ಸಾರಾಂಶ
ಅರಣ್ಯದಲ್ಲಿ ಸಿಗುವ ಒತ್ತರದ ಹಂಬು ಬಳಸಿ ರಥ ಎಳೆದ ಭಕ್ತರು । ಬೆಟ್ಟದಲ್ಲಿ ಮೊಳಗಿದ ಗೋವಿಂದ ನಾಮ ಸ್ಮರಣೆ । ಬಿಸಿಲಿನ ನಡುವೆಯೂ ಗೋಪಾಲನ ದರ್ಶನಕ್ಕೆ ಬಂದ ಜನಸಾಗರ । ಜಿಪಂ ಸಿಇಒ, ಎಸ್ಪಿ, ಶಾಸಕರಿಂದ ದೇವರ ದರ್ಶನ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಬಂಡೀಪುರ ಹುಲಿ ಸಂರಕ್ಷಿತದೊಳಗಿನ ನಾಡಿನ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಗುರುವಾರ ಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ನಡೆಯಿತು. ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಹಾಗೂ ಸ್ಥಳೀಯ ಭಕ್ತರು ಗುರುವಾರ ಬೆಳಗ್ಗೆಯಿಂದಲೇ ಬೆಟ್ಟಕ್ಕೆ ಬಿಸಿಲಿನ ನಡುವೆಯೂ ಜಮಾಯಿಸಿ ತೇರು ಎಳೆದು ಪುನೀತರಾದರು.
ಗೋಪಾಲಸ್ವಾಮಿ ಬೆಟ್ಟದ ತಪ್ಪಲು ಹಾಗೂ ಗುಂಡ್ಲುಪೇಟೆಯಿಂದ ಸಾರಿಗೆ ಬಸ್ ,ಖಾಸಗಿ ವಾಹನಗಳಲ್ಲಿ ಬಂದ ಭಕ್ತರು ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳ ನಂತರ ಹಿಮವದ್ ಗೋಪಾಲಸ್ವಾಮಿ ಉತ್ಸವ ಮೂರ್ತಿಯನ್ನು ಅಲಂಕೃತ ಅಡ್ಡಪಲ್ಲಕ್ಕಿಯಲ್ಲಿಟ್ಟು ದೇವಾಲಯದ ಸುತ್ತಲೂ ಗೋವಿಂದ, ಗೋಪಾಲ ಎಂಬ ಜೈಕಾರದೊಂದಿಗೆ ಪ್ರದಕ್ಷಿಣೆ ನಡೆಸಲಾಯಿತು.
ದೇವಾಲಯದ ಉತ್ತರ ಪಾರ್ಶ್ವದಲ್ಲಿ ಮಾಡಿದ್ದ ಹಸಿರು ಚಪ್ಪರದಡಿ ಇರಿಸಿ ಪೂಜೆ ಸಲ್ಲಿಸಿದ ಬಳಿಕ ಕಾಡಿನಿಂದ ತಂದಿದ್ದ ಪಣತಾರು(ಕುಚ್ಚು) ವಿವಿಧ ಬಗೆಯ ಫಲಪುಷ್ಪಗಳಿಂದ ಶೃಂಗಾರಗೊಂಡ ದೇವಾಲಯದ ಈಶಾನ್ಯ ದಿಕ್ಕಿನಲ್ಲಿ ನಿಲ್ಲಿಸಿದ್ದ ರಥದಲ್ಲಿ ಉತ್ಸವ ಮೂರ್ತಿ ಇರಿಸಲಾಯಿತು.ದೇವಸ್ಥಾನದ ಪ್ರಧಾನ ಅರ್ಚಕ ಕೆ.ವಿ.ಗೋಪಾಲಕೃಷ್ಣ ಭಟ್ ಮಹಾ ಮಂಗಳಾರತಿ ನೆರವೇರಿಸಿದರು. ತಹಸೀಲ್ದಾರ್ ಮಂಜುನಾಥ್ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಮೊಳಗಿದ ಗೋವಿಂದ ನಾಮ:ಭಕ್ತರು ಗೋವಿಂದ,ಗೋವಿಂದ,ಗೋಪಾಲ ಎಂಬ ಹರ್ಷೋದ್ಗಾರದೊಂದಿಗೆ ರಥವನ್ನು ಎಳೆದು ಸಾಗುವಾಗ ದೇವಾಲಯದ ಹೊರ ಆವರಣದ ಎರಡು ಕಡೆ ನಿಂತಿದ್ದ ಭಕ್ತರು ರಥೋತ್ಸವಕ್ಕೆ ನಮಿಸಿ,ಹಣ್ಣು-ಧವನ ಎಸೆದು ಇಷ್ಟಾರ್ಥಗಳ ಸಿದ್ಧಿಗೆ ಪ್ರಾರ್ಥಿಸಿದರು.ಒಂದು ಸುತ್ತು ಪ್ರದಕ್ಷಿಣೆ ನಂತರ ಮೂಲಸ್ಥಾನದಲ್ಲಿ ರಥೋತ್ಸವ ಕೊನೆಗೊಂಡಿತು. ಅರಣ್ಯದಲ್ಲಿ ಸಿಗುವ ಒತ್ತರದ ಹಂಬು ಬಳಸಿ ರಥವನ್ನುಎಳೆಯುವುದು ಈ ಜಾತ್ರೆಯ ವಿಶೇಷ. ಪ್ರತಿ ವರ್ಷದಂತೆ ಗೋಪಾಲಪುರ,ಕಣ್ಣೇಗಾಲ, ದೇವರಹಳ್ಳಿ ಹಾಗೂ ಹೊನ್ನೇಗೌಡನಹಳ್ಳಿ ಗ್ರಾಮದವರು(ತೇರು ಬಿಟ್ಟಿ ಸಂಘ) ರಥೋತ್ಸವ ಯಶಸ್ವಿಗೊಳಿಸಿದರು.
ತೀವ್ರ ನಿಗಾ: ಬೇಸಿಗೆಯ ಕಾರಣ ರಥೋತ್ಸವಕ್ಕೆ ಬರುವ ಭಕ್ತರು ಮತ್ತು ಜನಸಾಮಾನ್ಯರು ಅರಣ್ಯದೊಳಕ್ಕೆ ಪ್ರವೇಶಿಸದಂತೆ ಬ್ಯಾರಿಕೇಡ್ ಮತ್ತು ಟೇಪ್ ಕಟ್ಟಿ ಕಾವಲು ಕಾಯುವ ಮೂಲಕ ಅರಣ್ಯ ಇಲಾಖೆ ನೌಕರರು ಮತ್ತು ಸ್ವಯಂ ಸೇವಕರು ನಿಗಾ ಇಟ್ಟಿದ್ದರು. ಗುಂಡ್ಲುಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಪರಶಿವಮೂರ್ತಿ ಮಾರ್ಗದರ್ಶನದಲ್ಲಿ ಪೊಲೀಸರು ಬಂದೋಬಸ್ತ್ ವ್ಯವಸ್ಥೆಗೊಳಿಸಿದ್ದರು.ವಿವಿಧ ಗಣ್ಯರಿಂದ ಗೋಪಾಲಸ್ವಾಮಿ ದರ್ಶನ
ಗುಂಡ್ಲುಪೇಟೆ: ಗೋಪಾಲಸ್ವಾಮಿ ಬೆಟ್ಟದಲ್ಲಿ ಗುರುವಾರ ನಡೆದ ಗೋಪಾಲಸ್ವಾಮಿ ಜಾತ್ರೆಗೆ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ದಂಪತಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಪತ್ನಿ ವಿದ್ಯಾ ಗಣೇಶ್, ಬಂಡೀಪುರ ಕ್ಷೇತ್ರ ನಿರ್ದೇಶಕ ಎಸ್.ಪ್ರಭಾಕರನ್, ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೂ, ಬಂಡೀಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್, ಆರ್‌ಎಫ್‌ಒ ಮಂಜುನಾಥ್ ಜಾತ್ರೆಗೆ ಭೇಟಿ ನೀಡಿದ್ದರು.ಮಜ್ಜಿಗೆ ಪಾನಕ ವಿತರಣೆ:
ಗುಂಡ್ಲುಪೇಟೆ ಗೋಪಾಲಸ್ವಾಮಿ ಜಾತ್ರೆಯಂದು ಆಗಮಿಸುವ ಭಕ್ತರಿಗೆ ದಾನಿಗಳು ಮಜ್ಜಿಗೆ,ಪಾನಕ, ಉಪಹಾರ ವ್ಯವಸ್ಥೆ ಮಾಡಿದ್ದರು. ತಾಲೂಕಿನ ಹಂಗಳ, ಹಂಗಳದ ಸೋನಾಪುರದ ಬಸವೇಶ್ವರ ದೇವಾಲಯ,ಬೆಟ್ಟದ ತಪ್ಪಲು, ಮಜ್ಜಿಗೆ, ಪಾನಕ, ರೈಸ್‌ಬಾತ್, ಮೊಸರನ್ನ ಪ್ರಸಾದವನ್ನು ದಾನಿಗಳು ವಿತರಿಸಿದರು.ಬಸವಳಿದ ಭಕ್ತರು: ಗೋಪಾಲಸ್ವಾಮಿ ಜಾತ್ರೆಗೆ ಆಗಮಿಸಿದ್ದ ಸಹಸ್ರಾರು ಭಕ್ತರು ಸಾರಿಗೆ ಬಸ್ಸಿನಲ್ಲೇ ಬೆಟ್ಟಕ್ಕೆ ತೆರಳಬೇಕಿರುವ ಕಾರಣ ಬಿಸಿಲಿನಲ್ಲಿ ಬಸ್‌ಗಾಗಿ ಕಾದು ನಿಂತ ಕಾರಣ ನಗರ ಪ್ರದೇಶದ ಭಕ್ತರು ಬಸವಳಿಸಿದರು.