ಸಾರಾಂಶ
ಅಧಿಕಾರ ದುರುಪಯೋಗಪಡಿಸಿಕೊಂಡು ತಮ್ಮ ಪುತ್ರನಿಗೆ ಪಂಚಾಯ್ತಿ ಅಭಿವೃದ್ಧಿ ಕಾಮಗಾರಿಗಳನ್ನು ವಹಿಸಿ ಅನುಷ್ಠಾನಗೊಳಿಸಿರುವ ಸಂಬಂಧ ಮಂಡ್ಯ ತಾಲೂಕಿನ ಗೋಪಾಲಪುರ ಗ್ರಾಪಂ ಸದಸ್ಯೆ ಸುಧಾ ಸಿದ್ದೇಗೌಡ ಅವರ ಸದಸ್ಯತ್ವ ರದ್ದುಗೊಳಿಸುವಂತೆ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಶಿಫಾರಸು ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಅಧಿಕಾರ ದುರುಪಯೋಗಪಡಿಸಿಕೊಂಡು ತಮ್ಮ ಪುತ್ರನಿಗೆ ಪಂಚಾಯ್ತಿ ಅಭಿವೃದ್ಧಿ ಕಾಮಗಾರಿಗಳನ್ನು ವಹಿಸಿ ಅನುಷ್ಠಾನಗೊಳಿಸಿರುವ ಸಂಬಂಧ ತಾಲೂಕಿನ ಗೋಪಾಲಪುರ ಗ್ರಾಪಂ ಸದಸ್ಯೆ ಸುಧಾ ಸಿದ್ದೇಗೌಡ ಅವರ ಸದಸ್ಯತ್ವ ರದ್ದುಗೊಳಿಸುವಂತೆ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಶಿಫಾರಸು ಮಾಡಿದ್ದಾರೆ.ಸುಧಾ ಸಿದ್ದೇಗೌಡರ ಪುತ್ರ ಜಿ.ಎಸ್.ಭಾನುಪ್ರಕಾಶ್ ಗುತ್ತಿಗೆದಾರನಾಗಿದ್ದು, ಸದಸ್ಯೆ ಸುಧಾ ಸಿದ್ದೇಗೌಡ ಅವರು ಅಧಿಕಾರ ದುರುಪಯೋಗ ಪಡಿಸಿಕೊಂಡು ೨೦೨೦-೨೧ ಮತ್ತು ೨೧-೨೨ನೇ ಸಾಲಿನಲ್ಲಿ ೧೪ ಮತ್ತು ೧೫ನೇ ಹಣಕಾಸು ಯೋಜನೆಯಡಿ ಕಾಮಗಾರಿಗಳು ಮತ್ತು ನರೇಗಾ ಕಾಮಗಾರಿಗಳನ್ನು ವಹಿಸಿ ಅನುಷ್ಠಾನಗೊಳಿಸಿದ್ದಾರೆ. ಇದು ಪಂಚಾಯತ್‌ರಾಜ್ ಅಧಿನಿಯಮದ ಉಲ್ಲಂಘನೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದಾರೆ.
ಗೋಪಾಲಪುರ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು ೧೧ ಕಾಮಗಾರಿಗಳನ್ನು ಬಿ.ಎಸ್.ಭಾನುಪ್ರಕಾಶ್ ನಿರ್ವಹಿಸಿದ್ದು, ಹಣ ಕೂಡ ಪಾವತಿಯಾಗಿದೆ. ಸದಸ್ಯರು ಸಂಬಂಧಿಗಳಿಂದ ಕಾಮಗಾರಿಗಳನ್ನು ನಿರ್ವಹಿಸುವುದು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ-೧೯೯೩ರ ಪ್ರಕರಣ ೪೩ (ಎ)(೧)ರ ಸ್ಪಷ್ಟ ಉಲ್ಲಂಘನೆಯಾಗಿದೆ. ಇದರನ್ವಯ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಅಧಿಕಾರ ದುರುಪಯೋಗದ ಸಂಬಂಧ ವಿಚಾರಣೆ ನಡೆಸುವುದಕ್ಕೆ ಪ್ರಾದೇಶಿಕ ಆಯುಕ್ತರಿಗೆ ಅಧಿಕಾರ ನೀಡಲಾಗಿದೆ.ಅದರಂತೆ ಸುಧಾ ಸಿದ್ದೇಗೌಡರ ಗ್ರಾಪಂ ಸದಸ್ಯತ್ವವನ್ನು ರದ್ದುಮಾಡುವ ಕುರಿತಂತೆ ಸಲ್ಲಿಕೆಯಾಗಿರುವ ದೂರು, ತನಿಖಾ ತಂಡದ ವರದಿ, ಬಿ.ಎಸ್.ಭಾನುಪ್ರಕಾಶ್ ನಿರ್ವಹಿಸಿದ ಕಾಮಗಾರಿಗಳ ವಿವರ ಹಾಗೂ ೧೧ ಕಾಮಗಾರಿಗಳ ಬಿಲ್ಲುಗಳ ಪಾವತಿಯ ವಿವರಗಳನ್ನು ಜಿಪಂ ಸಿಇಒ ಕೆ.ಆರ್.ನಂದಿನಿ ಮೈಸೂರು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿದ್ದಾರೆ.