ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಿಜೆಪಿ ಎರಡೂ ಬಾರಿ ಸುಳ್ಳು ಹೇಳಿ, ಮತದಾರರನ್ನು ಮರಳು ಮಾಡಿ ಅಧಿಕಾರ ಹಿಡಿಯಿತು. ಆದರೆ, ಈ ಬಾರಿ ಸುಳ್ಳುಗಳಿಗೆ ಮರುಳಾಗಿ ಮತ್ತೆ ಅವರಿಗೆ ಅವಕಾಶ ನೀಡಬಾರದು. ಇದು ಅಭಿವೃದ್ಧಿ ಮತ್ತು ಸುಳ್ಳಿನ ಕಂತೆಗಳ ಸೃಷ್ಟಿಕರ್ತರ ನಡುವಿನ ಚುನಾವಣೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಕಾಂಗ್ರೆಸ್ ಕಚೇರಿ ಬಳಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸುಳ್ಳನ್ನು ಸತ್ಯ ಎಂದು ನಂಬಿಸುವ ವ್ಯವಸ್ಥಿತ ತಂಡ ಬಿಜೆಪಿಯಲ್ಲಿದೆ. ಹತ್ತು ವರ್ಷ ನರೇಂದ್ರ ಮೋದಿ ಅವರು ಸುಳ್ಳು ಹೇಳಿ ಕಾಲಹರಣ ಮಾಡಿದರು. ಆಡಳಿತ ವೈಫಲ್ಯವೇ ಅವರ ಸಾಧನೆ. ಆದರೂ ಮೋದಿ ಸರ್ಕಾರ ಏನೋ ಸಾಧನೆ ಮಾಡಿದೆ ಎಂದು ನಂಬಿಸುವಂತೆ ಮಾರ್ಕೆಟಿಂಗ್ ಮಾಡುವ ತಂಡ ಬಿಜೆಪಿಯಲ್ಲಿದೆ. ನಾವು ಅವರನ್ನು ಅಂಧ ಭಕ್ತರು ಎಂದು ಕರೆಯುತ್ತೇವೆ ಎಂದರು.
ಚಕ್ರವರ್ತಿ ಸೂಲಿಬೆಲೆ ಅವರು ಪ್ರಧಾನಿ ಮೋದಿ ಅವರನ್ನು ಗುಣಗಾನ ಮಾಡಿ ಮಾತನಾಡಿದ್ದೇ ಮಾತನಾಡಿದ್ದು. ಆದರೆ, ಅವರು ಹೇಳಿದ ಎಲ್ಲ ಮಾತುಗಳೂ ಸುಳ್ಳೇ. ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣ ಇದುವರೆಗೆ ಏಕೆ ತರಲಿಲ್ಲ ಎಂದು ಅವರನ್ನು ಪ್ರಶ್ನೆ ಮಾಡಬೇಕಿದೆ. ಕಾಂಗ್ರೆಸ್ ಕಾರ್ಯಕರ್ತರೂ ಬಿಜೆಪಿ ಮಾರ್ಕೆಟಿಂಗ್ ತಂಡದಂತೆ ಕೆಲಸ ಮಾಡಬೇಕು. ಆದರೆ, ಸುಳ್ಳು ಹೇಳುವ ಅಗತ್ಯವಿಲ್ಲ. ನಮ್ಮ ಸರ್ಕಾರ ಮಾಡಿರುವ ಸಾಧನೆಗಳನ್ನು ಮತದಾರರಿಗ ತಲುಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು.ಬಿಜೆಪಿ ಸಂಕಲ್ಪ ಪತ್ರ ಬಿಡುಗಡೆ ಮಾಡಿದೆ. ಆದರೆ, ಸಂಕಲ್ಪ ಪತ್ರದಲ್ಲಿ ಪ್ರಸ್ತಾಪ ಮಾಡಿರುವ ವಿಷಯಗಳು ಅವರ ಡಿಕ್ಷನರಿಯಲ್ಲೇ ಇಲ್ಲ. ರೈತರು, ಯುವಕರು, ಮಹಿಳೆಯರ ಬಗ್ಗೆ ಮಾತನಾಡುವ ನೈತಿಕತೆಯೇ ಬಿಜೆಪಿಗೆ ಇಲ್ಲ. ಹಲವು ಬೇಡಿಕೆಗಳ ಈಡೇರಿಕೆಗೆ ರೈತರು ಹೋರಾಟ ಮಾಡಿದರೆ ಸ್ಪಂದಿಸಲಿಲ್ಲ. ಮಣಿಪುರ ಸೇರಿದಂತೆ ದೇಶದ ಹಲವೆಡೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದರೂ ಕ್ರಮ ಕೈಗೊಳ್ಳಲಿಲ್ಲ ಎಂದು ವಾಗ್ದಾಳಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಮಾತನಾಡಿ, ಮಾತು ಮತ್ತು ಕೃತಿಗೆ ಸಾಮ್ಯ ಇಲ್ಲದ ಕೇಂದ್ರ ಸರ್ಕಾರ. ಸಂಕಲ್ಪ ಪತ್ರ ಬಿಡುಗಡೆ ಮಾಡಿ ರೈತರ ಬಗ್ಗೆ ಕಳಕಳಿಯ ಮಾತುಗಳನ್ನಾಡಿದ್ದಾರೆ. ಆದರೆ, ರಾಜ್ಯ ಸತತ ಎರಡು ಬರಗಾಲ ಎದುರಿಸಿದೆ. ಬರ ಪರಿಹಾರ ನೀಡಲು ನೆರವು ಬಿಡುಗಡೆ ಮಾಡಿ ಎಂದರೆ ಗ್ಯಾರಂಟಿ ಯೋಜನೆಗೆ ಹಣ ಖರ್ಚು ಮಾಡಿ ಬೊಕ್ಕಸ ಖಾಲಿ ಮಾಡಿಕೊಂಡು ನಮ್ಮ ಬಳಿ ಬಂದಿದ್ದೀರಾ? ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಇಂಥ ಕೇಂದ್ರ ಸರ್ಕಾರ ನಮಗೆ ಬೇಕಾ? ಎಂದು ಪ್ರಶ್ನಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಶಾಸಕರಾದ ಜೆ.ಟಿ. ಪಾಟೀಲ, ಎಚ್.ವೈ. ಮೇಟಿ, ಕೆಪಿಸಿಸಿ ಉಪಾಧ್ಯಕ್ಷ ಅಜಯಕುಮಾರ ಸರನಾಯಕ, ಎಂ.ಬಿ. ಸೌದಾಗಾರ್ ಮಾತನಾಡಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ರಕ್ಷಿತಾ ಈಟಿ, ಜಿಪಂ ಮಾಜಿ ಅಧ್ಯಕ್ಷೆ ಮಾಯಕ್ಕ ಮೇಟಿ ಮತ್ತಿತರರು ವೇದಿಕೆಯಲ್ಲಿದ್ದರು.
--ಕೋಟ್
ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಇಂದು ಮೋದಿ ಪಕ್ಕ ಕುಳಿತು ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು ಎಂದು ಹೇಳುತ್ತಿದ್ದಾರೆ. ಇದು ಜೆಡಿಎಸ್‌ಗೆ ಒದಗಿಬಂದಿರುವ ದುಸ್ಥಿತಿ.ಎಸ್.ಜಿ. ನಂಜಯ್ಯನಮಠ
ಅಧ್ಯಕ್ಷರು, ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಸಮಿತಿ;Resize=(128,128))
;Resize=(128,128))