ಸಾರಾಂಶ
-ವಾರಿಯರ್ಸ್ ಶಾಲೆಯಲ್ಲಿ ಭಾರತ ಸಂವಿಧಾನ ದಿನಾಚರಣೆ
--ಕನ್ನಡಪ್ರಭ ವಾರ್ತೆ ಚಳ್ಳಕೆರೆ
ರಾಷ್ಟ್ರದ ಆಡಳಿತ ಸುಲಲಿತವಾಗಿ ನಡೆದು ಅಭಿವೃದ್ಧಿ ಪಥದತ್ತ ಮುನ್ನಡೆದಿದ್ದು ಇದಕ್ಕೆಲ್ಲಾ ಮೂಲ ಕಾರಣ ಸಂವಿಧಾನ ನಮಗೆ ನೀಡಿದ ಶಕ್ತಿ ಎಂದು ಹಿರಿಯ ನ್ಯಾಯಾಧೀಶ ಶಮೀರ್ ಪಿ.ನಂದ್ಯಾಲ್ ತಿಳಿಸಿದರು.ಅವರು, ನಗರದ ವಾರಿಯರ್ಸ್ ಶಾಲೆಯಲ್ಲಿ ಭಾರತ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ದೇಶದ ಸಂಪೂರ್ಣ ಆಡಳಿತ ಸಂವಿಧಾನ ನಿರ್ದೇಶನ ಮತ್ತು ಸೂಚನೆಯಂತೆ ನಡೆಯುತ್ತಾ ಬಂದಿದೆ. ನಮ್ಮನ್ನಾಳುವ ಜನಪ್ರತಿನಿಧಿ ಗಳನ್ನು ಮತದಾನದ ಮೂಲಕ ಆಯ್ಕೆ ವ್ಯವಸ್ಥೆಯನ್ನು ಸಂವಿಧಾನ ನಮಗೆ ಕಲ್ಪಿಸಿದೆ. ನಾವೆಲ್ಲರೂ ಸಂವಿಧಾನವನ್ನು ಗೌರವಿಸುವ ಮತ್ತು ಅದರ ಮೌಲ್ಯವನ್ನು ಸಂರಕ್ಷಿಸುವ ಶಪಥ ಮಾಡಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾದೀಶೆ ಎಚ್.ಆರ್.ಹೇಮಾ ಮಾತನಾಡಿ, ಸಂವಿಧಾನವನ್ನು ಹೊರತುಪಡಿಸಿ ನಾವು ಏನು ಮಾಡಲು ಸಾಧ್ಯವಿಲ್ಲ. ಇಡೀ ರಾಷ್ಟ್ರದ ಆಡಳಿತ ಚುಕ್ಕಾಣಿ ಸಂವಿಧಾನ ಸೂಚಿಸಿದ ರೀತಿಯಲ್ಲಿ ನಡೆಯುತ್ತಿದೆ. ನಾವೆಲ್ಲರೂ ಇಂತಹ ಸುಧೀರ್ಘ ಸಂವಿಧಾನ ಪಡೆದಿರುವುದಕ್ಕೆ ಹೆಮ್ಮೆ ಪಡಬೇಕು ಸಂವಿಧಾನ ನಮೆಲ್ಲರ ರಕ್ಷಾ ಕವಚ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಸಂವಿಧಾನವನ್ನು ಸಮರ್ಪಿಸಿಕೊಂಡು ೭೫ವರ್ಷಗಳು ಕಳೆದಿವೆ. ಸಂವಿಧಾನಕ್ಕೆ ಈಗ ಅಮೃತ ಮಹೋತ್ಸವದ ಸುವರ್ಣಸಂಭ್ರಮ. ಕೇವಲ ಭಾರತದಲ್ಲಿಯಷ್ಟೆಯಲ್ಲ, ವಿದೇಶದಲ್ಲೂ ಸಂವಿಧಾನದ ರೂಪುರೇಷೆಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಸಂವಿಧಾನ ನಮ್ಮೆಲ್ಲರಿಗೂ ಆಶಾದೀಪ ಎಂದರು.
ತಾ. ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು, ಸಂವಿಧಾನದ ಮಾರ್ಗದರ್ಶನದ ಫಲವಾಗಿ ಇಂದು ನಾವೆಲ್ಲರೂ ಉತ್ತಮ ಆಡಳಿತ, ಉತ್ತಮ ಬದುಕನ್ನು ಹೊಂದಿದ್ದೇವೆ. ಸಂವಿಧಾನ ನಮ್ಮೆಲ್ಲರ ಆಶಾದೀಪವಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾರಿಯರ್ಸ್ ವಿದ್ಯಾಸಂಸ್ಥೆ ಅಧ್ಯಕ್ಷೆ ಉಷಾಲೋಕನಾಥ ವಹಿಸಿದ್ದರು. ವಕೀಲರ ಸಂಘದ ಉಪಾಧ್ಯಕ್ಷ ಬಿ.ಪಾಲಯ್ಯ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಟಿ.ರುದ್ರಯ್ಯ, ವಕೀಲ ದೊರೆನಾಗರಾಜ ಸಂಸ್ಥೆ ಕಾರ್ಯದರ್ಶಿ ಸುಭಾಷ್‌ಲೋಕನಾಥ, ಸಂಸ್ಥೆ ಖಜಾಂಚಿ ಎಲ್.ಮಾರುತಿ ಭಾಗವಹಿಸಿದ್ದರು.
-----ಪೋಟೋ:ಚಳ್ಳಕೆರೆ ನಗರದ ವಾರಿರ‍್ಸ್ ಶಾಲೆಯಲ್ಲಿ ಭಾರತ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ನ್ಯಾಯಾಧೀಶ ಶಮೀರ್ ಪಿ.ನಂದ್ಯಾಲ್ ಉದ್ಘಾಟಿಸಿದರು.
೨೭ಸಿಎಲ್‌ಕೆ೩