ಹುಬ್ಬಳ್ಳಿಯ ನಗರದ ಕೆಎಂಸಿಆರ್‌ಐ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಸಂಸದೀಯ ವ್ಯವಹಾರ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಹುಬ್ಬಳ್ಳಿ:
ನಗರದ ಕೆಎಂಸಿಆರ್‌ಐ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಸಂಸದೀಯ ವ್ಯವಹಾರ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರ ಪರವಾಗಿ ಉತ್ತರಿಸಿದರು.
ಆಸ್ಪತ್ರೆಗೆ ಕಾಯಂ ಸಿಬ್ಬಂದಿ ಮತ್ತು ವೈದ್ಯರ ವೇತನ, ಸಂಬಂಧಿತ ಇತರೇ ಬಿಲ್ಲುಗಳ ಪಾವತಿ, ಎಚ್‌ಆರ್‌ಎಂಎಸ್ ಮೂಲಕ ಭರಿಸಲಾಗಿದೆ. ವಿದ್ಯುತ್ ಹಾಗೂ ನೀರಿನ ವೆಚ್ಚ, ಔಷಧ ರಸಾಯನ ಮತ್ತು ಸಾಮಗ್ರಿಗಳು ಆಕ್ಸಿಜನ್, ಆಹಾರ, ಉಪಕರಣಗಳ ವಾರ್ಷಿಕ ನಿರ್ವಹಣೆ, ಶಿಷ್ಯವೇತನ, ಗುತ್ತಿಗೆ ನೌಕರರ ಮತ್ತು ಹೊರಗುತ್ತಿಗೆ ನೌಕರರ ವೇತನ, ನಿವೃತ್ತಿ ನೌಕರರ ಪಿಂಚಣಿ, ಎನ್‌ಪಿಎಸ್ ಸೌಲಭ್ಯ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯ ಹಾಗೂ ರೋಗಿಗಳ ಚಿಕಿತ್ಸಾ ವೆಚ್ಚ ಸೇರಿದಂತೆ ವಿವಿಧ ಯೋಜನೆಯಡಿ ₹ 286.78 ಕೋಟಿ ಅನುದಾನ ನೀಡಲಾಗಿದೆ ಎಂದಿದ್ದಾರೆ.ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯರ ಮತ್ತು ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳು ಪರಿಷ್ಕರಣೆಯಲ್ಲಿದ್ದು ಅದು ಅಂತಿಮಗೊಂಡ ನಂತರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.
ಜಯದೇವ ಆಸ್ಪತ್ರೆ ತರಹ ಕೆಎಂಸಿಆರ್‌ಐ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಲು ಹೊಸ ಯೋಜನೆ ಬಗ್ಗೆ ಪ್ರಶ್ನಿಸಿದಕ್ಕೆ ಈಗಾಗಲೇ ಕಾರ್ಡಿಯೋಲಾಜಿ ವಿಭಾಗ ಪ್ರತ್ಯೇಕವಾಗಿ 2 ಕ್ಯಾಥ್‌ಲ್ಯಾಬ್ ಕಾರ್ಯನಿರ್ವಹಿಸುತ್ತಿದೆ. ಸರಾಸರಿ ತಿಂಗಳಿಗೆ 300 ಎಂಜಿಯೋಗ್ರಾಫಿ ಹಾಗೂ 160 ಎಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗುತ್ತಿದ್ದು ಹೆಚ್ಚಿನ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.