ಹಳೇಬೀಡು ಗ್ರಾಪಂ ನೂತನ ಉಪಾಧ್ಯಕ್ಷರಾಗಿ ಗೌರಮ್ಮ ಆಯ್ಕೆ

| Published : Sep 01 2024, 01:53 AM IST

ಸಾರಾಂಶ

17 ಮಂದಿ ಸದಸ್ಯರ ಬಲದ ಹಳೇಬೀಡು ಗ್ರಾಪಂನಲ್ಲಿ ಜೆಡಿಎಸ್ ಬೆಂಬಲಿತ-11, ರೈತ ಸಂಘ-ಕಾಂಗ್ರೆಸ್ ಬೆಂಬಲಿತ-6 ಮಂದಿ ಸದಸ್ಯರಿದ್ದರು. ಹಿಂದಿನ ಉಪಾಧ್ಯಕ್ಷೆ ಎಂ.ಎ.ಶೋಭಾ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಜೆಡಿಎಸ್ ಬೆಂಬಲಿತ ಸದಸ್ಯ ಗೌರಮ್ಮ, ರೈತಸಂಘ-ಕಾಂಗ್ರೆಸ್ ಬೆಂಬಲಿತ ಸದಸ್ಯ ಸಂಕಲ್ಪ ನಾಮಪತ್ರಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಹಳೇಬೀಡು ಗ್ರಾಪಂನ ನೂತನ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗೌರಮ್ಮ ಶನಿವಾರ ಆಯ್ಕೆಯಾದರು.

17 ಮಂದಿ ಸದಸ್ಯರ ಬಲದ ಗ್ರಾಪಂನಲ್ಲಿ ಜೆಡಿಎಸ್ ಬೆಂಬಲಿತ-11, ರೈತ ಸಂಘ-ಕಾಂಗ್ರೆಸ್ ಬೆಂಬಲಿತ-6 ಮಂದಿ ಸದಸ್ಯರಿದ್ದರು. ಹಿಂದಿನ ಉಪಾಧ್ಯಕ್ಷೆ ಎಂ.ಎ.ಶೋಭಾ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಜೆಡಿಎಸ್ ಬೆಂಬಲಿತ ಸದಸ್ಯ ಗೌರಮ್ಮ, ರೈತಸಂಘ-ಕಾಂಗ್ರೆಸ್ ಬೆಂಬಲಿತ ಸದಸ್ಯ ಸಂಕಲ್ಪ ನಾಮಪತ್ರಸಲ್ಲಿಸಿದರು.

ನಂತರ ಚುನಾವಣಾಧಿಕಾರಿಗಳಾದ ಕಾವೇರಿ ನೀರಾವರಿ ನಿಗಮದ ಎಇಇ ಜಯರಾಮು ಅವರು ಗುಪ್ತ ಮತದಾನ ಪ್ರಕ್ರಿಯೆಯ ಮೂಲಕ ಚುನಾವಣೆ ನಡೆಸಿದರು. ಗೌರಮ್ಮ 11 ಮತ, ಸಂಕಲ್ಪಗೆ 6 ಮತಗಳು ಬಂದವು. 5 ಮತಗಳ ಅಂತರದಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗೌರಮ್ಮ ಗೆಲುವು ಸಾಧಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಗೌರಮ್ಮ ಆಯ್ಕೆಯಾಗುತ್ತಿದ್ದಂತೆಯೇ ಬೆಂಬಲಿಗರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು.

ಅಧ್ಯಕ್ಷ ಎಚ್.ಸಿ.ಧನಂಜಯ್ ಮಾತನಾಡಿ, ನಮ್ಮ ನಾಯಕರು, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಅವರ ಆಶೀರ್ವಾದದ ಹಾಗೂ ಜೆಡಿಎಸ್ ಬೆಂಬಲಿತ ಸದಸ್ಯರ ಸಹಕಾರಿದಿಂದ ಹಳೇಬೀಡು ಗ್ರಾಪಂನ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೌರಮ್ಮ ಆಯ್ಕೆಯಾಗಿದ್ದಾರೆ ಎಂದರು.

ನಮ್ಮ ಎದುರಾಳಿ ಪಕ್ಷದವರು ನಮ್ಮ ಸದಸ್ಯರನ್ನು ಹೈಜಾಕ್ ಮಾಡಲು ಯತ್ನಿಸಿದಾದರು ಅದು ವಿಫಲವಾಗಿದೆ. ಅವರು ಹೈಜಾಕ್ ಮಾಡಲು ಪ್ರಯತ್ನಿಸಿದಷ್ಟು ನಮ್ಮ ಸಂಖ್ಯಾಬಲ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲರು ಒಗ್ಗಟ್ಟಿನಿಂದ ಪಂಚಾಯ್ತಿ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.

ಚುನಾವಣಾ ಪ್ರಕ್ರಿಯೆಯಲ್ಲಿ ಗ್ರಾಪಂ ಅಧ್ಯಕ್ಷ ಎಚ್.ಸಿ.ಧನಂಜಯ್, ಸದಸ್ಯರಾದ ಮಂಜಳ, ಎಚ್.ಪಿ.ಪುಟ್ಟೇಗೌಡ, ಚಿಕ್ಕತಾಯಮ್ಮ, ಸಿ.ಜೆ.ರಾಧಾ, ಸೌಭಾಗ್ಯಮ್ಮ, ಎಚ್.ಪಿ.ಪದ್ಮರಾಜ್, ಎಂ.ಎ.ಶೋಭಾ, ಮಂಗಳಮ್ಮ ,ಜಯಲಕ್ಷ್ಮಮ್ಮ, ಸಿ.ಕೆ.ಕರೀಗೌಡ, ಶಂಕರಶೆಟ್ಟಿ, ಶಶಿಕಲಾ,ಕುಮಾರ್, ಎನ್.ಸಿ.ಬೋರೇಗೌಡ ಭಾಗವಹಿಸಿದ್ದರು.

ಈ ವೇಳೆ ಜೆಡಿಎಸ್ ಮುಖಂಡರಾದ ಹೊಸಕೋಟೆ ಪುಟ್ಟಣ್ಣ, ಹಳೇಬೀಡು ಕುಳ್ಳೇಗೌಡ, ನರಹಳ್ಳಿ ಸಣ್ಣಪ್ಪ, ದಾಸಪ್ಪ, ಪಿಡಿಓ ನಾಗರಾಜು, ಕಾರ್ಯದರ್ಶಿ ಪಾಪೇಗೌಡ ಸೇರಿದಂತೆ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.