ಬಡವರ ಧ್ವನಿಯಾಗಿದ್ದ ಗೋಪಾಲಗೌಡ: ರಾಜಪ್ಪ

| Published : Mar 20 2024, 01:16 AM IST

ಸಾರಾಂಶ

ಜನಪರ ಕಾಳಜಿಯ ಜತೆಗೆ ಬಡವರ ಧ್ವನಿಯಾಗಿದ್ದ ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡರ ವಿಚಾರಧಾರೆಗಳನ್ನು ಯುವ ಸಮುದಾಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನೈತಿಕಪ್ರಜ್ಞೆ ಹೊಂದಿರುವ ಜತೆ ಬಡವರ ಪರ ಧ್ವನಿಯಾಗಿದ್ದ ಅವರು, ವಿದ್ಯಾರ್ಥಿ ಜೀವನದಿಂದಲೇ ಸ್ವಾತಂತ್ರ್ಯ ಹೋರಾಟ ಚಳವಳಿಯಲ್ಲಿ ಧುಮುಕಿದ್ದರು ಎಂದು ಸೊರಬದ ಪ್ರಗತಿಪರ ಚಿಂತಕ ರಾಜಪ್ಪ ಮಾಸ್ತರ್ ಶಿಕಾರಿಪುರದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ಜನಪರ ಕಾಳಜಿಯ ಜತೆಗೆ ಬಡವರ ಧ್ವನಿಯಾಗಿದ್ದ ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡರ ವಿಚಾರಧಾರೆಗಳನ್ನು ಯುವ ಸಮುದಾಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸೊರಬದ ಪ್ರಗತಿಪರ ಚಿಂತಕ ರಾಜಪ್ಪ ಮಾಸ್ತರ್ ಹೇಳಿದರು.

ಪಟ್ಟಣದ ಬಾಪೂಜಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ತಾಲೂಕು ಜಾನಪದ ಪರಿಷತ್ತು ಹಾಗೂ ಬಾಪೂಜಿ ವಿದ್ಯಾಸಂಸ್ಥೆ ಆಶ್ರಯದಲ್ಲಿ ನಡೆದ ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಂತವೇರಿಗೌಡರು ನೈತಿಕಪ್ರಜ್ಞೆ ಹೊಂದಿರುವ ಜತೆ ಬಡವರ ಪರ ಧ್ವನಿಯಾಗಿದ್ದರು. ಜನಪರ ಕಾಳಜಿ ಹೊಂದಿದ ಮಹಾನ್ ನಾಯಕರಾಗಿದ್ದರು. ವಿದ್ಯಾರ್ಥಿ ಜೀವನದಿಂದಲೇ ಸ್ವಾತಂತ್ರ್ಯ ಹೋರಾಟ ಚಳವಳಿಯಲ್ಲಿ ಧುಮುಕಿದ್ದರು. ಶಾಸಕರಾದ ಸಂದರ್ಭ ಭ್ರಷ್ಟಾಚಾರರಹಿತ ಆಡಳಿತ ನಡೆಸಿದ್ದರು. ಕುಟುಂಬ ರಾಜಕಾರಣದಿಂದ ದೂರ ಉಳಿದಿದ್ದರು. ಗೋಪಾಲಗೌಡರ ಅವರ ಹೆಸರು ಹೇಳಿಕೊಂಡು ಹಲವು ಮುಖಂಡರು ರಾಜಕೀಯ ಮಾಡಿದ್ದಾರೆ. ಆದರೆ ಅವರನ್ನು ಸ್ಮರಣೆ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, ಶಾಂತವೇರಿ ಗೋಪಾಲಗೌಡರು ಪ್ರಜಾಪ್ರಭುತ್ವ ತತ್ವಗಳನ್ನು ಎತ್ತಿಹಿಡಿದ ಮಹಾನ್ ನಾಯಕರಾಗಿದ್ದರು. ದಾರ್ಶನಿಕರು, ಪ್ರಗತಿಪರ ಚಿಂತಕರ ಕೃತಿ ಓದುವ ಮೂಲಕ ಅರಿವು ವಿಸ್ತರಿಸಿಕೊಂಡಿದ್ದರು. ಶಾಸಕರಾಗಿ ಯಾವುದೇ ಆಮಿಷಕ್ಕೆ ಒಳಗಾಗದೇ ಪ್ರಾಮಾಣಿಕವಾಗಿ ಆಡಳಿತ ನಡೆಸಿದ್ದರು. ಶಾಸಕರಾದರೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅವರು, ಕನ್ನಡ ಭಾಷೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಶಾಂತವೇರಿ ಗೋಪಾಲ ಗೌಡರ ಆದರ್ಶಗಳನ್ನು ಯುವ ಸಮುದಾಯ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎಸ್. ರಘು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಎಸ್. ಹುಚ್ರಾಯಪ್ಪ, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಪಾಪಯ್ಯ, ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಪಿ.ಆರ್. ಪವಿತ್ರಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿ ಶಿವಮೂರ್ತಿ, ತಾಲೂ ಘಟಕ ನಿಕಟಪೂರ್ವ ಅಧ್ಯಕ್ಷ ಅಂಗಡಿ ಜಗದೀಶ್, ಶರಣ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಸುಭಾಷ್ ಚಂದ್ರಸ್ಥಾನಿಕ್, ಜಾನಪದ ಪರಿಷತ್ತು ಕಾರ್ಯದರ್ಶಿ ಸತ್ಯನಾರಾಯಣ, ಕಸಾಪ ಸದಸ್ಯರಾದ ವೈಭವ್ ಬಸವರಾಜ್, ಬಂಗಾರಪ್ಪ, ಪ್ರಕಾಶ್, ಕಾಳಿಂಗ ರಾವ್, ಉಪನ್ಯಾಸಕರಾದ ಸಂಜೀವ್‌ಕುಮಾರ್, ಮಹಿತಾ, ಅಶ್ವಿನಿ, ಸುಪ್ರಿಯಾ, ರಾಮ ನಾಯ್ಕ, ಗುಡ್ಡೇಶ್ ಮತ್ತಿತರರು ಉಪಸ್ಥಿತರಿದ್ದರು.

- - - -19ಕೆಎಸ್‌ಕೆಪಿ1:

ಶಾಂತವೇರಿ ಗೋಪಾಲಗೌಡ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್ ಉದ್ಘಾಟಿಸಿದರು.