ದೇಶದಲ್ಲಿ ದೊಡ್ಡ ಮೆಣಸಿನಕಾಯಿ ಮಾರುಕಟ್ಟೆ ಉಳಿಸಿ ಬೆಳೆಸುವಲ್ಲಿ ರೈತರು, ದಲಾಲರು, ಖರೀದಿದಾರರ ಸಹಕಾರ ಅಗತ್ಯವಾಗಿದೆ. ಮಾರುಕಟ್ಟೆಗೆ ಸೂಕ್ತ ಭದ್ರತೆ ಸೇರಿದಂತೆ ಅಭಿವೃದ್ಧಿಗೆ ಸರ್ಕಾರದಿಂದ ನೆರವು ಒದಗಿಸುವುದಾಗಿ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ಬ್ಯಾಡಗಿ: ದೇಶದಲ್ಲಿ ದೊಡ್ಡ ಮೆಣಸಿನಕಾಯಿ ಮಾರುಕಟ್ಟೆ ಉಳಿಸಿ ಬೆಳೆಸುವಲ್ಲಿ ರೈತರು, ದಲಾಲರು, ಖರೀದಿದಾರರ ಸಹಕಾರ ಅಗತ್ಯವಾಗಿದೆ. ಮಾರುಕಟ್ಟೆಗೆ ಸೂಕ್ತ ಭದ್ರತೆ ಸೇರಿದಂತೆ ಅಭಿವೃದ್ಧಿಗೆ ಸರ್ಕಾರದಿಂದ ನೆರವು ಒದಗಿಸುವುದಾಗಿ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ಪಟ್ಟಣದ ಎಪಿಎಂಸಿ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಶುಕ್ರವಾರ ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು.

1950 ದಶಕದಲ್ಲಿ ಆರಂಭವಾದ ಮೆಣಸಿನಕಾಯಿ ಮಾರುಕಟ್ಟೆ ಈಗ ದೇಶಾದ್ಯಂತ ತನ್ನ ಖ್ಯಾತಿ ವಿಸ್ತರಿಸಿಕೊಂಡಿದೆ.ಆಂಧ್ರಪ್ರದೇಶದ ಗುಂಟೂರು ಹೊರತುಪಡಿಸಿ ಏಷ್ಯಾದಲ್ಲಿ ಅತಿದೊಡ್ಡ ಮಾರುಕಟ್ಟೆ ಸ್ಥಾನ ಬ್ಯಾಡಗಿ ಪಡೆದಿದ್ದು, ಮೆಣಸಿನಕಾಯಿ ಬೆಲೆ ಇಳಿಮುಖವಾದಲ್ಲಿ ಕಮೀಷನ್‌ ಏಜೆಂಟರು ಖರೀದಿದಾರರ ಜೊತೆ ಮಾತನಾಡಿ, ರೈತರಿಗೆ ಇನ್ನಷ್ಟು ಬೆಲೆ ಕೊಡಿಸಲು ಯತ್ನಿಸಬೇಕು. ಅವರಿಗೆ ತೃಪ್ತಿಯಾಗದಿದ್ದಲ್ಲಿ ಮರುದಿನ ಟೆಂಡರ್‌ಗೆ ಹಾಕಲು ಮನವರಿಕೆ ಮಾಡಬೇಕೆ ಹೊರತು, ಬೆಲೆ ಕುಸಿತದಿಂದ ಆಕ್ರೋಶಗೊಂಡ ರೈತರನ್ನು ಎಪಿಎಂಸಿ ಕಾರ್ಯಾಲಯಕ್ಕೆ ಕಳುಹಿಸುವುದಲ್ಲ. ಮಾರುಕಟ್ಟೆ ವ್ಯವಸ್ಥಿತವಾಗಿರಲು ಎಲ್ಲರ ಸಹಕಾರ ಮುಖ್ಯವಾಗಿದ್ದು, ಸಮಸ್ಯೆಗಳಿದ್ದಲ್ಲಿ ಮುಕ್ತವಾಗಿ ಚರ್ಚಿಸೋಣ ಎಂದರು.

ಜಿಲ್ಲಾಧಿಕಾರಿ ಡಾ. ಮಹಾಂತೇಶ ದಾನಮ್ಮನವರ ಮಾತನಾಡಿ, ಮಾರುಕಟ್ಟೆಯಲ್ಲಿ ಸೂಕ್ತ ಭದ್ರತೆ, ರೈತರಿಗೆ ಮೂಲಭೂತ ಸೌಲಭ್ಯಗಳು, ತೂಕದ ಯಂತ್ರಗಳಿಗೆ ಮಾಪನ ಇಲಾಖೆಯವರು ಸೀಲ್ ಮಾಡುವುದು, 39 ತೂಕದ ಸಿಬ್ಬಂದಿಗಳ (ವೇಮೆನ್) ಕಾರ್ಯ ನಿರ್ವಹಣೆ ಮೇಲೆ ನಿಗಾಯಿಡಬೇಕು, ಅಗತ್ಯವಾದಲ್ಲಿ ಗ್ರೇಡಿಂಗ್ ಸಿಬ್ಬಂದಿ ನೇಮಕ, ರೈತರಿಗೆ ಬೆಲೆ ವ್ಯತ್ಯಾಸ, ನಿಯಮಗಳು, ಎಚ್ಚರಿಕೆ ಇತ್ಯಾದಿಗಳ ಕುರಿತು ಧ್ವನಿ ವರ್ಧಕಗಳಲ್ಲಿ ಮಾಹಿತಿ ನೀಡುವಂತೆ ಸೂಚಿಸಿದರು.

ಮಾಜಿ ಶಾಸಕ ಹಾಗೂ ಮೆಣಸಿನಕಾಯಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ಮಾತನಾಡಿ, ಬ್ಯಾಡಗಿಯ ಮಾರುಕಟ್ಟೆಗೆ ರೈತರು ಮೆಣಸಿನಕಾಯಿ ತರಬೇಕಿದೆ. ನೀರು ಸಿಂಪಡಿಸಿದಲ್ಲಿ ಗುಣಮಟ್ಟ ಕಳೆದುಕೊಳ್ಳುವ ಮೂಲಕ ಬೆಲೆ ಇಳಿಕೆಯಾಗಲಿದೆ. ಖರೀದಿ ಬಳಿಕ ಎಲ್ಲ ಚೀಲಗಳನ್ನು ಕಡ್ಡಾಯವಾಗಿ ಒಣಗಿಸಿ ತುಂಬಲೇಬೇಕಿದೆ. ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಮೆಣಸಿನಕಾಯಿ ಗುಣಮಟ್ಟಕ್ಕೆ ಹಾನಿಯಾಗಿ ಬಣ್ಣ ಕಳೆದುಕೊಳ್ಳಲಿದೆ.ಇಂತಹ ಕಾಯಿ ಅಥವಾ ಪೌಡರ ರಪ್ತುಮಾಡಿದಾಗ ಗ್ರೇಡಿಂಗ್ ಸಮಸ್ಯೆ ಉದ್ಭವಿಸಿ, ಖರೀದಿದಾರರು ದೊಡ್ಡನಷ್ಟ ಅನುಭವಿಸುವ ಮೂಲಕ ಮಾರುಕಟ್ಟೆಯ ಖ್ಯಾತಿಗೆ ಧಕ್ಕೆಯಾಗಲಿದೆ, ಎಪಿಎಂಸಿ ವತಿಯಿಂದ ಎಲ್ಲ ಅಂಗಡಿಗಳಿಗೆ ಗ್ರೇಡಿಂಗ್ ಮಾಡಲು ಸಿಬ್ಬಂದಿ ನೇಮಿಸಿ, ಗುಣಮಟ್ಟ ಕೊರತೆಯಿರುವ ಲಾಟ್‌ ತಿರಸ್ಕರಿಸುವ ತಾಂತ್ರಿಕ ವ್ಯವಸ್ಥೆ ಮಾಡಬೇಕಿದೆ ಎಂದು ಒತ್ತಾಯಿಸಿದರು.ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಮಾತನಾಡಿ, ಮಾರುಕಟ್ಟೆ ದಲ್ಲಾಲಿ ಅಂಗಡಿಗಳ ಒಳಗೆ ಹಾಗೂ ಆವರಣ ಕಾಣಿಸುವಂತೆ, ಹಗಲು ರಾತ್ರಿ ದೃಶ್ಯಾವಳಿ ಕಾಣುವ, ಒಂದು ತಿಂಗಳ ಕಾಲ ಸೆರೆ ಹಿಡಿದ ಚಿತ್ರ ಸಂಗ್ರಹಿಸುವ ಸಾಮರ್ಥ್ಯದ ಸಿಸಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು, ಮೆಣಸಿನಕಾಯಿ ಮಾರುಕಟ್ಟೆಗೆ 24*7 ಮಾದರಿಯಲ್ಲಿ ಪೊಲೀಸ್‌ ಸಿಬ್ಬಂದಿಗಳನ್ನು ಶಿಫ್ಟ ಮಾದರಿಯಲ್ಲಿ ಭದ್ರತೆ ಒದಗಿಸುತ್ತೇವೆ ಎಂದರು.ಸಭೆಯಲ್ಲಿ ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ತಾಲೂಕಾಧ್ಯಕ್ಷ ಶಂಭನಗೌಡ ಪಾಟೀಲ, ವರ್ತಕರಾದ ರಾಜು ಮೋರಗೇರಿ, ಮಾಲತೇಶ ಅರಳೀಮಟ್ಟಿ, ಚನ್ನಬಸಪ್ಪ ಹುಲ್ಲತ್ತಿ, ಉಳಿವೆಪ್ಪ ಕಬ್ಬೂರು, ರಾಮಣ್ಣ ಉಕ್ಕುಂದ ಎಪಿಎಂಸಿ ಕಾರ್ಯದರ್ಶಿ ಡಿ.ಬಿ. ಆದರ್ಶ ಹಾಗೂ ಇತರರರಿದ್ದರು.