ಸಾರಾಂಶ
ನೌಕರರು ಕೆಲಸದ ಒತ್ತಡದಲ್ಲಿ ಕೌಟುಂಬಿಕ ಜೀವನ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಪ್ರತಿದಿನ ವ್ಯಾಯಾಮ, ನಡಿಗೆ, ಯೋಗ ಮಾಡಿ,ಪಿಟನೆಸ್ ಹೊಂದಬೇಕು
ಧಾರವಾಡ: ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಆಗಿರುವ ಎನ್‌ಪಿಎಸ್ ರದ್ದುಗೊಳಿಸಿ, ಓಪಿಎಸ್‌ನ್ನು ವರ್ಷದೊಳಗೆ ಅನ್ವಯಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ಶಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟಸಿದ ಅವರು, ರಾಜ್ಯ ಸರ್ಕಾರವು ಸರ್ಕಾರಿ ನೌಕರರ ಹಿತಾಸಕ್ತಿ ಕಾಪಾಡಲು ಅನೇಕ ಉಪಯುಕ್ತ ಕಾರ್ಯಕ್ರಮ ಜಾರಿಗೊಳಿಸಿದೆ. ಎನ್‌ಪಿಎಸ್ ರದ್ದುಗೊಳಿಸಿ, ಓಪಿಎಸ್ ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ. ಅಧ್ಯಯನ ಸಮಿತಿ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ತಕ್ಷಣ ಸರ್ಕಾರ ಅಧ್ಯಯನ ಮಾಡಿ ನಿರ್ಧಾರ ಪ್ರಕಟಿಸಲಿದೆ ಎಂದರು.ನೌಕರರು ಕೆಲಸದ ಒತ್ತಡದಲ್ಲಿ ಕೌಟುಂಬಿಕ ಜೀವನ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಪ್ರತಿದಿನ ವ್ಯಾಯಾಮ, ನಡಿಗೆ, ಯೋಗ ಮಾಡಿ,ಪಿಟನೆಸ್ ಹೊಂದಬೇಕು. ಪ್ರತಿಯೊಬ್ಬರು ದೈಹಿಕ ಮತ್ತು ಮಾನಸಿಕ ಸದೃಢತೆಗೆ ಆರೋಗ್ಯ ಮುಖ್ಯ. ಖುಷಿಯಿಂದ ಕೆಲಸ ಮಾಡಲು ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳ ಅಗತ್ಯವಿದೆ ಎಂದು ಶಾಸಕರು ಹೇಳಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಮಾನಸಿಕ ಚಿಂತನೆಗಳು ದೈಹಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಮನಸ್ಸಿಗೆ ಚೈತನ್ಯ ತುಂಬಲು ಕೆಲಸ, ಕಾರ್ಯಗಳನ್ನು ಅನುಕರಣೀಯ ಮಾಡದೆ, ಹೊಸತನ ಕಾಣಬೇಕು ಎಂದರು.ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, ವಿವಿಧ ಬೇಡಿಕೆಗಳನ್ನು ಪ್ರಸ್ತಾಪಿಸಿದರು.
ಗೌರವಾಧ್ಯಕ್ಷ ಮಲ್ಲಿಕಾರ್ಜುನ ಸೊಲಗಿ ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿ ಸುರೇಶ ಜಟ್ಟೆನವರ, ಖಜಾಂಚಿ ಮಂಜುನಾಥ ಯಡಳ್ಳಿ, ಪಿ.ಎಫ್. ಗುಡೇನಕಟ್ಟಿ, ರಮೇಶ ಲಿಂಗದಾಳ ಮತ್ತಿತರರು ಇದ್ದರು.