Government committed to the development of professional theatre: Minister

- ಕೊಂಡಜ್ಜಿಯಲ್ಲಿ ಥಿಯೇಟರ್ ಮ್ಯೂಸಿಯಂ ನಿರ್ಮಾಣಕ್ಕೆ ಸಚಿವ ಬಸವಂತಪ್ಪ, ಸಂಸದೆ ಡಾ.ಪ್ರಭಾ ಚಾಲನೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಂಗಭೂಮಿ, ಕಲಾಕ್ಷೇತ್ರಕ್ಕೆ ದಾವಣಗೆರೆ ನೀಡಿದ ಕೊಡುಗೆ ಅಪರೂಪವಾಗಿದ್ದು, ರಂಗ ಕಲಾವಿದರಿಗೆ ಹಾಗೂ ರಂಗಭೂಮಿ ಅಭಿವೃದ್ಧಿಗೆ ಹಾಗೂ ಕೊಂಡಜ್ಜಿಯಲ್ಲಿ ವೃತ್ತಿ ರಂಗಭೂಮಿ ರಂಗಾಯಣ, ವಸ್ತು ಸಂಗ್ರಹಾಲಯ ನಿರ್ಮಿಸಲು ಸರ್ಕಾರದಿಂದ ಎಲ್ಲ ಸಹಕಾರ ನೀಡುವುದಾಗಿ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಹಾಗೂ ವಿಜಯ ನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಬಸವಂತಪ್ಪ ತಿಳಿಸಿದರು.

ಹರಿಹರ ತಾ. ಕೊಂಡಜ್ಜಿ ಗ್ರಾಮದ ಬೆಟ್ಟದ ಪರಿಸರದಲ್ಲಿ ಸ್ಥಾಪಿತ ವೃತ್ತಿ ರಂಗಭೂಮಿ ರಂಗಾಯಣ, ಸಮುಚ್ಛಯ ಹಾಗೂ ಥಿಯೇಟರ್ ಮ್ಯೂಸಿಯಂ ನಿರ್ಮಾಣದ ಭೂಮಿಪೂಜೆ, ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಜಿಲ್ಲೆಯ ಪ್ರಮುಖ ಅಭಿವೃದ್ಧಿ ಯೋಜನೆ ಭಾಗವಾಗಿ 10 ಎಕರೆ ವಿಸ್ತೀರ್ಣದಲ್ಲಿ ರಂಗಕಲಾವಿದರಿಗೆ ಮ್ಯೂಸಿಯಂ, ರಂಗಮಂದಿರ, ಥಿಯೇಟರ್ ಹಾಗೂ ಬಯಲು ರಂಗವೇದಿಕೆ ನಿರ್ಮಾಣಕ್ಕೆ ಒಟ್ಟು ₹10 ಕೋಟಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ₹3 ಕೋಟಿ ಮಂಜೂರಾಗಿದ್ದು, ಈ ಪೈಕಿ ₹1 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.

ಸರ್ಕಾರದಿಂದ ಈ ಬಾರಿ ಅನುದಾನ ಹಂತ ಹಂತವಾಗಿ ಬಿಡುಗಡೆಯಾಗಲಿದೆ. ಆರ್ಕೆಸ್ಟ್ರಾ ಮತ್ತು ಡಿಜೆ ಸಂಗೀತದ ಸಂಸ್ಕೃತಿಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ನಾಟಕಗಳೇ ನಶಿಸುತ್ತಿವೆ. ಹಳೆಯ ಸಾಂಪ್ರಾದಾಯಿಕ ನಾಟಕ ಕಲೆಯನ್ನು ಮರಳಿ, ತರಲು ರಂಗ ಕೇಂದ್ರಗಳ ಮೂಲಕ ಪ್ರೋತ್ಸಾಹಿಸಲಾಗುವುದು. ವರನಟ ಡಾ.ರಾಜಕುಮಾರ, ಮಾಸ್ಟರ್ ಹಿರಣ್ಣಯ್ಯ, ಪದ್ಮಶ್ರೀ ಚಿಂದೋಡಿ ಲೀಲಾ ಸೇರಿದಂತೆ ಅನೇಕ ಮಹಾನ್ ನಟರಿಗೆ ವೃತ್ತಿ ಬದುಕನ್ನು ಕಲ್ಪಿಸಿಕೊಟ್ಟ ಹೆಮ್ಮೆಯ ನೆಲೆ ದಾವಣಗೆರೆ. ಹಲವಾರು ನಾಟಕ ಕಂಪನಿಗಳ ಊರು, ಸಾವಿರಾರು ಕಲಾವಿದರು, ಅವಲಂಬಿತರಿಗೆ ಆಸರೆಯಾದ, ಬದುಕು ಕಟ್ಟಿಕೊಟ್ಟ ಐತಿಹಾಸಿದ ಊರಾದ ದಾವಣಗೆರೆಯಲ್ಲಿ ಕಲೆಯನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಅವರು ಹೇಳಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಅಸಂಘಟಿತ ವಲಯದ ವೃತ್ತಿ ರಂಗಭೂಮಿ ಕಲಾವಿದರು ಹಾಗೂ ಕುಟುಂಬದವರ ಆರ್ಥಿಕ ಮತ್ತು ಆರೋಗ್ಯ ಅಭದ್ರಯತೆಯ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಸೂಕ್ತ ವೇದಿಕೆ ರಚಿಸಬೇಕಿದೆ. ರಂಗಭೂಮಿ ಕ್ಷೇತ್ರಕ್ಕೆ ಹಂತ ಹಂತವಾಗಿ ಅಗತ್ಯ ನೆರವು ನೀಡಲು ಸರ್ಕಾರ ಹಾಗೂ ನಾವೆಲ್ಲರೂ ಬದ್ಧರಿದ್ದೇವೆ. ಕಲೆಯನ್ನು ಉಳಿಸಿ, ಬೆಳೆಸುವ ಜೊತೆಗೆ ಪ್ರೋತ್ಸಾಹಿಸುವ ಕೆಲಸವೂ ಆಗಬೇಕಿದೆ ಎಂದರು.

ವಿದ್ಯಾರ್ಥಿಗಳಿಗೆ ಕೇವಲ ಮೊಬೈಲ್ ಮತ್ತು ಪುಸ್ತಕದ ಶಿಕ್ಷಣಕ್ಕೆ ಸೀಮಿತವಾಗದೇ, ಸ್ಕೌಟ್ಸ್ ಮತ್ತು ಗೈಡ್ಸ್‌, ಎನ್‌ಸಿಸಿ ಹಾಗೂ ರಂಗಭೂಮಿಯಂತಹ ಚಟುವಟಿಕೆಗಳ, ನಾಯಕತ್ವ ಕೌಶಲ್ಯ ಬೆಳೆಸಿಕೊಳ್ಳಲು ನೆರವಾಗುತ್ತವೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಬೇಸಿಗೆ ರಂಗ ಶಿಬಿರಗಳು, ಸ್ಪರ್ಧೆಗಳು ಹಾಗೂ ಪ್ರಶಸ್ತಿ ಪತ್ರ ನೀಡುವ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುವುದು. ವಾರ್ಷಿಕ ನೂರಾರು ಕೋಟಿ ರು.ಗಳ ವಹಿವಾಟು ನಡೆಸುವ ಸಾಂಸ್ಕೃತಿಕ ವಲಯಕ್ಕೆ ಕೇಂದ್ರ ಸರ್ಕಾರದಿಂದಲೂ ಅನುದಾನ ತರಲು ಕೇಂದ್ರ ಸಚಿವರೊಂದಿಗೆ ಸಮಾಲೋಚಿಸಲಾಗುವುದು ಎಂದು ತಿಳಿಸಿದರು.

ಹರಿಹರ ಕ್ಷೇತ್ರದ ಅಬ್ದುಲ್ ಕಲಾಂ ಶಾಲೆ ಹಾಗೂ ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಹರಿಹರ ಕ್ಷೇತ್ರಕ್ಕೆ ಮೊದಲ ಹಂತದಲ್ಲಿ ₹55 ಲಕ್ಷ ಹಾಗೂ 2ನೇ ಹಂತದಲ್ಲಿ ₹70 ಲಕ್ಷ ಸೇರಿದಂತೆ ಎಂಪಿ ಅನುದಾನವನ್ನೂ ಬಿಡುಗಡೆ ಮಾಡಲಾಗುವುದು. ತುಂಗಭದ್ರಾ ನದಿಯಿಂದ ಪೈಪ್‌ ಲೈನ್ ಮೂಲಕ ಕೊಂಡಜ್ಜಿ ಕೆರೆ ತುಂಬಿಸುವ ಯೋಜನೆಗೆ ಕ್ರಮ ವಹಿಸಲಾಗುವುದು. ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಕ್ಷೇತ್ರದ ಸುಮಾರು 60 ಫಲಾನುಭ‍ಿಗಳಿಗೆ ₹1.90 ಕೋಟಿ ಮೊತ್ತದ ವೈದ್ಯಕೀಯ, ಆರ್ಥಿಕ ನೆರವು ವಿತರಿಸಲಾಗುವುದು ಎಂದು ಹೇಳಿದರು.

ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶೇಷಾಧಿಕಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ವಿಪ ಮಾಜಿ ಸದಸ್ಯ ಕೊಂಡಜ್ಜಿ ಮೋಹನಕುಮಾರ, ಹರಿಹರ ಮಾಜಿ ಶಾಸಕ ಎಸ್.ರಾಮಪ್ಪ, ಮುಖಂಡರಾದ ಹನುಮಂತಪ್ಪ, ಪ್ರಸನ್ನ, ಮಂಜಪ್ಪ, ಆನಂದಪ್ಪ, ರುದ್ರಾಕ್ಷಿ ಬಾಯಿ, ಅನಂತ ನಾಯ್ಕ ಇತರರು ಇದ್ದರು.

- - -

(ಬಾಕ್ಸ್‌)

* ಕೊಂಡಜ್ಜಿ ಬಸಪ್ಪ ಕೊಡುಗೆ ಅವಿಸ್ಮರಣೀಯ

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರೂವಾರಿ ದಿವಂಗತ ಕೊಂಡಜ್ಜಿ ಬಸಪ್ಪನವರ ಕೊಡುವೆ ಅವಿಸ್ಮರಣೀಯವಾದುದು. ಅಂತಹ ಕೊಂಡಜ್ಜಿ ಬಸಪ್ಪನವರ ಸ್ಮರಣಾರ್ಥ ಕೊಂಡಜ್ಜಿ ಗ್ರಾಮದಲ್ಲಿ ಪುತ್ಥಳಿ ನಿರ್ಮಿಸಲು ಹಾಗೂ ಬಸಪ್ಪನವರ ಜೀವನ ಹಾದಿಯನ್ನು ಬಿಂಬಿಸುವ ವಸ್ತು ಸಂಗ್ರಹಾಯಲಯ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಕೊಂಡಜ್ಜಿ ಗ್ರಾಮದ ಹಳೆಯ ಮೀನುಗಾರಿಕೆ ಇಲಾಖೆಯ ತಳಿ ಸಾಕಣಿಕೆ ಕೇಂದ್ರವನ್ನು ಆಧುನೀಕರಣಗೊಳಿಸಿ, ಮೀನುಮರಿ ಸಾಕಣೆ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಈ ಭಾಗದ ಸಂಪರ್ಕ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ದಾವಣಗೆರೆ ಜಿಲ್ಲೆಯ ಮುಜರಾಯಿ ಮತ್ತು ಖಾಸಗಿ ದೇವಾಲಯಗಳ ಜೀರ್ಣೋದ್ಧಾರಕ್ಕೆ ಇಲಾಖೆಯಿಂದ ಹೆಚ್ಚಿನ ಅನುದಾನ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಕೆ.ಎಸ್‌.ಬಸವಂತಪ್ಪ ಹೇಳಿದರು.

- - -

-4ಕೆಡಿವಿಜಿ: ಹರಿಹರ ತಾ. ಕೊಂಡಜ್ಜಿ ಗ್ರಾಮದಲ್ಲಿ ಶುಕ್ರವಾರ ವೃತ್ತಿ ರಂಗಭೂಮಿ ರಂಗಾಯಣ, ಸಮುಚ್ಛಯ ಹಾಗೂ ಥಿಯೇಟರ್ ಮ್ಯೂಸಿಯಂ ನಿರ್ಮಾಣಕ್ಕೆ ಸಚಿವ ಕೆ.ಎಸ್.ಬಸವಂತಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭೂಮಿಪೂಜೆ, ಶಂಕು ಸ್ಥಾಪನೆ ನೆರವೇರಿಸಿದರು.