ಅಗ್ನಿ ಬನ್ನಿರಾಯ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಗ್ನಿ ಬನ್ನಿರಾಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಸಣ್ಣಪುಟ್ಟ ಮತ್ತು ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಶಕ್ತಿ ತುಂಬುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಮಹನೀಯರ ಜಯಂತಿಗಳನ್ನು ಅಧಿಕೃತವಾಗಿ ಆಚರಿಸುವ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ಸ್ವಾಭಿಮಾನ ಮೂಡಿಸುವ ಕಾರ್ಯ ಮಾಡುತ್ತಿದೆ , ಈ ದಿಸೆಯಲ್ಲಿ ತಿಗಳ ಸಮುದಾಯದ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಯನ್ನು ಗೌರವಿಸುವ ಸಂಕೇತವಾಗಿ ಅಗ್ನಿ ಬನ್ನಿರಾಯ ಜಯಂತಿ ಆಚರಣೆ ಅರ್ಥಪೂರ್ಣವಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಸಮಾಜದ ತಳಹದಿಯಲ್ಲಿ ದುಡಿಯುತ್ತಾ ಬಂದಿರುವ ಸಮುದಾಯಗಳಿಗೆ ಸಾಮಾಜಿಕ ಗುರುತು, ಗೌರವ ಮತ್ತು ಸಂಘಟಿತ ಶಕ್ತಿ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ವಿವಿಧ ಮಹನೀಯರ ಜಯಂತಿಗಳನ್ನು ಆಚರಿಸಲು ಆದ್ಯತೆ ನೀಡುತ್ತಿದೆ. ಅಗ್ನಿ ಬನ್ನಿರಾಯ ಜಯಂತಿ ಕೂಡ ಅಂತಹ ಸಮುದಾಯ ಸಬಲೀಕರಣದ ಭಾಗವಾಗಿದ್ದು, ಅದರ ಆಚರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಪ್ರಾಮುಖ್ಯತೆ ನೀಡಿದ್ದಾರೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.ನಗರದ ತಾಲೂಕು ಕಚೇರಿ ಕಂದಾಯ ಭವನದಲ್ಲಿ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ತಿಗಳ ಸಮುದಾಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಗ್ನಿ ಬನ್ನಿರಾಯ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಗ್ನಿ ಬನ್ನಿರಾಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಸಣ್ಣಪುಟ್ಟ ಮತ್ತು ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಶಕ್ತಿ ತುಂಬುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಮಹನೀಯರ ಜಯಂತಿಗಳನ್ನು ಅಧಿಕೃತವಾಗಿ ಆಚರಿಸುವ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ಸ್ವಾಭಿಮಾನ ಮೂಡಿಸುವ ಕಾರ್ಯ ಮಾಡುತ್ತಿದೆ , ಈ ದಿಸೆಯಲ್ಲಿ ತಿಗಳ ಸಮುದಾಯದ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಯನ್ನು ಗೌರವಿಸುವ ಸಂಕೇತವಾಗಿ ಅಗ್ನಿ ಬನ್ನಿರಾಯ ಜಯಂತಿ ಆಚರಣೆ ಅರ್ಥಪೂರ್ಣವಾಗಿದೆ ಎಂದು ಹೇಳಿದರು.

ಬೆಂಗಳೂರಿನ ಪ್ರಸಿದ್ಧ ಕರಗ ಮಹೋತ್ಸವದಲ್ಲಿ ತಿಗಳ ಸಮುದಾಯದ ಪಾತ್ರ ಅತ್ಯಂತ ಪ್ರಮುಖವಾಗಿದೆ. ಈ ಸಮುದಾಯದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಅಗ್ನಿ ಬನ್ನಿರಾಯರ ಆರಾಧನೆ ಕೇವಲ ಒಂದು ಆಚರಣೆಯಲ್ಲ, ಅದು ಸಮುದಾಯದ ಗೌರವ, ಅಸ್ತಿತ್ವ ಮತ್ತು ಐಕ್ಯತೆಯ ಪ್ರತೀಕವಾಗಿದೆ ಎಂದು ಅಭಿಪ್ರಾಯಪಟ್ಟರು.ಅಗ್ನಿಯ ಮಹತ್ವವನ್ನು ಉಲ್ಲೇಖಿಸಿದ ಅವರು, “ಅಗ್ನಿ ಇಲ್ಲದೆ ಮನುಷ್ಯ ಜೀವನವೇ ಅಪೂರ್ಣ. ಅಡುಗೆ, ಪೂಜೆ, ಸಂಸ್ಕಾರ, ಯಜ್ಞ, ಯಾಗ, ದೈನಂದಿನ ಜೀವನ – ಎಲ್ಲ ಕ್ಷೇತ್ರಗಳಲ್ಲೂ ಅಗ್ನಿಗೆ ಅನನ್ಯ ಸ್ಥಾನವಿದೆ. ಅಂತಹ ಅಗ್ನಿಯ ವರಪ್ರಸಾದದಿಂದ ಜನಿಸಿದ ಅಗ್ನಿ ಬನ್ನಿರಾಯರನ್ನು ಸ್ಮರಿಸುವುದು ಮನುಕುಲದ ಕರ್ತವ್ಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ತಹಸೀಲ್ದಾರ್‌ ಸಂತೋಷ್ ಕುಮಾರ್‌, ಅಗ್ನಿ ಬನ್ನಿರಾಯ ಜಯಂತಿ ಆಚರಣೆ ಕೇವಲ ಒಂದು ಸಮುದಾಯದ ಹಬ್ಬವಲ್ಲ, ಅದು ಜೀವನದಲ್ಲಿ ಅಗ್ನಿಯ ಅವಶ್ಯಕತೆಯನ್ನು ಸ್ಮರಿಸುವ ಸಂದರ್ಭವೂ ಹೌದು ಎಂದು ಹೇಳಿದರು. “ಅಗ್ನಿ ಇಲ್ಲದಿದ್ದರೆ ಮನುಷ್ಯನ ಬದುಕು ದುಸ್ತರವಾಗುತ್ತದೆ. ಹೀಗಾಗಿ ಅಗ್ನಿ ಬನ್ನಿರಾಯರ ಆರಾಧನೆಗೆ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಎರಡೂ ಅರ್ಥಗಳಿವೆ ಎಂದು ತಿಳಿಸಿದರು.ತಿಗಳ ಸಮುದಾಯದವರು ಸರ್ಕಾರದ ವಿವಿಧ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಯೋಜನೆಗಳ ಪ್ರಯೋಜನಗಳನ್ನು ಪಡೆದು ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದ ಅವರು, ಸಂಘಟಿತ ಮನೋಭಾವದಿಂದ ಸಮುದಾಯದ ಪ್ರಗತಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಹೆಚ್ಚುವರಿ ತಹಸೀಲ್ದಾರ್‌ ಪಾಲಾಕ್ಷ ಮೂರ್ತಿ, ಸಮಾಜದ ಮುಖಂಡರಾದ ದೇವರಾಜ್, ಪರಮೇಶ್ವರ್‌, ಸಮುದಾಯದ ಹಿರಿಯರು, ಯುವಕರು ಹಾಗೂ ಅನೇಕ ಬಾಂಧವರು ಭಾಗವಹಿಸಿದ್ದರು. ಜಯಂತಿ ಕಾರ್ಯಕ್ರಮವು ಸರಳತೆ, ಗೌರವ ಮತ್ತು ಸಮುದಾಯ ಐಕ್ಯತೆಯ ಸಂಕೇತವಾಗಿ ನೆರವೇರಿತು.