ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಂತ್ರಸ್ತ ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಎರಡು ಲಕ್ಷ ರು. ಹಸ್ತಾಂತರಿಸಲಾಗಿದೆ. ಕುಕ್ಕರ್ ಬಾಂಬ್ ಸ್ಫೋಟ ಘಟನೆ ದೇಶಾದ್ಯಂತ ಶಂಕಿತ ಉಗ್ರ ಕೃತ್ಯ ಎಂದು ಸದ್ದುಮಾಡಿದರೂ ಮುಖ್ಯಮಂತ್ರಿ ಪರಿಹಾರ ನಿಧಿ ಶಾಖೆಯ ಆದೇಶ ಪತ್ರದಲ್ಲಿ ಅದೊಂದು ಮಾಮೂಲಿ ಘಟನೆ ಎಂಬಂತೆ ಉಲ್ಲೇಖಿಸಲಾಗಿದೆ! ಜ.1ರಂದು ಸಿಎಂ ಪರಿಹಾರ ನಿಧಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಖಾತೆಗೆ ಎರಡು ಲಕ್ಷ ರು. ಬಿಡುಗಡೆ ಮಾಡಲಾಗಿತ್ತು. ಪರಿಹಾರ ಮೊತ್ತದ ಚೆಕ್‌ನ್ನು ಮಾಜಿ ಎಂಎಲ್‌ಸಿ ಐವನ್ ಡಿಸೋಜಾ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪುರುಷೋತ್ತಮ ಪೂಜಾರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್ ಹಸ್ತಾಂತರಿಸಿದರು. ಆದೇಶ ಪತ್ರದಲ್ಲಿ ಮಾಮೂಲಿ ಘಟನೆ ಉಲ್ಲೇಖ!:ಈ ಕುರಿತು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಪರಿಹಾರ ನಿಧಿ ಶಾಖೆಯಿಂದ ಸಿಎಂ ಜಂಟಿ ಕಾರ್ಯದರ್ಶಿ ಪಿ.ಎ. ಗೋಪಾಲ್ ಹೊರಡಿಸಿದ್ದ ಆದೇಶ ಪತ್ರದಲ್ಲಿ ಕುಕ್ಕರ್ ಬಾಂಬ್ ಪ್ರಕರಣವನ್ನು ಯಾವುದೋ ಮಾಮೂಲಿ ಘಟನೆ ಎನ್ನುವಂತೆ ಉಲ್ಲೇಖಿಸಲಾಗಿದೆ. ಪುರುಷೋತ್ತಮ ಪೂಜಾರಿ ಮಂಗಳೂರಿನಲ್ಲಿ ಆಟೋ ಚಾಲಕರಾಗಿ ವೃತ್ತಿ ಜೀವನ ನಡೆಸುತ್ತಿದ್ದು, ಒಮ್ಮೆ ಆಟೋದಲ್ಲಿ ಪ್ರಯಾಣಿಕರೊಬ್ಬರು ಹಿಡಿದುಕೊಂಡಿದ್ದ ಕುಕ್ಕರ್ ಸಿಡಿದು ಆಟೋ ರಿಕ್ಷಾ ನಜ್ಜುಗುಜ್ಜಾಗಿದ್ದಲ್ಲದೆ, ಅವರು ತೀವ್ರ ಸ್ವರೂಪದ ಸುಟ್ಟ ಗಾಯದಿಂದ ಬಳಲುತ್ತಿದದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಎಂದು ಉಲ್ಲೇಖ ಮಾಡಲಾಗಿದೆ.
ಪುರುಷೋತ್ತಮ ಪೂಜಾರಿ ಅವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೆರವು ನೀಡುವಂತೆ ಐವನ್ ಡಿಸೋಜಾ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿ ಸಿದ್ದರಾಮಯ್ಯ ಅವರು ಘಟನೆಗೆ ವಿಷಾದ ವ್ಯಕ್ತಪಡಿಸಿ, ವಿಶೇಷ ಪ್ರಕರಣದಡಿ ಎರಡು ಲಕ್ಷ ರು. ಪರಿಹಾರ ಮಂಜೂರು ಮಾಡಿ ಆದೇಶ ಮಾಡಿದ್ದರು. ಈ ಮೊತ್ತವನ್ನು ಜ.1ರಂದು ಜಿಲ್ಲಾಧಿಕಾರಿ ಖಾತೆಗೆ ಬಿಡುಗಡೆ ಮಾಡಿದ್ದಾಗಿ ಪರಿಹಾರ ನಿಧಿ ವಿಭಾಗದ ಅಧಿಕಾರಿ ಆದೇಶ ಪತ್ರದಲ್ಲಿ ತಿಳಿಸಿದ್ದರು. ಕುಕ್ಕರ್‌ನಲ್ಲಿ ಬಾಂಬ್ ಹಿಡಿದುಕೊಂಡು ಬಂದಿದ್ದ ಆರೋಪಿ ಪ್ರಯಾಣಿಕ ಮೊಹಮ್ಮದ್ ಶಾರೀಕ್ ಭಯೋತ್ಪಾದಕ ಕೃತ್ಯ ಎಸಗುವುದಕ್ಕಾಗಿಯೇ ತರುತ್ತಿದ್ದೆ ಎಂದು ಪೊಲೀಸ್ ತನಿಖೆಯಲ್ಲಿ ಒಪ್ಪಿಕೊಂಡಿದ್ದಲ್ಲದೆ, ಘಟನೆ ಬಗ್ಗೆ ಎನ್‌ಐಎ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದೆ. ಹೀಗಿದ್ದರೂ ಕುಕ್ಕರ್ ಬಾಂಬ್ ಎಂದು ಒಪ್ಪಿಕೊಳ್ಳದೆ ಅದು ಮಾಮೂಲಿ ಕುಕ್ಕರ್ ಸಿಡಿದ ಘಟನೆ ಎಂಬಂತೆ ರಾಜ್ಯ ಸರ್ಕಾರ ಆದೇಶ ಪತ್ರದಲ್ಲಿ ಉಲ್ಲೇಖಿಸಿರುವುದು ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಇದ್ದಾಗ ಪರಿಹಾರ ಕೊಡಿಸುವುದಾಗಿ ಮುಖಂಡರು ಹಲವು ಬಾರಿ ಪುರುಷೋತ್ತಮ ಪೂಜಾರಿ ಮನೆಗೆ ಭೇಟಿ ನೀಡಿದ್ದರೂ ಸರ್ಕಾರದಿಂದ ಪರಿಹಾರ ಲಭಿಸಿರಲಿಲ್ಲ. ಶಾಸಕ ವೇದವ್ಯಾಸ ಕಾಮತ್ ತನ್ನದೇ ದುಡ್ಡಿನಲ್ಲಿ ಹೊಸತಾಗಿ ಆಟೋ ರಿಕ್ಷಾ ಒದಗಿಸಿ ವೃತ್ತಿ ಜೀವನಕ್ಕೆ ನೆರವಾಗಿದ್ದರು. ಬಿಜೆಪಿ ಪಕ್ಷದ ವತಿಯಿಂದ ಐದು ಲಕ್ಷ ರು. ನೆರವು ನೀಡಲಾಗಿತ್ತು. ಸರ್ಕಾರದಿಂದ ಪರಿಹಾರ ಮೊತ್ತ ಸಿಕ್ಕಿರಲಿಲ್ಲ. ಅಲ್ಲದೆ, ಚಿಕಿತ್ಸಾ ವೆಚ್ಚವನ್ನೂ ನೀಡಿರಲಿಲ್ಲ. ಈ ಬಗ್ಗೆ ಪುರುಷೋತ್ತಮ ಪೂಜಾರಿ ಕುಟುಂಬ ಬೇಸರ ವ್ಯಕ್ತಪಡಿಸಿತ್ತು.