ಸಾರಾಂಶ
ಸುಮಾರು ಮೂರು ದಶಕಗಳ ಹಿಂದೆಯೇ ತಹಸೀಲ್ದಾರ್ ಕಚೇರಿಗೆ ಹೊಂದಿಕೊಂಡಂತೆ ಇದ್ದ ಬಯಲು ರಂಗ ಮಂದಿರ ನೆಲಸಮ ಮಾಡಿ ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿತ್ತು. ಆದರೂ ಯಾವುದೋ ಲೆಕ್ಕಾಚಾರದಿಂದಾಗಿ ಮತ್ತೊಂದು ಬಸ್ ನಿಲ್ದಾಣ ನಿರ್ಮಿಸಲಾಯಿತು. ನಿಲ್ದಾಣದಲ್ಲಿ ಬಸ್ಸೂ ಇಲ್ಲ, ಪ್ರಯಾಣಿಕರೂ ಇಲ್ಲ
ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ
ದಶಕದ ಹಿಂದೆ ಸುಸಜ್ಜಿತವಾಗಿ ನಿರ್ಮಾಣ ಮಾಡಿದ ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಇದುವರೆಗೂ ಬಳಕೆಯಾಗದ ಕಾರಣ ಹೆಸರಿಗಷ್ಟೇ ನಿಲ್ದಾಣವಾಗಿ ಉಳಿದಿದ್ದು, ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗುತ್ತದೆ.ಶ್ರೀನಿವಾಸಪುರದಿಂದ ಕೋಲಾರಕ್ಕೆ ಹೋಗುವ ಮಾರ್ಗದಲ್ಲಿರುವ ಸಾರಿಗೆ ಸಂಸ್ಥೆ ಘಟಕದ ಪಕ್ಕದಲ್ಲೇ, ನಿರ್ಮಾಣ ಮಾಡಿರುವ ಬಸ್ ನಿಲ್ದಾಣದಲ್ಲಿ ಏಕಕಾಲಕ್ಕೆ ಒಂಬತ್ತು ಬಸ್ಸುಗಳನ್ನು ನಿಲ್ಲಿಸಬಹುದಾಗಿದೆ. ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಬಸ್ ನಿಲ್ದಾಣಕ್ಕೆ ಗುದ್ದಲಿಪೂಜೆ ಮಾಡಿದ್ದರಲ್ಲದೆ ಅವರ ಅಧಿಕಾರಾವಧಿಯಲ್ಲೇ ನಿಲ್ದಾಣದ ಲೋಕಾರ್ಪಾಣೆಯನ್ನೂ ಮಾಡಲಾಗಿತ್ತು. ಹಳೆಯ ಬಸ್ ನಿಲ್ದಾಣಸುಮಾರು ಮೂರು ದಶಕಗಳ ಹಿಂದೆಯೇ ತಹಸೀಲ್ದಾರ್ ಕಚೇರಿಗೆ ಹೊಂದಿಕೊಂಡಂತೆ ಇದ್ದ ಬಯಲು ರಂಗ ಮಂದಿರ ನೆಲಸಮ ಮಾಡಿ ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿತ್ತು. ಬಸ್ ನಿಲ್ದಾಣವನ್ನು ಕೇಂದ್ರವಾಗಿಟ್ಟುಕೊಂಡು ಒಂದೆಡೆ ರಾಮಕೃಷ್ಣ ಬಡಾವಣೆ ಇನ್ನೊಂದು ಮಗ್ಗಲಲ್ಲಿ ವೆಂಕಟೇಶ್ವರ ಬಡಾವಣೆ ರೂಪುಗೊಂಡು ಅಭಿವೃದ್ಧಿಯಾಯಿತು. ಬಸ್ ನಿಲ್ದಾಣ ಇದ್ದರೂ ಯಾವುದೋ ಲೆಕ್ಕಾಚಾರದಿಂದಾಗಿ ಮತ್ತೊಂದು ಬಸ್ ನಿಲ್ದಾಣ ನಿರ್ಮಿಸಲಾಯಿತು.ಕೋಲಾರದ ಹಳೆ ರಸ್ತೆಯಲ್ಲಿದ್ದ ಈಚಲುಕುಂಟೆ ಕೆರೆಕಟ್ಟೆ ಭಾಗದಲ್ಲಿ ಜಮೀನುಗಳು ಇದ್ದ ಮಾಲೀಕರ ಒತ್ತಡಕ್ಕೆ ಮಣಿದ ಅಂದಿನ ಶಾಸಕರು ಈ ಜಾಗದಲ್ಲಿ ಬಸ್ ನಿಲ್ದಾಣ ಮಾಡಿಸಿದರು. ಇದರಿಂದ ಈ ಪ್ರದೇಶ ವಾಣಿಜ್ಯವಾಗಿ ಅಭಿವೃದ್ಧಿಯಾಗುತ್ತದೆ ಎಂಬ ಅವರ ಲೆಕ್ಕಾಚಾರ ತಲೆಕೆಳಗಾಗಿದೆ.
ನಿಲ್ದಾಣಕ್ಕೆ ಬಾರದ ಬಸ್ಸುಗಳುಹೊಸ ಬಸ್ ನಿಲ್ದಾಣ ಪ್ರಾರಂಭವಾಯಿತು ಆರಂಭದಲ್ಲಿ ಹಳೇ ಬಸ್ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣದಕ್ಕೆ ಓಡಾಡುತ್ತಿದ್ದ ಬಸ್ಸುಗಳು ಕ್ರಮೇಣ ನಿಂತುಹೋದವು. ಕೋಲಾರ ರಸ್ತೆ ಮೂಲಕ ಹಾಗೂ ಮುಳಬಾಗಿಲು ರಸ್ತೆ ಬಳಸಿಹೋಗುವಂತ ಬಸ್ಸುಗಳು ಮಾತ್ರ ಹೊಸ ಬಸ್ ನಿಲ್ದಾಣಕ್ಕೆ ಬರುತ್ತವೆ, ಉಳಿದಂತೆ ಚಿಂತಾಮಣಿ, ಮದನಪಲ್ಲಿ, ಪುಂಗನೂರು ಭಾಗಗಳಿಗೆ ಹೋಗುವ ಬಸ್ಸುಗಳು ನೂತನ ಬಸ್ ನಿಲ್ದಾಣ ನೋಡುವುದೇ ಇಲ್ಲ. ಹಳೆ ಬಸ್ ನಿಲ್ದಾಣವನ್ನು ಕೇಂದ್ರವಾಗಿಟ್ಟುಕೊಂಡು ಮೂವತ್ತು ನಲವತ್ತು ವರ್ಷದಿಂದ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡವರು ಹೊಸ ಬಸ್ ನಿಲ್ದಾಣಕ್ಕೆ ವಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ ಗೊಂದಲಕ್ಕೆ ಸಿಲುಕಿದ ಶಾಸಕರು ತಟಸ್ಥರಾದರು.ಹೊಸ ನಿಲ್ದಾಣದ ಪರಿಸ್ಥಿತಿ
ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಹಗಲು-ರಾತ್ರಿ ಖಾಲಿಯಾಗಿರುತ್ತದೆ. ಹಗಲು ಒಂದಷ್ಟು ಜನರ ಹರಟೆ ಮಾತುಕತೆ ಎಂದು ಕೂತು ಎದ್ದೇಳುತ್ತಾರೆ, ಮಬ್ಬು ಆವರಿಸಿಕೊಳ್ಳುತ್ತಿದ್ದಂತೆ ಮದ್ಯವ್ಯಸನಿಗಳು ಸರಕು ತಂದಿಟ್ಟುಕೊಂಡು ಕೂರುತ್ತಾರೆ, ಪಾನ್ ಪರಾಗ್ ಪ್ರಿಯರು ಬರುತ್ತಾರೆ ಎಲ್ಲಂದರಲ್ಲಿ ಉಗಿದು ಚಿತ್ತಾರ ಮೂಡಿಸುತ್ತಾರೆ. ನಶೆ ಏರಿದವರು ಅಲ್ಲಿದ್ದ ಪರಿಕರಗಳನ್ನು ಎತ್ತಿ ಎಸಿಯುತ್ತಾರೆ ಇನ್ಯಾರೋ ಯುವಕರ ತಂಡ ಬರುತ್ತದೆ ಬರ್ತಡೇ ಸೆಲೆಬ್ರೇಷನ್ ಎಂದು ಕೆಕ್ ಕತ್ತರಿಸುತ್ತಾರೆ, ಕೂಗಾಡುತ್ತಾರೆ, ಕತ್ತಲು ಆವರಿಸಿದ ಬಳಿಕ ಅಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.