ಕೊಪ್ಪಳ ಬಳಿ ₹54 ಸಾವಿರ ಕೋಟಿ ವೆಚ್ಚದ ಸ್ಟೀಲ್ ಪ್ಲಾಂಟ್‌ಗೆ ಸರ್ಕಾರ ಅಸ್ತು

| Published : Feb 12 2025, 12:35 AM IST

ಕೊಪ್ಪಳ ಬಳಿ ₹54 ಸಾವಿರ ಕೋಟಿ ವೆಚ್ಚದ ಸ್ಟೀಲ್ ಪ್ಲಾಂಟ್‌ಗೆ ಸರ್ಕಾರ ಅಸ್ತು
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಕೇಂದ್ರ ಕೊಪ್ಪಳ ನಗರಕ್ಕೆ ಹೊಂದಿಕೊಂಡು ಈಗಾಗಲೇ ಭೂ ಸ್ವಾಧೀನ ಮಾಡಿಕೊಂಡು ಕಾಂಪೌಂಡ್ ಹಾಕಲಾಗಿರುವ ಜಾಗೆಯಲ್ಲಿ ರಾಜ್ಯದಲ್ಲಿಯೇ ಅತೀ ದೊಡ್ಡ ಸ್ಟೀಲ್ ಕಾರ್ಖಾನೆ ಹಾಕಲು ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯ ಸರ್ಕಾರ ಅಸ್ತು ಎಂದಿದೆ.

ಪ್ರತಿ ವರ್ಷ 10.50 ಮಿಲಿಯನ್ ಟನ್ ಉತ್ಪಾದನೆ ಸಾಮರ್ಥ್ಯ

ರಾಜ್ಯದ ಎರಡನೇ ದೊಡ್ಡ ಸ್ಟೀಲ್ ಪ್ಲಾಂಟ್, 15 ಸಾವಿರ ಉದ್ಯೋಗ ಸೃಷ್ಟಿ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲಾ ಕೇಂದ್ರ ಕೊಪ್ಪಳ ನಗರಕ್ಕೆ ಹೊಂದಿಕೊಂಡು ಈಗಾಗಲೇ ಭೂ ಸ್ವಾಧೀನ ಮಾಡಿಕೊಂಡು ಕಾಂಪೌಂಡ್ ಹಾಕಲಾಗಿರುವ ಜಾಗೆಯಲ್ಲಿ ರಾಜ್ಯದಲ್ಲಿಯೇ ಅತೀ ದೊಡ್ಡ ಸ್ಟೀಲ್ ಕಾರ್ಖಾನೆ ಹಾಕಲು ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯ ಸರ್ಕಾರ ಅಸ್ತು ಎಂದಿದೆ.

ಮಂಗಳವಾರ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಈ ಕುರಿತು ಒಡಂಬಡಿಕೆಗೆ ರುಜು ಹಾಕಿದ್ದು, ಕೊಪ್ಪಳ ಬಳಿ ರಾಜ್ಯದಲ್ಲಿಯೇ ಎರಡನೇ ಅತೀ ದೊಡ್ಡ ಸ್ಟೀಲ್ ಕಾರ್ಖಾನೆ ತಲೆ ಎತ್ತಲಿದೆ.

ಸುಮಾರು ₹54 ಸಾವಿರ ಕೋಟಿ ವೆಚ್ಚದ ಬಲ್ಡೋಟಾ ಸ್ಟೀಲ್ ಮತ್ತು ಪವರ್ ಲಿಮಿಟೆಟ್ (ಬಿಎಸ್ ಪಿಎಲ್ ) ಕಂಪನಿಯ ಪ್ರಸ್ತಾವನೆಗೆ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹಾಗೂ ಬಿಎಸ್ ಪಿಎಲ್ ಕಂಪನಿಯ ರಾಹುಲ್ ಬಲ್ಡೋಟಾ ಪರಸ್ಪರ ರುಜು ಹಾಕಿದ್ದಾರೆ. ಈ ಕುರಿತು ಕಂಪನಿಯ ಪ್ರತಿನಿಧಿಯೋರ್ವರು ಕನ್ನಡಪ್ರಭಕ್ಕೆ ಮಾಹಿತಿ ಖಚಿತಪಡಿಸಿದ್ದಾರೆ.

ಕಳೆದ ಹತ್ತು ವರ್ಷಗಳ ಹಿಂದೆಯೇ ರೂಪಗೊಂಡಿರುವ ಈ ಯೋಜನೆಗೆ ಈಗ ಮೂರ್ತ ಸ್ವರೂಪ ದೊರೆಯುತ್ತಿದೆ.

ಬಲ್ಡೋಟಾ ಕಂಪನಿ ಈ ಕುರಿತ ಪ್ರಸ್ತಾವನೆಯನ್ನು ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೂ ಮುನ್ನವೇ ಸಲ್ಲಿಕೆ ಮಾಡಿದ್ದು, ರಾಜ್ಯ ಸರ್ಕಾರ ಬಂಡವಾಳ ಹೂಡಿಕೆದಾರರ ಸಮಾವೇಶದ ಮೊದಲ ದಿನವೇ ಅಸ್ತು ಎಂದಿದೆ.

10.50 ಮಿಲಿಯನ್ ಟನ್:

ಬಲ್ಡೋಟಾ ಕಂಪನಿ ಕೊಪ್ಪಳ ಬಳಿ ತನ್ನ ಉದ್ದೇಶಿತ ಕಾರ್ಖಾನೆಯಲ್ಲಿ ವಾರ್ಷಿಕ 10.50 ಮಿಲಿಯನ್ ಟನ್ ಉತ್ಪಾದನೆ ಗುರಿ ಹೊಂದಲಾಗಿದ್ದು, ಸುಮಾರು 15 ಸಾವಿರ ನೇರ ಉದ್ಯೋಗ ಸೃಷ್ಟಿಯಾಗುತ್ತವೆ ಎಂದಿದೆ. ₹54 ಸಾವಿರ ಕೋಟಿ ರುಪಾಯಿ ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ ಒಡಂಬಡಿಕೆ ಪತ್ರದಲ್ಲಿ ಕಂಪನಿ ಹೇಳಿಕೊಂಡಿದೆ.

ಬಳ್ಳಾರಿ ಜಿಲ್ಲೆಯಲ್ಲಿರುವ ಜಿಂದಾಲ್ ಕಾರ್ಖಾನೆಯಲ್ಲಿ ವಾರ್ಷಿಕ 15 ಮಿಲಿಯನ್ ಟನ್ ಉತ್ಪಾದನೆ ಮಾಡಲಾಗುತ್ತದೆ. ಆದರೆ, ಇದಕ್ಕಾಗಿ ಅದು 15 ಸಾವಿರ ಎಕರೆ ವಿಶಾಲವಾದ ಪ್ರದೇಶ ಹೊಂದಿದೆ. ಆದರೆ, ಕೊಪ್ಪಳ ಬಳಿ ಬಲ್ಡೋಟಾ ಹೊಂದಿರುವ ಭೂಮಿ 980 ಎಕರೆ ಮಾತ್ರ. ಹೀಗಿರುವಾಗ ಜಿಂದಾಲ್ ನ ಶೇ. 80ರಷ್ಟು ಉತ್ಪಾದನೆ ಹೇಗೆ ಮಾಡಲಿದೆ ಎನ್ನುವುದು ಪ್ರಶ್ನಾರ್ಹವಾಗಿದೆ. ಅಥವಾ ಮುಂದಿನ ದಿನಗಳಲ್ಲಿ ಇನ್ನಷ್ಟು ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಿದೆಯೇ ಎನ್ನುವುದನ್ನು ಕಂಪನಿಯೇ ಹೇಳಬೇಕು.

ಆಧುನಿಕ ತಂತ್ರಜ್ಞಾನ ಇದೆ ಎನ್ನಲಾಗುತ್ತಿದೆಯಾದರೂ ಕೇವಲ 980 ಎಕರೆ ಪ್ರದೇಶದಲ್ಲಿ ಇಷ್ಟೊಂದು ಬೃಹತ್ ಕಾರ್ಖಾನೆ ತಲೆ ಎತ್ತಿದ್ದೇ ಆದರೆ ಅದಕ್ಕೆ ಹೊಂದಿಕೊಂಡು ಇರುವ ಜಿಲ್ಲಾ ಕೇಂದ್ರವಾಗಿರುವ ಕೊಪ್ಪಳದ ಗತಿ ಏನು ಎನ್ನುವುದು ಈಗ ಎದ್ದಿರುವ ಪ್ರಶ್ನೆಯಾಗಿದೆ.

ಈಗಾಗಲೇ ಎಂಎಸ್ ಪಿಎಲ್ ಮತ್ತು ಆರೆಸ್ ಸ್ಟೀಲ್ ಕಂಪನಿಯ ತನ್ನ ಉತ್ಪಾದನೆ ಮಾಡುತ್ತಿದ್ದು, ಇದರ ಮುಂದುವರೆದ ಭಾಗವಾಗಿ ಈಗ ₹54 ಸಾವಿರ ಕೋಟಿ ವೆಚ್ಚದಲ್ಲಿ ಬೃಹತ್ ಕಾರ್ಖಾನೆಯನ್ನು ಬಿಎಸ್ ಪಿಎಲ್ ಕಂಪನಿಯ ಅಡಿಯಲ್ಲಿ ಪ್ರಾರಂಭಿಸಲಿದೆ ಎನ್ನಲಾಗುತ್ತಿದೆ.