ಪ್ರಧಾನಿ ಮೋದಿಯಿಂದ ಅಂಬೇಡ್ಕರ್‌ ಆಶಯದಂತೆ ಆಡಳಿತ: ಹರೀಶ್‌ ಪೂಂಜ

| Published : Jan 27 2024, 01:17 AM IST

ಸಾರಾಂಶ

ಶುಕ್ರವಾರ ಬೆಳ್ತಂಗಡಿಯ ತಾಲೂಕು ಆಡಳಿತ ಸೌಧದಲ್ಲಿ ಜರುಗಿದ ಗಣರಾಜ್ಯೋತ್ಸವ ದಿನಾಚರಣೆಯ ಅಧ್ಯಕ್ಷತೆಯನ್ನು ಶಾಸಕ ಹರೀಶ್‌ ಪೂಂಜ ವಹಿಸಿದ್ದರು. ಬೆಳ್ತಂಗಡಿಯ ವಾಣಿ ಆಂಗ್ಲ ಮಾಧ್ಯಮ ಶಾಲೆ, ಸಂತ ತೆರೇಸಾ ಆಂಗ್ಲ ಮಾಧ್ಯಮ ಶಾಲೆ, ಸರ್ಕಾರಿ ಪ್ರೌಢಶಾಲೆ, ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಉದಾತ್ತ ಕಲ್ಪನೆಗಳನ್ನೊಳಗೊಂಡ ನಮ್ಮ ದೇಶದ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದೆ. ಕಳೆದ 75 ವರ್ಷಗಳಲ್ಲಿ ದೇಶದಲ್ಲಿ ಅನೇಕ ರೀತಿಯಲ್ಲಿ ಆಡಳಿತ ಬದಲಾವಣೆಯಾಗಿದ್ದು, ಪ್ರಸ್ತುತ ಪ್ರಧಾನಿ ಮೋದಿ ಅವರು ಅಂಬೇಡ್ಕರ್ ಆಶಯದಂತೆ ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿದ್ದು, ಸಂವಿಧಾನದ ಪ್ರತಿರೂಪ ಅನಾವರಣಗೊಳ್ಳುತ್ತಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಶುಕ್ರವಾರ ಬೆಳ್ತಂಗಡಿಯ ತಾಲೂಕು ಆಡಳಿತ ಸೌಧದಲ್ಲಿ ಜರುಗಿದ ಗಣರಾಜ್ಯೋತ್ಸವ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಎಲ್ಲರೂ ಪೂಜಿಸುವ ಶ್ರೀರಾಮ ಹುಟ್ಟಿರುವುದು ಅಯೋಧ್ಯೆಯಲ್ಲಿ. ವಾಲ್ಮೀಕಿ ಅವರ ರಾಮ, ಗಾಂಧೀಜಿಯವರ ರಾಮ ಸಹಿತ ಕಾಂಗ್ರೆಸ್ ಪಕ್ಷದ ರಾಮನಿಗೂ ಅಯೋಧ್ಯೆ ಮೂಲ ಸ್ಥಾನ. ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದಲ್ಲಿ ಸದ್ಯ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದ್ದು ಸಂವಿಧಾನದ ಪ್ರಕಾರ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡಿ ಕಾಮಗಾರಿಗಳನ್ನು ನಡೆಸಿ ಜನರಿಗೆ ಸೌಕರ್ಯಗಳನ್ನು ಒದಗಿಸುವುದು ಮುಖ್ಯವಾಗಿದೆ ಎಂದರು.ಎಂಎಲ್‌ಸಿ ಪ್ರತಾಪ ಸಿಂಹ ನಾಯಕ್ ಮಾತನಾಡಿ, ಕಳೆದ ಹತ್ತು ವರ್ಷದಲ್ಲಿ ದೇಶದಲ್ಲಿ ಬಹು ಆಯಾಮದ ಬಡತನದಿಂದ 20 ಕೋಟಿ ಜನರು ಮುಕ್ತರಾಗಿದ್ದಾರೆ. ಆರ್ಥಿಕ ಪ್ರಗತಿಯಲ್ಲಿ ಭಾರತ 5ನೇ ಸ್ಥಾನದಲ್ಲಿದ್ದು ಮುಂದಿನ ಐದು ವರ್ಷಗಳಲ್ಲಿ 3ನೇ ಸ್ಥಾನ ಪಡೆಯಲಿದೆ ಎಂದು ಹೇಳಿದರು.ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಪೃಥ್ವಿ ಸಾನಿಕಂ, ಸಂವಿಧಾನದ ಪ್ರಕಾರ ಮತದಾನ, ಶಿಕ್ಷಣ, ಉದ್ಯೋಗ, ರಾಜಕೀಯ, ಧಾರ್ಮಿಕ ಅವಕಾಶಗಳು ದೇಶದಲ್ಲಿ ಸಿಕ್ಕಿವೆ. ಇದರಿಂದ ತಾರತಮ್ಯವಿಲ್ಲದ ಬದುಕು ಸಾಗಿಸಲು ಕಾರಣವಾಗಿದೆ ಎಂದರು.ನಡ ಕಾಲೇಜಿನ ಉಪನ್ಯಾಸಕ ಮೋಹನ್ ಗೌಡ ದಿಕ್ಸೂಚಿ ಭಾಷಣ ಮಾಡಿದರು.ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜೇಶ್, ಗೃಹರಕ್ಷಕ ದಳದ ಘಟಕ ಅಧಿಕಾರಿ ಜಯಾನಂದ ಲಾಯಿಲ, ಬಿಇಒ ತಾರಕೇಸರಿ, ಸಹಕಾರ ಇಲಾಖೆಯ ತಾಲೂಕು ಅಭಿವೃದ್ಧಿ ಅಧಿಕಾರಿ ಬಿ.ವಿ.ಪ್ರತಿಮಾ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಎಸ್.ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೇಮಚಂದ್ರ ಬಬ್ಬುಕಟ್ಟೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವೇಣೂರು ಐಟಿಐಯ ಜೇಕಬ್ ಮತ್ತಿತರರು ಉಪಸ್ಥಿತರಿದ್ದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಸ್ವಾಗತಿಸಿದರು. ಪೆರಿಂಜೆ ಶಾಲೆಯ ಶಿಕ್ಷಕ ರಾಜೇಶ್ ಹಾಗೂ ಬಡಗಕಾರಂದರು ಶಾಲೆಯ ಶಿಕ್ಷಕಿ ಮಂಗಳಾ ಕೆ. ಕಾರ್ಯಕ್ರಮ ನಿರೂಪಿಸಿದರು.ಬೆಳ್ತಂಗಡಿಯ ವಾಣಿ ಆಂಗ್ಲ ಮಾಧ್ಯಮ ಶಾಲೆ, ಸಂತ ತೆರೇಸಾ ಆಂಗ್ಲ ಮಾಧ್ಯಮ ಶಾಲೆ, ಸರ್ಕಾರಿ ಪ್ರೌಢಶಾಲೆ, ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.