ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸರ್ಕಾರ ಬದ್ಧ

| Published : Sep 01 2025, 01:03 AM IST

ಸಾರಾಂಶ

ಜಿಲ್ಲೆಯ ಜನರಿಗೆ ಗುಣಮಟ್ಟ ಹಾಗೂ ಉತ್ಕೃಷ್ಟವಾದ ಲಸಿಕೆ ಮತ್ತು ಔಷಧಿಗಳು ದೊರೆತು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಎಂಎಸ್‌ಐಎಲ್‌ನ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಜಿಲ್ಲೆಯ ಜನರಿಗೆ ಗುಣಮಟ್ಟ ಹಾಗೂ ಉತ್ಕೃಷ್ಟವಾದ ಲಸಿಕೆ ಮತ್ತು ಔಷಧಿಗಳು ದೊರೆತು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಎಂಎಸ್‌ಐಎಲ್‌ನ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.

ನಗರದ ಹೊರ ವಲಯದ ಕರಿವರದರಾಜಸ್ವಾಮಿ ಬೆಟ್ಟದ ತಪ್ಪಲ್ಲಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ₹೫೫.೧೮ ಲಕ್ಷ ವೆಚ್ಚದಲ್ಲಿ ಲಸಿಕಾ ಉಗ್ರಾಣ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಈಗಾಗಲೇ ಮೆಡಿಕಲ್ ಕಾಲೇಜು ಆಸ್ಪತ್ರೆ ಆರಂಭವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಸುಸಜ್ಜಿತ ಕಟ್ಟಡಗಳ ನಿರ್ಮಾಣ ಮತ್ತು ಅಗತ್ಯ ವೈದ್ಯರು ಮತ್ತು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಇನ್ನು ಅಗತ್ಯ ಔಷಧಿ ಮತ್ತು ಲಸಿಕೆಗಳನ್ನು ದಾಸ್ತಾನು ಮಾಡಿ, ಸಕಾಲಕ್ಕೆ ವಿತರಣೆ ಮಾಡಲು ಜಿಲ್ಲಾ ಕೇಂದ್ರದಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿಯು ಗುಣಮಟ್ಟದಿಂದ ಕೂಡಿರಲಿ ಎಂದರು.

ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಚಿದಂಬರಂ ಮಾತನಾಡಿ, ಚಾಮರಾಜನಗರ ಜಿಲ್ಲೆಯಲ್ಲಿ ಲಸಿಕಾ ಉಗ್ರಾಣ ಕಟ್ಟಡ ನಿರ್ಮಾಣಕ್ಕೆ ಎನ್‌ಎಚ್‌ಎಂ ಯೋಜನೆಯಡಿಯಲ್ಲಿ ೭೭ ಲಕ್ಷ ರು. ಮಂಜೂರು ಮಾಡಲಾಗಿತ್ತು. ೫೫.೧೮ ಲಕ್ಷ ರು.ಗಳಿಗೆ ಟೆಂಡರ್ ಅನುಮೋದನೆಯಾಗಿದೆ. ಮೈಸೂರಿನ ಕೆ.ಸಿ. ಶಿವಕುಮಾರಸ್ವಾಮಿ ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದುಕೊಂಡಿದ್ದಾರೆ. ಕಟ್ಟಡವು ನೆಲ ಮಹಡಿ, ಪೋಟಿಕೋ ಒಳಗೊಂಡಿದ್ದು, ಕಚೇರಿ ಮತ್ತು ಕಂಪ್ಯೂಟರ್ ಕೊಠಡಿ, ಡಿವಿಎಸ್ ಕೊಠಡಿ, ಕೋಲ್ಡ್ ಚೈನ್ ವರ್ಕ ಷಾಪ್, ಉಗ್ರಾಣ ಕೊಠಡಿ, ಜನರೇಟರ್ ಕೊಠಡಿ, ಶೌಚಾಲಯ ಮತ್ತು ಇನ್ನಿತರ ಸೌಲಭ್ಯವನ್ನು ಒಳಗೊಂಡಿರುತ್ತದೆ. ಆರೋಗ್ಯ ಇಲಾಖೆಗೆ ಸೇರಿದ ಈ ಜಾಗದಲ್ಲಿ ಸುತ್ತುಗೋಡೆ ನಿರ್ಮಾಣ ವಾಗಬೇಕಾಗಿದೆ. ಶಾಸಕರು ತಮ್ಮ ಅನುದಾನದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದರು.

ಜಿಪಂ ಸಿಇಒ ಮೋನಾ ರೋತ್, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್( ಮುನ್ನಾ), ಶಿವಪುರ ಗ್ರಾ.ಪಂ. ಅಧ್ಯಕ್ಷೆ ನಾಗಮ್ಮ, ನಗರಸಭಾ ಸದಸ್ಯರು, ಮುಖಂಡರಾದ ಸೈಯದ್ ರಫಿ, ಪಿ. ಕುಮಾರನಾಯ್ಕ್, ಆರೋಗ್ಯ ಇಲಾಖೆಯ ಎಇಇ ಗುರುಪ್ರಸಾದ್, ಎಂಜಿನಿಯರ್‌ಗಳಾದ ಜಗದೀಶ್, ಕಲ್ಯಾಣಸ್ವಾಮಿ, ಗುತ್ತಿಗೆದಾರ ಕೆ.ಸಿ. ಶಿವಕುಮಾರ್, ಹರೀಶ್ ಮೊದಲಾದವರು ಇದ್ದರು.