ಸಾರಾಂಶ
Government committed to Holalkere development no matter who is in power: Dr. M. Chandrappa
-ನೂತನ ಉಪ ಆರೋಗ್ಯ ಕೇಂದ್ರದ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
----ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿಲ್ಲವೆಂದು ನಾನು ಕೈಚೆಲ್ಲಿ ಕೂತಿಲ್ಲ. ಸರ್ಕಾರ ಯಾವುದಾದರೂ ಇರಲಿ ಸಾವಿರಾರು ಕೋಟಿ ರು. ಅನುದಾನ ತಂದು ಕ್ಷೇತ್ರ ಅಭಿವೃದ್ಧಿಪಡಿಸುವ ತಾಕತ್ತು ಇಟ್ಟುಕೊಂಡಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.ತಾಲೂಕಿನ ಆರ್.ನುಲೇನೂರು ಗ್ರಾಮದಲ್ಲಿ 60 ಲಕ್ಷ ರು. ವೆಚ್ಚದಲ್ಲಿ ನೂತನ ಉಪ ಆರೋಗ್ಯ ಕೇಂದ್ರ ನಿರ್ಮಾಣದ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ರೈತರಿಗೆ ನೀರು, ವಿದ್ಯುತ್ ಬೇಕು ಎನ್ನುವುದನ್ನು ಮನಗಂಡು ಕೋಟೆಹಾಳ್ 500 ಕೋಟಿ ರು. ವೆಚ್ಚದಲ್ಲಿ 440 ಮೆ.ವ್ಯಾ. ಪವರ್ ಸ್ಟೇಷನ್ ನಿರ್ಮಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇಷ್ಟು ದೊಡ್ಡ ಪವರ್ ಸ್ಟೇಷನ್ ಎಲ್ಲಿಯೂ ಇಲ್ಲ. ಕೆರೆ, ಕಟ್ಟೆ, ಚೆಕ್‍ಡ್ಯಾಂಗಳನ್ನು ಕಟ್ಟಿಸಿದ್ದರಿಂದ ನೀರು ತುಂಬಿ ತುಳುಕುತ್ತಿದೆ. ತಾಲೂಕಿನಾದ್ಯಂತ ಪ್ರತಿ ಮನೆಗೆ ಶುದ್ಧ ಕುಡಿವ ನೀರು ಪೂರೈಸುವುದಕ್ಕಾಗಿ ಹಿರಿಯೂರಿನ ವಾಣಿವಿಲಾಸ ಸಾಗರದಲ್ಲಿ ನಲವತ್ತು ಅಡಿ ಆಳದಲ್ಲಿ ಪಿಲ್ಲರ್ ಹಾಕಿ ಮೋಟಾರ್ ಕೂರಿಸಿದ್ದೇನೆ. ಮಾರ್ಚ್ ವೇಳೆಗೆ ನೀರು ಹರಿಯಲಿದೆ. ಇದರಿಂದ ಇನ್ನೂ ಮೂವತ್ತು ವರ್ಷಗಳ ಕಾಲ ನೀರಿನ ಸಮಸ್ಯೆಯಿರುವುದಿಲ್ಲ ಎಂದರು.493 ಹಳ್ಳಿಗಳಲ್ಲಿ ಯಾರಿಂದ ಏನನ್ನು ಹೇಳಿಸಿಕೊಳ್ಳದೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಅಧಿಕಾರ ಶಾಶ್ವತವಲ್ಲ. ಇರುವಷ್ಟು ದಿನ ಹತ್ತಾರು ಜನ ಮೆಚ್ಚುವಂತೆ ಮೂವತ್ತು ವರ್ಷಗಳಿಂದಲೂ ರಾಜಕಾರಣ ಮಾಡುತ್ತಿರುವುದರಿಂದ ಐದನೆ ಬಾರಿ ಶಾಸಕನಾಗಿದ್ದೇನೆ. ಸಾರ್ವಜನಿಕರ ಬದುಕನ್ನು ಸ್ವಂತ ಬದುಕೆಂದು ಅರ್ಥಮಾಡಿಕೊಂಡು ಕೆಲಸ ಮಾಡುವ ರಾಜಕಾರಣಿ ನಾನು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣ, ಸದಸ್ಯರಾದ ಸತೀಶ್, ಮಮತಾರಾಜು, ರಂಗಮ್ಮ, ಮುರುಗೇಂದ್ರಪ್ಪ, ಗೌಡ್ರು ಜಯಣ್ಣ, ಬಸವಂತಪ್ಪ, ನುಲೇನೂರು ಎಂ.ಹೆಚ್.ಶೇಖರ್, ಶಶಿಧರ್, ಸಂದೀಪ್, ವೈದ್ಯಾಧಿಕಾರಿಗಳು ಮತ್ತು ಗ್ರಾಮದ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.------ಫೋಟೋ: ಆರ್.ನುಲೇನೂರು ಗ್ರಾಮದಲ್ಲಿ ನೂತನ ಉಪ ಆರೋಗ್ಯ ಕೇಂದ್ರದ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪನವರಿಂದ ಭೂಮಿ ಪೂಜೆ.