ಜನರ ಕಲ್ಯಾಣಕ್ಕೆ ಸರ್ಕಾರ ಬದ್ಧ: ಸಚಿವ ಸಂತೋಷ ಲಾಡ್‌

| Published : Aug 16 2024, 12:47 AM IST

ಸಾರಾಂಶ

ಧಾರವಾಡ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗಾಗಿ ಒಟ್ಟು ₹ 20 ಕೋಟಿ ಅನುದಾನ ಲಭ್ಯವಿದೆ. ಜಿಲ್ಲೆಯಲ್ಲಿ ವಿಪತ್ತು ಉಂಟಾದರೆ, ಸಮರ್ಥವಾಗಿ ನಿರ್ವಹಿಸಲು ಅಗತ್ಯ ಅನುದಾನವನ್ನು ಸರ್ಕಾರ ನೀಡಿದ್ದು, ಜಿಲ್ಲಾಡಳಿತದ ಬಳಿ ಜಮೆ ಇದೆ ಎಂದು ಸಂತೋಷ ಲಾಡ್‌ ಹೇಳಿದರು.

ಧಾರವಾಡ:

ಜನಸಾಮಾನ್ಯರ ಕಲ್ಯಾಣಕ್ಕಾಗಿ ಸರ್ಕಾರ ಬದ್ಧವಾಗಿದ್ದು ಹಲವು ಅಭಿವೃದ್ಧಿ ಕಾಮಗಾರಿ ಹಾಗೂ ಯೋಜನೆ ಕೈಗೊಳ್ಳಲಿದೆ. ಅವುಗಳ ಸಂಪೂರ್ಣ ಲಾಭ ಬಡವರು ಮತ್ತು ಯೋಗ್ಯರಿಗೆ ತಲುಪುವಂತೆ ಮಾಡುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಸಚಿವ ಸಂತೋಷ ಲಾಡ್‌ ಹೇಳಿದರು.

ಜಿಲ್ಲಾಡಳಿತದಿಂದ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 78ನೇ ಸ್ವಾತಂತ್ರ್ಯೋತ್ಸವದ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಅವರು, ಧಾರವಾಡ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗಾಗಿ ಒಟ್ಟು ₹ 20 ಕೋಟಿ ಅನುದಾನ ಲಭ್ಯವಿದೆ. ಜಿಲ್ಲೆಯಲ್ಲಿ ವಿಪತ್ತು ಉಂಟಾದರೆ, ಸಮರ್ಥವಾಗಿ ನಿರ್ವಹಿಸಲು ಅಗತ್ಯ ಅನುದಾನವನ್ನು ಸರ್ಕಾರ ನೀಡಿದ್ದು, ಜಿಲ್ಲಾಡಳಿತದ ಬಳಿ ಜಮೆ ಇದೆ ಎಂದ ಸಚಿವರು, ಜನರ ಸಮಸ್ಯೆ ಬಗೆಹರಿಸಲು ಜನಸ್ಪಂದನಾ ಕಾರ್ಯಕ್ರಮ ನಡೆಸಲಾಗಿದೆ ಮತ್ತು ಗ್ಯಾರಂಟಿ ಯೋಜನೆಗಳ ಸಮಾವೇಶ ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದು ಹೇಳಿದರು.

ಅಹಿಂಸಾ ಮಾರ್ಗದಲ್ಲಿಯೇ ಸ್ವಾತಂತ್ರ್ಯ ಪಡೆದುಕೊಳ್ಳಬೇಕೆಂಬ ಮಹಾತ್ಮ ಗಾಂಧೀಜಿ ಹೋರಾಟಕ್ಕೆ ಈ ಭಾಗದ ಮೈಲಾರ ಮಹದೇವಪ್ಪ, ಆರ್.ಆರ್. ದಿವಾಕರ, ಉಮಾಬಾಯಿ ಕುಂದಾಪುರ, ಎನ್.ಎಸ್. ಹರಡೀಕರ, ಕೆ.ಎಫ್. ಪಾಟೀಲ, ಗೋವಿಂದಾಚಾರ್ಯ ಅಗ್ನಿಹೋತ್ರಿ, ನರಸಿಂಹ ದಾಬಡೆ ಮೊದಲಾದ ನೇತಾರರು ಕೈ ಜೋಡಿಸಿದ್ದರು ಎಂದು ಸ್ಮರಿಸಿದ ಸಚಿವರು, ಸರ್. ಸಿದ್ದಪ್ಪ ಕಂಬಳಿ, ಡೆಪ್ಯೂಟಿ ಚೆನ್ನಬಸಪ್ಪ, ಅರಟಾಳ ರುದ್ರಗೌಡರು ಈ ಭಾಗದ ಶಿಕ್ಷಣ ಮತ್ತು ಅಭಿವೃದ್ಧಿಗೆ ನೀಡಿದ ಕೊಡುಗೆ ಸ್ಮರಿಸಬೇಕೆಂದರು.

ಜಿಲ್ಲಾಧಿಕಾರಿ ದಿವ್ಯಪ್ರಭು, ಪೊಲೀಸ್‌ ಆಯುಕ್ತ ಎನ್. ಶಶಿಕುಮಾರ, ಜಿಪಂ ಸಿಇಒ ಸ್ವರೂಪ ಟಿ.ಕೆ., ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್.ಎಸ್. ಪಾಟೀಲ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಡಿಎಚ್‌ಒ ಡಾ. ಶಶಿ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಿದ್ದರು.

ಧ್ವಜಾರೋಹಣ ನಂತರ ಪರೇಡ್‌ ಕಮಾಂಡರ್‌ ನಾಗರಾಜ ಪಾಟೀಲ ಹಾಗೂ 2ನೇ ಪರೇಡ್‌ ಕಮಾಂಡರ್‌ ರಾಜು ಗುಡನಟ್ಟಿ ನೇತೃತ್ವದಲ್ಲಿ ತೆರದ ವಾಹನದಲ್ಲಿ ಆಗಮಿಸಿದ ಸಚಿವರಿಗೆ ವಿವಿಧ 18 ತಂಡಗಳು ಗೌರವ ರಕ್ಷೆ ನೀಡಿದವು. ವೈ.ಎಫ್‌. ಭಜಂತ್ರಿ ನೇತೃತ್ವದಲ್ಲಿ ಪೊಲೀಸ್‌ ವಾದ್ಯ ಮೇಳ ಇತ್ತು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ವಿದುಷಿ ನಾಗರತ್ನ ಹಡಗಲಿ ಮತ್ತು ತಂಡದಿಂದ ಸಮೂಹ ನೃತ್ಯ, ಶಾಲಾ-ಕಾಲೇಜು 500 ವಿದ್ಯಾರ್ಥಿಗಳಿಂದ ಅವಿಭಜಿತ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಸ್ವಾತಂತ್ರ್ಯಧಾರೆಯ ಸಮರಧೀರರು ಹೆಸರಿನಲ್ಲಿ ಅದ್ಭುತ ನೃತ್ಯರೂಪಕ ಜರುಗಿತು.