ಸಾರಾಂಶ
ಕಂಪ್ಲಿ: ತಾಲೂಕಿನ ಸೋಮಲಾಪುರ ಮತ್ತು ಚಿಕ್ಕಜಾಯಿಗನೂರು ಗ್ರಾಮಗಳಲ್ಲಿ 2024- 25ನೇ ಸಾಲಿನ ಎಸ್‌ಸಿ/ಟಿಎಸ್‌ಪಿ ಯೋಜನೆಯಡಿ ₹ 2 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಜೆ.ಎನ್. ಗಣೇಶ್ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಸೋಮಲಾಪುರ ಹಾಗೂ ಚಿಕ್ಕಜಾಯಿಗನೂರಿನಲ್ಲಿ ಮೂಲ ಸೌಕರ್ಯ ಬಲಪಡಿಸುವ ದೃಷ್ಟಿಯಿಂದ ಈ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆಯ ಪ್ರವೇಶ ಭಾಗದಲ್ಲಿ ನೀರು ನುಗ್ಗುತ್ತಿರುವ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ತುರ್ತಾಗಿ ದುರಸ್ತಿಗೊಳಿಸುವ ಕ್ರಮಕೈಗೊಳ್ಳಲಾಗುತ್ತದೆ ಎಂದರು.ಕೆರೆ ತೀರದಲ್ಲಿ ನಿರ್ಮಿಸಿದ ಸಾರ್ವಜನಿಕ ಗ್ರಂಥಾಲಯ ಕಟ್ಟಡದಲ್ಲಿ ಸಣ್ಣ-ಪುಟ್ಟ ತಾಂತ್ರಿಕ ತೊಂದರೆ ಕಂಡುಬಂದಿದ್ದು, ಆರ್‌ಒ ಪ್ಲ್ಯಾಂಟ್ ಮತ್ತು ಶೌಚಾಲಯಕ್ಕೆ ನೀರು ಪೂರೈಕೆಯ ಸಮಸ್ಯೆ ಇದೆ. ಈ ಕುರಿತು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಗ್ರಂಥಾಲಯ ಕಟ್ಟಡವನ್ನು ಸಾರ್ವಜನಿಕ ಬಳಕೆಗೆ ತೆರೆಯಲಾಗುತ್ತದೆ. ಸೋಮಲಾಪುರ ಕ್ರಾಸ್‌ನಿಂದ ಗ್ರಾಮದ ವರೆಗೆ ಹೊಸ ರಸ್ತೆ ನಿರ್ಮಿಸಲಾಗಿದೆ. ಶಾಲಾ ಕಟ್ಟಡವನ್ನು ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಒದಗಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಗ್ರಾಮದ ಇತರೆ ರಸ್ತೆಗಳನ್ನೂ ಹಂತ-ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಕ್ಷೇತ್ರದಲ್ಲಿ ನಿರ್ಮಿಸಿರುವ ಹೆಚ್ಚಿನ ಸಿಸಿ ರಸ್ತೆಗಳು ಗುಣಮಟ್ಟದವಾಗಿದ್ದು, ರೈತರು ಕೇಜ್ ವೀಲ್ ಉಪಯೋಗಿಸದಿದ್ದರೆ ಆ ರಸ್ತೆಗಳು ಕನಿಷ್ಠ ಐದಾರು ವರ್ಷ ಬಾಳಿಕೆ ಬರುತ್ತವೆ. ಜವುಕು- ಜೀರಿಗನೂರು-ಗೋನಾಳ್- ಎಸ್.ಆರ್. ಪುರ ಮಾರ್ಗವನ್ನು 30 ಅಡಿ ಅಗಲದ ರಸ್ತೆಯಾಗಿ ವಿಸ್ತರಿಸಲು ಯೋಜಿಸಲಾಗಿದೆ. ಅದೇ ರೀತಿ ದೇವಸಮುದ್ರ-ಕೆ.ಎನ್. ಕ್ಯಾಂಪ್ ಮಾರ್ಗವನ್ನು 30 ಅಡಿ ಅಗಲದ ರಸ್ತೆಯಾಗಿ ಅಭಿವೃದ್ಧಿಪಡಿಸುವ ವೇಳೆ 20 ಅಡಿ ಭಾಗ ಬಿಡಲಾಗಿತ್ತು. ಆದರೆ, ಕೆಲ ರೈತರು ಆ ಪ್ರದೇಶವನ್ನು ಅತಿಕ್ರಮಿಸಿದ್ದಾರೆ. ರೈತರು ಸಹಕರಿಸಿದರೆ, ರಸ್ತೆಯ ಅಗಲೀಕರಣ ಸುಗಮವಾಗಿ ನಡೆಯಬಹುದು. ಅಭಿವೃದ್ಧಿ ರೈತರ ಸಹಕಾರದಿಂದಲೇ ಸಾಧ್ಯ ಎಂದರು.ಈ ವೇಳೆ ಗ್ರಾಪಂ ಸದಸ್ಯರಾದ ವಿ. ಮಾರೇಶ, ಫಕೂರ್‌ಬೀ, ಚಂದೂಸಾಬ್, ಎನ್. ಪಂಪಣ್ಣ, ಮುಖಂಡರಾದ ಜಿ. ಮರೇಗೌಡ, ಗೌಡ್ರು ಅಂಜಿನಪ್ಪ, ಸುರೇಶಗೌಡ, ಪೂಜಾರ ರಮೇಶ್, ಗೌಡ್ರು ಸಿದ್ದಯ್ಯ, ಶಿವಕುಮಾರ, ಬೂದಾಳ್ ರವಿ, ಎನ್. ರಾಜಾ, ಜಾನೂರು ಮಾರೆಪ್ಪ, ಮರಿಸ್ವಾಮಿ, ಎಸ್.ಕೆ. ಬಸವರಾಜ, ಮಾಭಾಷ, ಬಾಬುಸಾಬ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.