ಸಾರಾಂಶ
ಬೀಡಾಡಿ ಗೋವಿನ ರಕ್ಷಣೆ ಮತ್ತು ಆರೈಕೆಗಾಗಿ ಸಮಾನ ಮನಸ್ಕರೆಲ್ಲರೂ ಕೂಡಿ ಶಿವಮೊಗ್ಗದಲ್ಲಿ ‘ಗೋವರ್ಧನ’ ಎಂಬ ಟ್ರಸ್ಟ್ ಅನ್ನು ಅಸ್ವಿತ್ವಕ್ಕೆ ತಂದಿದ್ದು, ನಗರದ ಗೋ ಪ್ರೇಮಿಗಳೆಲ್ಲರೂ ಇದರಲ್ಲಿ ಭಾಗಿಯಾಗುವ ಮೂಲಕ ಗೋ ಸಂರಕ್ಷಣಾ ಅಭಿಯಾನ ಆರಂಭಿಸಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗ: ಬೀಡಾಡಿ ಗೋವಿನ ರಕ್ಷಣೆ ಮತ್ತು ಆರೈಕೆಗಾಗಿ ಸಮಾನ ಮನಸ್ಕರೆಲ್ಲರೂ ಕೂಡಿ ಶಿವಮೊಗ್ಗದಲ್ಲಿ ‘ಗೋವರ್ಧನ’ ಎಂಬ ಟ್ರಸ್ಟ್ ಅನ್ನು ಅಸ್ವಿತ್ವಕ್ಕೆ ತಂದಿದ್ದು, ನಗರದ ಗೋ ಪ್ರೇಮಿಗಳೆಲ್ಲರೂ ಇದರಲ್ಲಿ ಭಾಗಿಯಾಗುವ ಮೂಲಕ ಗೋ ಸಂರಕ್ಷಣಾ ಅಭಿಯಾನ ಆರಂಭಿಸಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆ.ಇ.ಕಾಂತೇಶ್ ಅಧ್ಯಕ್ಷತೆಯ ಈ ಟ್ರಸ್ಟ್‌ನಲ್ಲಿ ನಗರದ ವಿವಿಧ ಕ್ಷೇತ್ರದ ಹಲವಾರು ಗಣ್ಯರು, ಗೋ ಪ್ರಿಯರು ಜೊತೆಯಾಗಿದ್ದಾರೆ ಎಂದರು.ಮನೆ ಮನೆಗಳಲ್ಲಿ ಗೋವಿನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಶೃಂಗೇರಿ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ಅಕ್ಟೋಬರ್ 5 ರಂದು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದರು.ನಗರದ ರಸ್ತೆಗಳಲ್ಲಿ ಮಾಲೀಕರಿಲ್ಲದೆ ಓಡಾಡುವ ಬಿಡಾಡಿ ಹಸುಗಳನ್ನು ರಕ್ಷಿಸಿ, ಗೋಶಾಲೆಗೆ ಸೇರಿಸುವುದು, ಅಪಘಾತ ಸೇರಿದಂತೆ ವಿವಿಧ ಕಾರಣಗಳಿಗಾಗಿ ಅನಾರೋಗ್ಯಕ್ಕೆ ಒಳಗಾದ ಅನಾಥ ಗೋವುಗಳಿಗಾಗಿಯೇ ಸುಸಜ್ಜಿತ ಪಶುವೈದ್ಯಕೀಯ ಆಸ್ಪತ್ರೆಯನ್ನು ಸ್ಥಾಪಿಸಿ ನುರಿತ ವೈದ್ಯರನ್ನು ನೇಮಿಸಿ ಇವುಗಳ ಚಿಕಿತ್ಸೆ ನೀಡುವುದು, ತುರ್ತು ಸಂದರ್ಭದಲ್ಲಿ ಗೋವುಗಳ ಸಾಗಾಣಿಕೆಗೆ ಗೋ ಆಂಬ್ಯುಲೆನ್ಸ್ ಸೇವೆ ಆರಂಭಿಸುವುದು, ಬಂಜೆತನ ಹಾಗೂ ವಯಸ್ಸಾದ ಹಸುಗಳನ್ನು ಮಾರಾಟ ಮಾಡಲು ಬಿಡದೇ ಸಂಸ್ಥೆಯೇ ಪಡೆದು, ಗೋ ಶಾಲೆಗಳಿಗೆ ಕೊಡುವುದು ಇಂತಹ ಹತ್ತು-ಹಲವು ಗೋಸಂರಕ್ಷಣೆಯ ಕಾರ್ಯಗಳನ್ನು ಈ ಸಂಸ್ಥೆ ನಡೆಸುತ್ತದೆ. ಇದಕ್ಕೆ ತಗಲುವ ಎಲ್ಲಾ ಖರ್ಚು-ವೆಚ್ಚಗಳನ್ನು ಗೋವರ್ಧನ ಸಂಸ್ಥೆಯಿಂದಲೇ ಭರಿಸಲಾಗುವುದು ಎಂದು ಹೇಳಿದರು.ಇದಕ್ಕಾಗಿ ಒಬ್ಬ ಗೋ ಪ್ರೇಮಿಯಿಂದ ಪ್ರತಿ ತಿಂಗಳು 100 ರು. ಗಳನ್ನು ಸ್ವೀಕರಿಸಲಾಗುತ್ತದೆ. ಜೊತೆಗೆ ದಾನಿಗಳಿಂದ ಪೋಷಕ, ಮಹಾ ಪೋಷಕ ಹೆಸರಿನಲ್ಲಿ ಹಣವನ್ನು ದಾನ ರೂಪದಲ್ಲಿ ಪಡೆಯಲಾಗುವುದು. ಇದೆಲ್ಲದರ ನಿರ್ವಹಣೆಯನ್ನು ಗೋವರ್ಧನ ಟ್ರಸ್ಟ್ ನಿರ್ವಹಿಸಲಿದೆ. ಹಣ ಸಂಗ್ರಹಣೆ, ಖರ್ಚು-ವೆಚ್ಚಗಳ ಜವಾಬ್ದಾರಿ ನೀಡುವ ಮತ್ತಿತರ ಕೆಲಸಗಳಿಗಾಗಿ ನಿಯಮಿತವಾಗಿ ಟ್ರಸ್ಟಿನ ಸಭೆ ನಡೆಸಿ, ಆಗು-ಹೋಗುಗಳ ಬಗ್ಗೆ ಚರ್ಚಿಸಿ ಸೂಕ್ತ ಸಲಹೆ, ಮಾರ್ಗದರ್ಶನ ನೀಡುವುದರ ಮೂಲಕ ನಿರಂತರವಾಗಿ ಗೋಸಂರಕ್ಷಣಾ ಕಾರ್ಯವನ್ನು ಮುಂದುವರೆಸಲಾಗುವುದು ಎಂದರು.100 ರು. ಕೂಪನ್ ನ ಪುಸ್ತಕಗಳನ್ನು ಈಗಾಗಲೇ ಮುದ್ರಿಸಿದ್ದು, ಸದ್ಯಕ್ಕೆ ಸುಮಾರು 500 ಮಂದಿ ಕಾರ್ಯಕರ್ತರು ಈ ಕೂಪನ್ ಅನ್ನು ಜನರಿಗೆ ನೀಡಿ ಪ್ರತಿ ಕುಟುಂಬವು ಗೋ ಸಂರಕ್ಷಣೆಗಾಗಿ ಪ್ರತಿ ತಿಂಗಳು ತಲಾ 100 ರು. ನೀಡುವಂತೆ ಪ್ರೇರೇಪಿಸಿ ಕೂಪನ್ ನೀಡಲಿದ್ದಾರೆ. ಈ ಭೇಟಿ ವೇಳೆಯಲ್ಲಿ 100 ರು. ನೀಡಿದ ಪ್ರತಿ ಮನೆಗೂ ಗೋಸಂರಕ್ಷಣಾ ಮನೆ ಎಂಬ ಸ್ಟಿಕ್ಕರ್‌ಅನ್ನು ಅಂಟಿಸುತ್ತಾರೆ. ನಗರದ ಸುಮಾರು 5000 ಸಾವಿರ ಜನರು ಇದರಲ್ಲಿ ಭಾಗಿಯಾಗುತ್ತಾರೆ ಎಂದರು.ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಮನೋಹರ ಮಸ್ಕಿ. ಶೇಷಾಚಲ, ಎಚ್.ಎಸ್.ಶಿವಶಂಕರ್, ನಟರಾಜ್ ಭಾಗವತ್, ಯೋಗಗುರು ರುದ್ರಾರಾದ್ಯ, ಉಮೇಶ್ ಆರಾಧ್ಯ, ಶೃಂಗೇರಿ ನಾಗರಾಜ್, ಮಹಾಲಿಂಗ ಶಾಸ್ತ್ರಿ, ಕೆ.ಇ.ಕಾಂತೇಶ್, ಗುರುರಾಜ್, ಉಮಾಪತಿ, ಸುರೇಶ್ ಬಾಳೆಗುಂದಿ, ಸಾಹಿತಿ ಗಜಾನನ ಶರ್ಮ ಮತ್ತಿತರರು ಉಪಸ್ಥಿತರಿದ್ದು ಮಾತನಾಡಿದರು.ಗೋ ಸಂರಕ್ಷಣೆಯಲ್ಲಿ ಆಸಕ್ತಿ ಇರುವವರು ಕೆ.ಎಸ್.ಈಶ್ವರಪ್ಪ (9880030004), ನಟರಾಜ್ ಭಾಗವತ್(7204646175), ಉಮೇಶ್ ಆರಾಧ್ಯ (9886177311), ನಾಗರಾಜ್ ( 9448241149), ರುದ್ರಾರಾಧ್ಯ (9448161749), ಉಮಾಪತಿ (9880172345), ಪರೋಪಕಾರಂ ಶ್ರೀಧರ್ (9448238926) ಇವರನ್ನು ಸಂಪರ್ಕಿಸಬಹುದು.