Goonda culture in Sringeri: Jeevaraj alleges

ಶೃಂಗೇರಿ: ಕ್ಷೇತ್ರದಲ್ಲಿ ಇದುವರೆಗೆ ದ್ವೇಷದ ರಾಜಕಾರಣ, ದಬ್ಬಾಳಿಕೆ ನಡೆಯುತ್ತಿತ್ತು. ರೈತರಿಗೆ, ಕಾರ್ಮಿಕರಿಗೆ ರಕ್ಷಣೆಯೇ ಇಲ್ಲವಾಗಿತ್ತು. ಈಗ ಅಧಿಕಾರಿಗಳ ಮೇಲೆಯೂ ಹಲ್ಲೆ, ದೌರ್ಜನ್ಯ ನಡೆಸುವುದರ ಮೂಲಕ ಕಾಂಗ್ರೆಸ್‌ ನಿಂದ ಗೂಂಡಾ ಸಂಸ್ಕೃತಿ ಆರಂಭವಾಗಿದೆ ಎಂದು ಮಾಜಿ ಸಚಿವ ಡಿ.ಎನ್. ಜೀವರಾಜ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇತ್ತೀಚೆಗೆ ಅಡ್ಡಗೆದ್ದೆ ಬಳಿ ಕಾರ್ ನಲ್ಲಿ ಬೈಕ್ ಸವಾರನೊಬ್ಬನನ್ನು ಅಡ್ಡಗಟ್ಟಿ ಬೀಳಿಸಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಹಲ್ಲೆಗೊಳಗಾದ ವ್ಯಕ್ತಿಯ ಮೇಲೆಯೇ ಎಫ್ಐಆರ್ ದಾಖಲಿಸಲಾಗಿದೆ. ಕೆಲ ದಿನಗಳ ಹಿಂದೆ ಶೃಂಗೇರಿ ತಾಪಂ ಇಒ ಮೇಲೆ ಕಾಂಗ್ರೆಸ್‌ ಮುಖಂಡರೇ ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಅಧಿಕಾರಿಗಳ ಮೇಲೆಯೇ ಈ ರೀತಿ ಹಲ್ಲೆ ದೌರ್ಜನ್ಯಗಳು ನಡೆಯುತ್ತಿದ್ದರೆ, ಜನಸಾಮಾನ್ಯರ ಪಾಡೇನು. ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ. ಇಒ ಭ್ರಷ್ಟ, ದರೋಡೆಕೋರ ಎಂದು ಆರೋಪ ಮಾಡುತ್ತಿದ್ದಾರೆ. ಹಾಗಾದರೆ, ಇವರದ್ದೆ ಸರ್ಕಾರವಿದೆ, ಬೇರೆ ಕಡೆ ವರ್ಗಾಯಿಸಬಹುದಲ್ಲ. ಇನ್ನೊಬ್ಬರಿಗೆ ಭ್ರಷ್ಟರು ಎನ್ನುವ ಇವರು ಭ್ರಷ್ಟರಲ್ಲವೇ? ಪ್ರಜಾ ಸೇವೆ ಕಾರ್ಯಕ್ರಮದಲ್ಲಿ ಗ್ರಾಮಲೆಕ್ಕಿಗನ ಮೇಲೆ ಕಾಂಗ್ರೆಸ್‌ ಮುಖಂಡರೇ ಹರಿಹಾಯ್ದಿದ್ದಾರೆ. ಅವರಿಗೆ ಮಾತನಾಡಲು ಬಿಟ್ಟಿಲ್ಲ. ತಹಸೀಲ್ದಾರ್‌ಗೂ ಮಾತನಾಡಲು ಬಿಟ್ಟಿಲ್ಲ. ಪ್ರಜಾ ಸೇವೆ ಕಾರ್ಯಕ್ರಮವೋ, ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮವೋ ಎಂಬ ಗೊಂದಲ ಉಂಟಾಗಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಇಲ್ಲ. ಹಲ್ಲೆ, ಗೂಂಡಾ ಸಂಸ್ಕೃತಿ ನಡೆಯುತ್ತಿದೆ ಎಂದರು.