- ಅಧಿವೇಶನದಲ್ಲಿ ಬರ ಘೋಷಣೆ, ರೈತರಿಗೆ ಮಧ್ಯಂತರ ನಷ್ಟ ಭರಿಸಲು ಕ್ರಮ : ಸಚಿವ ಈಶ್ವರ ಖಂಡ್ರೆ ಭರವಸೆಕನ್ನಡಪ್ರಭ ವಾರ್ತೆ ಬೀದರ್
ಜೂನ್ ಮತ್ತು ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ಮಳೆ ಅಭಾವದಿಂದ ಸಂಪೂರ್ಣ ಬೆಳೆಗಳು ಹಾಳಾಗಿದ್ದು, ಬರ ಜಿಲ್ಲೆಯನ್ನಾಗಿ ಘೋಷಿಸಲು ಅಧಿವೇಶನದಲ್ಲಿ ಚರ್ಚಿಸಲಾಗುವದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಪ್ರಕೃತಿ ವಿಕೋಪ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಬರ, ಕುಡಿಯುವ ನೀರು ಹಾಗೂ ಇತರೆ ವಿಷಯಗಳ ಬಗ್ಗೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಉಂಟಾಗಿರುವ ಮಳೆ ಅಭಾವ ಹಾಗೂ ತೇವಾಂಶ ಕೊರತೆಯಿಂದಾಗಿ ಬೆಳೆ ನಷ್ಟ ಎದುರಿಸುತ್ತಿರುವ ರೈತರ ನೆರವಿಗೆ ಸರ್ಕಾರ ತಕ್ಷಣವೇ ಧಾವಿಸಲಿದೆ ಸಚಿವರು ಅಭಯ ನೀಡಿದರು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 4.12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ ಮಳೆಯ ಸುರಿಯುವಿಕೆ ಯಲ್ಲಿ ಆದ ಏರುಪೇರು ಹಾಗೂ ಸುದೀರ್ಘ ಒಣ ಹವೆಯಿಂದಾಗಿ ಬಿತ್ತನೆಯಾಗಿರುವ ಹೆಸರು, ಉದ್ದು ಸೇರಿದಂತೆ ಪ್ರಮುಖ ಬೆಳೆಗಳು ಮಳೆ ಕೊರತೆಯಿಂದ ಒಣಗಿ ಹಾಳಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಭದ್ಧವಿದೆ ಎಂದರು.ಈ ಹಿನ್ನೆಲೆಯಲ್ಲಿ ಬೆಳೆ ವಿಮೆ ಯೋಜನೆಯಡಿಯ ‘ಮಿಡ್-ಸೀಸನ್ ಅಡ್ವರ್ಸಿಟಿ’ (ಮಧ್ಯಂತರ ಬೆಳೆ ಹಾನಿ) ನಿಯಮಗಳನ್ನು ಸಕ್ರಿಯಗೊಳಿಸಲು ಕೃಷಿ ಇಲಾಖೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೃಷಿ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಆಯುಕ್ತರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಮುಖ್ಯಮಂತ್ರಿ ಗಳ ಗಮನಕ್ಕೂ ಈ ವಿಚಾರವನ್ನು ತರಲಾಗಿದೆ. ಸರ್ಕಾರ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಮಾನದಂಡಗಳ ಪ್ರಕಾರ ರೈತರಿಗೆ ಪರಿಹಾರ ತಲುಪಿಸಲು ಬದ್ಧವಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ರೈತರ ಬೆಳೆ ವಿಮೆ ಮತ್ತು ಬೆಳೆ ನಷ್ಟ ಪರಿಹಾರದ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಪ್ರಸಕ್ತ ಸಾಲಿನಲ್ಲಿ ಸಾಲ ಪಡೆದ ಹಾಗೂ ಪಡೆಯದ ಸುಮಾರು 2.5 ಲಕ್ಷಕ್ಕೂ ಹೆಚ್ಚು ರೈತರು ವಿಮೆ ನೋಂದಣಿ ಮಾಡಿಸಿಕೊಂಡಿದ್ದು, ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ಮಧ್ಯಂತರ ಬೆಳೆ ನಷ್ಟದ ಸರಿಯಾದ ವರದಿ ತಯಾರಿಸಬೇಕು ಎಂದು ಸೂಚಿಸಿ ಜಿಲ್ಲೆಗೆ ಬೆಳೆ ವಿಮೆಯಡಿ ಈಗಾಗಲೇ 236 ಕೋಟಿ ರೂಪಾಯಿ ಪರಿಹಾರ ಬಿಡುಗಡೆಯಾಗಿದೆ ಎಂದರು.
ಜಿಲ್ಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ಜಲ ಜೀವನ್ ಮಿಷನ್ (ಎಎಒ) ಯೋಜನೆಯ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ಪೂರ್ಣಗೊಳ್ಳ ದಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಅನೇಕ ಕಡೆ ಪೈಪ್‌ಲೈನ್ ಅಳವಡಿಕೆ ಮತ್ತು ಸಂಪರ್ಕ ನೀಡುವ ಕೆಲಸ ಅರ್ಧಕ್ಕೆ ನಿಂತಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕಾಮಗಾರಿಯಲ್ಲಿ ವಿಳಂಬ ಧೋರಣೆ ತೋರುತ್ತಿರುವ ಮತ್ತು ಕಳಪೆ ಕೆಲಸ ಮಾಡುತ್ತಿರುವ ಗುತ್ತಿಗೆದಾರರಿಗೆ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣವೇ ನೋಟಿಸ್ ಜಾರಿಗೊಳಿಸಿ, ಮುಂದಿನ ಸಭೆಯ ವೇಳೆಗೆ ಸಂಪೂರ್ಣ ವರದಿ ಸಲ್ಲಿಸಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡಿದರು.
ವಿಬಿಜಿ ರಾಮ್ ಜಿ ಯೋಜನೆ ಅಡಿಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತ್‌ಗಳಲ್ಲಿ ಉದ್ಯೋಗ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಆಗಸ್ಟ್ 11ರಂದು ಜಿಲ್ಲೆಯಲ್ಲಿ 20 ಸಾವಿರ ಜನರು ಉದ್ಯೋಗ ಕೈಗೊಂಡಿದ್ದಾರೆ ಇದುವರೆಗೆ ಒಟ್ಟು 3.29ಲಕ್ಷ ಮಾನವ ದಿನಗಳನ್ನು ಉತ್ಪಾದಿಸಲಾಗಿದೆ ಎಂದರು.ಕೆಲ ಗ್ರಾಮ ಪಂಚಾಯಿತಿಗಳಲ್ಲಿರುವ ನೀರು ಶುದ್ಧೀಕರಣ ಘಟಕಗಳು ಬಹುತೇಕ ಹಾಳಾಗಿದ್ದು, ಈ ಘಟಕಗಳ ನಿರ್ವಹಣೆಗೆ 3 ವರ್ಷಗಳ ಕಾಲ ಗುತ್ತಿಗೆ ನೀಡುವ ಚಿಂತನೆ ಸರ್ಕಾರ ನಡೆಸುತ್ತಿದ್ದು, ಎಲ್ಲ ನಿರ್ವಹಣೆಯನ್ನು ಗುತ್ತಿಗೆದಾರರೇ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಸಿಇಒ ಗಿರೀಶ ಬದೋಲೆ, ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.