ಕಂಸಾಳೆ ನೃತ್ಯ, ನಾಟಕ, ಬಯಲಾಟದ ಸಾಂಸ್ಕೃತಿಕ ಕಲೆಗಳನ್ನು ಉಳಿಸಲು ಬೆಳೆಸಲು ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡುತ್ತಿದೆ
ಸಿರುಗುಪ್ಪ: ಗ್ರಾಮೀಣ ಪ್ರದೇಶದ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸರ್ಕಾರ ಧನಸಹಾಯ ನೀಡುವುದರ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ತಿಳಿಸಿದರು.ತಾಲೂಕಿನಸಿರಿಗೇರಿ ಗ್ರಾಮದ ಜೆ.ಎಚ್.ವಿ. ಶಾಲೆಯ ಆವರಣದಲ್ಲಿ ಧಾತ್ರಿ ರಂಗಸಂಸ್ಥೆ ಸಿರಿಗೇರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಎರಡು ದಿನಗಳ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರವು ರಂಗಭೂಮಿ ಕಲಾಪ್ರಕಾರಗಳಾದ ನೃತ್ಯ, ಸಂಗೀತ, ಧ್ಯಾನ, ಯೋಗ, ಡೊಳ್ಳು ಕುಣಿತ, ಏಕಪಾತ್ರ ಅಭಿನಯ, ಕಂಸಾಳೆ ನೃತ್ಯ, ನಾಟಕ, ಬಯಲಾಟದ ಸಾಂಸ್ಕೃತಿಕ ಕಲೆಗಳನ್ನು ಉಳಿಸಲು ಬೆಳೆಸಲು ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡುತ್ತಿದೆ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಕಾರ್ಯಕಾರಿ ಸಮಿತಿ ನಿರ್ದೇಶಕ ಎಸ್.ಎಂ. ನಾಗರಾಜ ಸ್ವಾಮಿ ಮಾತನಾಡಿ, ಸಾಂಸ್ಕೃತಿಕ ವಾತಾವರಣ ನಿರ್ಮಿಸುವ ಮೂಲಕ ಮಕ್ಕಳಲ್ಲಿ ವಿವಿಧ ಕಲೆಗಳನ್ನು ಕಲಿತುಕೊಳ್ಳಲು ಸೂಕ್ತ ವೇದಿಕೆಯನ್ನುಧಾತ್ರಿ ರಂಗ ಸಂಸ್ಥೆ ಒದಗಿಸುತ್ತಿದೆ ಎಂದು ಹೇಳಿದರು.ಎರಡು ದಿನದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ರಂಗ ಸಂಗೀತ, ಕಂಸಾಳೆ ನೃತ್ಯ, ಕಪ್ಪೆರಾಯ, ಕಳ್ಳನ ಕರಾಮತ್ತು ನಾಟಕ, ಡೊಳ್ಳು ಕುಣಿತ, ಮೂಕ ಅಭಿನಯ, ರಾಮ ರಾವಣರ ಯುದ್ಧ ನಾಟಕ, ಇತಿಹಾಸ ಪುರುಷ ಹರಳಯ್ಯ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿವಿಧ ಕಲಾತಂಡಗಳು ಪ್ರದರ್ಶಿಸಿದವು.
ಧಾತ್ರಿ ರಂಗಸಂಸ್ಥೆ ಅಧ್ಯಕ್ಷ ಎಂ. ಪಂಪನಗೌಡ, ಕಾರ್ಯದರ್ಶಿ ವೈ .ಮಂಜುನಾಥ, ಮುಖಂಡರಾದ ಡ್ರೈವರ್ ಹುಲುಗಪ್ಪ, ದ್ಯಾವಣ್ಣ, ಜೆ.ಬಸವರಾಜ್, ಶಿಕ್ಷಕ ಜೆ.ಮಾರೆಣ್ಣ ಇದ್ದರು.