‌ ಹೊಂದಿರದ ಮಕ್ಕಳಿಗೆ ಟಿಜಿಟಲ್‌ ಪಾವತಿಗಾಗಿ ಗೂಗಲ್‌ ತಯಾರಿಸಿರುವ ಸುರಕ್ಷಿತ ವ್ಯವಸ್ಥೆ ಎಂದು ಮಂಗಳೂರಿನ ಸೈಬರ್‌ ತಜ್ಞ ಅನಂತ ಪ್ರಭು ಸ್ಪಷ್ಟಪಡಿಸಿದ್ದಾರೆ.ಗೂಗಲ್‌ ಪೇಯಲ್ಲಿ ಇತ್ತೀಚೆಗೆ ಪಾಕೆಟ್‌ ಮನಿ ಎಂಬ ಹೊಸ ವ್ಯವಸ್ಥೆಯನ್ನು ಗೂಗಲ್‌ ಪರಿಚಯಿಸಿತ್ತು. ಈ ಕುರಿತು ಅನೇಕರು ಜಾಲತಾಣದಲ್ಲಿ ಅಪಪ್ರಚಾರ ನಡೆಸಿ, ವೈರಲ್‌ ಮಾಡಿ ಜನರು ಆತಂಕಪಡುವಂತೆ ಮಾಡಿದ್ದರು.

ಏನಿದು ಪಾಕೆಟ್‌ ಮನಿ?:

ಬ್ಯಾಂಕ್‌ ಅಕೌಂಟ್‌ ಹೊಂದಿರದ ಮಕ್ಕಳು, ಪೋಷಕರ ಬ್ಯಾಂಕ್‌ ಅಕೌಂಟ್‌ನ್ನು ಬಳಸಿ ತಮ್ಮದೇ ಮೊಬೈಲ್‌ನಿಂದ ಡಿಜಿಟಲ್‌ ಪಾವತಿ ಮಾಡಲು ಅನುಕೂಲವಾಗುವಂತೆ, ಪಾಕೆಟ್‌ ಮನಿಯಂತೆ ಬಳಸಿಕೊಳ್ಳುವ ವ್ಯವಸ್ಥೆ ಇದು. ‘ಗೂಗಲ್‌ ಪೇ’ ಆಪ್‌ ತೆರೆದ ಕೂಡಲೆ ಮೇಲ್ಭಾಗದಲ್ಲೇ ಈ ಐಕಾನ್‌ ಕಾಣಿಸುತ್ತದೆ. ಪೋಷಕರ ಸಂಪೂರ್ಣ ನಿಯಂತ್ರಣದಲ್ಲಿ ಇರುವ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಇದು.

ಒಮ್ಮೆ ಈ ವ್ಯವಸ್ಥೆಯನ್ನು ಪೋಷಕರು ಸಕ್ರಿಯಗೊಳಿಸಿದರೆ ಮಕ್ಕಳು ಅವರದ್ದೇ ಮೊಬೈಲ್‌ನಿಂದ (ಪೋಷಕರ ಮೊಬೈಲ್‌ ಅಗತ್ಯವಿಲ್ಲ) ಆನ್‌ಲೈನ್‌ ಪಾವತಿ ಮಾಡಬಹುದು. ಪೋಷಕರ ಬ್ಯಾಂಕ್‌ ಅಕೌಂಟ್‌ನಿಂದ ಹಣ ಕಡಿತವಾಗುತ್ತದೆ. ನಗದು ರೂಪದಲ್ಲಿ ಹಣವನ್ನು ಮಕ್ಕಳಿಗೆ ನೀಡುವ ಅವಶ್ಯಕತೆ ಇರುವುದಿಲ್ಲ. ಪೋಷಕರ ಅನುಮತಿಯೊಂದಿಗೆ ಅವರು ಡಿಜಿಟಲ್‌ ವ್ಯವಹಾರಗಳನ್ನು ಮಾಡಬಹುದು.ಆಯ್ಕೆಗಳೇನು?:

ಪೋಷಕರು ಈ ಪಾಕೆಟ್‌ ಮನಿ ವ್ಯವಸ್ಥೆಯನ್ನು ಸಕ್ರಿಯಗೊಳಿಸುವಾಗ ಎರಡು ಆಯ್ಕೆಗಳಿರುತ್ತವೆ. ತಿಂಗಳಿಗೆ ಗರಿಷ್ಠ 15 ಸಾವಿರ ರು.ವರೆಗೆ ಹಣದ ಮಿತಿಯನ್ನು ನಿಗದಿಪಡಿಸುವುದು ಮೊದಲ ಆಯ್ಕೆ. ಉದಾಹರಣೆಗೆ- ಪೋಷಕರು ತಮ್ಮ ಮಕ್ಕಳಿಗೆ 3-5 ಸಾವಿರ ರು. ಪಾಕೆಟ್‌ ಮನಿ ನೀಡಲು ಬಯಸಿದರೆ ಅಷ್ಟಕ್ಕೇ ‘ಸೆಟ್‌’ ಮಾಡುವ ಅವಕಾಶವಿದೆ. ಇನ್ನೊಂದು- ಮಕ್ಕಳು ನಡೆಸುವ ಪ್ರತಿ ಡಿಜಿಟಲ್‌ ವ್ಯವಹಾರಕ್ಕೆ ಪೋಷಕರು ಅನುಮತಿ ನೀಡಿದ ನಂತರವೇ ಪಾವತಿ ಆಗುವಂತೆ ಮಾಡಬಹುದು ಎಂದು ಅನಂತ ಪ್ರಭು ಹೇಳುತ್ತಾರೆ. ಎರಡನೇ ಆಯ್ಕೆಯಲ್ಲಿ, ಮಕ್ಕಳು ಯಾವುದೇ ವ್ಯವಹಾರ ಮಾಡಿದರೂ ಪೋಷಕರ ಮೊಬೈಲ್‌ಗೆ ಸಂದೇಶ ಬರುತ್ತದೆ. ಪೋಷಕರು ಅನುಮೋದಿಸಿದ ನಂತರವೇ ವ್ಯವಹಾರ ನಡೆಯುತ್ತದೆ.ಎರಡನೇ ಆಯ್ಕೆಯೇ ಬೆಸ್ಟ್‌:


ಅನಂತ ಪ್ರಭು ಅವರ ಪ್ರಕಾರ, ಮಕ್ಕಳು ನಡೆಸುವ ಪ್ರತಿ ಟ್ರಾನ್ಸಾಕ್ಷನ್‌ನ್ನು ಪೋಷಕರು ‘ಅಪ್ರೂವ್‌’ ಮಾಡಿದರೆ ಮಾತ್ರ ಪಾವತಿಯಾಗುವ ಆಯ್ಕೆಯನ್ನು ಆಯ್ದುಕೊಳ್ಳುವುದು ಉತ್ತಮ. ಇದರಿಂದ ಮಕ್ಕಳು ಯಾವುದಕ್ಕಾಗಿ ಹಣ ಬಳಕೆ ಮಾಡುತ್ತಿದ್ದಾರೆ, ಅದು ಬೇಕೋ ಬೇಡವೊ ಎಂಬುದನ್ನು ನಿರ್ಧರಿಸುವ ಸಂಪೂರ್ಣ ಅಧಿಕಾರ ಪೋಷಕರ ಕೈಯಲ್ಲಿರುತ್ತದೆ.

ಈ ನೂತನ ವ್ಯವಸ್ಥೆಯು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಹಣಕಾಸಿನ ಅರಿವನ್ನು ಮೂಡಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಮಕ್ಕಳು ಯಾವುದಕ್ಕಾಗಿ ಹಣ ಖರ್ಚು ಮಾಡುತ್ತಿದ್ದಾರೆ ಎಂಬುದನ್ನು ಸುಲಭವಾಗಿ ಪತ್ತೆ ಮಾಡಲು ಪೋಷಕರಿಗೆ ಸಾಧ್ಯವಾಗುತ್ತದೆ. ಮಕ್ಕಳ ಪ್ರತಿಯೊಂದು ವ್ಯವಹಾರದ ಮೇಲುಸ್ತುವಾರಿ ಮಾಡುವುದೂ ಸುಲಭ ಎನ್ನುತ್ತಾರವರು.

ಸೈಬರ್‌ ಕಳ್ಳರ ಬಗ್ಗೆ ಇರಲಿ ಎಚ್ಚರ!

ಎಲ್ಲ ಡಿಜಿಟಲ್ ವ್ಯವಸ್ಥೆಗಳಂತೆ ಈ ವ್ಯವಸ್ಥೆಗೂ ಸೈಬರ್‌ ಕಳ್ಳರು ಕನ್ನ ಹಾಕುವ ಅಪಾಯವೂ ಇದ್ದೇ ಇದೆ. ಸೈಬರ್ ಅಪರಾಧಿಗಳು ಸೋಶಿಯಲ್ ಎಂಜಿನಿಯರಿಂಗ್ ವಿಧಾನಗಳನ್ನು ಬಳಸಿ ಮಕ್ಕಳನ್ನು ಸಂಪರ್ಕಿಸುವ ಸಾಧ್ಯತೆ ಇದೆ. ಕ್ಯೂಆರ್ ಕೋಡ್ ಅಥವಾ ಲಿಂಕ್‌ನ್ನು ಮಕ್ಕಳ ಮೊಬೈಲ್‌ಗೆ ಕಳುಹಿಸಿ ಹಣ ವರ್ಗಾವಣೆ ಮಾಡಲು ಪ್ರೇರೇಪಿಸಬಹುದು. ಮಕ್ಕಳ ಮೊಬೈಲ್‌ನಿಂದ ಯಾರಾದರೂ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸುವ ಸಾಧ್ಯತೆಯೂ ಇದೆ. ಇನ್ನೊಂದೆಡೆ, ವ್ಯವಸ್ಥೆಯಿಂದ ಮಕ್ಕಳು ತಮ್ಮ ಖರೀದಿಯ ಮಿತಿ ಮೀರಿ ಅನಗತ್ಯವಾಗಿ ಖರ್ಚು ಮಾಡುವ ಸಾಧ್ಯತೆ ಇದೆ.