ಸಾರಾಂಶ
ಚಿಕ್ಕಮಗಳೂರು: ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗದೇ ಸಮಾಜದಲ್ಲಿ ಮುಂಚೂಣಿಯಲ್ಲಿ ಧಾವಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವಾರು ಸವಲತ್ತುಗಳನ್ನು ಒದಗಿಸಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು. ನಗರದ ಕಾರ್ಮಿಕ ಇಲಾಖೆಯಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆ ವತಿಯಿಂದ ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮಂಗಳವಾರ ಉಚಿತ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು. ಪ್ರಸ್ತುತ ಕಾರ್ಮಿಕರಾಗಿ ದುಡಿಯುತ್ತಿರುವ ವೃತ್ತಿಬಾಂಧವರ ಮಕ್ಕಳು ಪೋಷಕರ ವೃತ್ತಿಯನ್ನೇ ಅವಲಂಭಿಸಬಾರದೆಂಬ ದೃಷ್ಟಿಯಿಂದ ನೊಂದಾಯಿತ ಕಟ್ಟಡ ಕಾರ್ಮಿಕರ ಮೊದಲ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನರ್ಸರಿ ಯಿಂದ ಸ್ನಾತಕೋತ್ತರ ಪದವಿವರೆಗೆ ವಿದ್ಯಾರ್ಥಿ ವೇತನ ಹಾಗೂ ಮೂಲ ಸವಲತ್ತುಗಳನ್ನು ನೀಡಿ ಪ್ರೋತ್ಸಾಹಿಸುತ್ತಿದೆ ಎಂದು ತಿಳಿಸಿದರು. ರಾಜ್ಯಾದ್ಯಂತ ಪ್ರತಿಭಾವಂತ ಕಾರ್ಮಿಕರ ಮಕ್ಕಳನ್ನು ಗುರುತಿಸಿ ಉಚಿತ ಲ್ಯಾಪ್‌ಟಾಪ್‌ನ್ನು ಪ್ರತಿವರ್ಷ ವಿತರಿಸಲಾಗುತ್ತಿದೆ ಎಂದ ಅವರು, ಈ ಬಾರಿ ಅವಕಾಶ ವಂಚಿತರಾದವರು ಬೇಸರಗೊಳ್ಳದೇ ಮುಂದಿನ ಬಾರಿ ಶ್ರಮಪಟ್ಟು ಅಭ್ಯಾಸಿಸುವ ಮೂಲಕ ಸರ್ಕಾರದ ಯೋಜನೆಗಳ ಬಳಕೆಗೆ ಅರ್ಹರಾಗಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ಕಾರ್ಮಿಕ ಮಂಡಳಿಯ ಸವಲತ್ತುಗಳನ್ನು ಕೇವಲ ಪಡೆದುಕೊಂಡರೆ ಸಾಲದು, ವಿದ್ಯಾಭ್ಯಾಸದಲ್ಲಿ ಹೆಚ್ಚು ತೊಡಗಿಸಿಕೊಂಡು ಉನ್ನತ ಸ್ಥಾನ ಗಳಿಸುವ ಮೂಲಕ ತಂದೆ-ತಾಯಿ ಹಾಗೂ ಸಮಾಜಕ್ಕೆ ಕೀರ್ತಿ ತರುವ ನಿಟ್ಟಿನಲ್ಲಿ ಬದುಕು ತೋರಿಸಿದಾಗ ಮಾತ್ರ ಸರ್ಕಾರಗಳು ಯೋಜನೆಗಳು ಪರಿಪೂರ್ಣ ವಾದಂತೆ ಎಂದು ಸಲಹೆ ಮಾಡಿದರು. ಕಾರ್ಮಿಕ ಇಲಾಖೆ ಸಹಾಯಕ ಕಾರ್ಮಿಕ ಆಯುಕ್ತ ಕೆ.ಎಲ್.ರವಿಕುಮಾರ್ ಮಾತನಾಡಿ, ಅಸಂಖ್ಯಾತರಾಗಿ ದುಡಿಯುತ್ತಿರುವ ಕಟ್ಟಡ ಕಾರ್ಮಿಕ ಬದುಕನ್ನು ಸುಸ್ಥಿತಿ ತರುವ ನಿಟ್ಟಿನಲ್ಲಿ 1996 ರಲ್ಲಿ ಕಾರ್ಮಿಕ ಕಾಯ್ದೆ ಪ್ರಾರಂಭಗೊಂಡಿದ್ದು ರಾಜ್ಯದಲ್ಲಿ 2006ರಲ್ಲಿ ನಿಯಮಗಳನ್ನು ರೂಪಿಸಿ ಮಂಡಳಿ ಸ್ಥಾಪಿಸಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು. ದೇಶದಲ್ಲಿ ಶೇ.90 ರಷ್ಟು ಮಂದಿ ಅಸಂಖ್ಯಾತ ಕಾರ್ಮಿಕರು ದುಡಿಯುತ್ತಿದ್ದು ಅವರಿಗೆ ಸಾಮಾಜಿಕ ಭದ್ರತಾ ಸುರಕ್ಷತೆ ಇಲ್ಲದಿರುವ ಕಾರಣದಿಂದ ಮಂಡಳಿಯಿಂದ ಪಿಂಚಣಿ ಸೌಲಭ್ಯ, ದುರ್ಬಲತೆ ಪಿಂಚಣಿ, ಟೂಲ್‌ಕಿಟ್ ಸೌಲ ಭ್ಯ, ವೈದ್ಯಕೀಯ ಸಹಾಯಧನ ಹಾಗೂ ತಾಯಿ ಮಗು ಸಹಾಯಹಸ್ತ ಸೇರಿದಂತೆ ಹಲವಾರು ಸವಲತ್ತುಗಳನ್ನು ಕಲ್ಪಿಸಿಕೊಡಲಾಗುತ್ತಿದೆ ಎಂದು ಹೇಳಿದರು. ರಾಜ್ಯ ಸರ್ಕಾರದ ನಿರ್ದೇಶದನ್ವಯ ತಾಲ್ಲೂಕಿನಲ್ಲಿ 66 ಸೇರಿದಂತೆ ಒಟ್ಟಾರೆ ಜಿಲ್ಲೆಯಾದ್ಯಂತ 280 ಕಾರ್ಮಿ ಕರ ಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ ಮಾಡಲಾಗಿದ್ದು, ವಿದ್ಯಾಭ್ಯಾಸದಲ್ಲಿ ಸಾಧನೆಗೈದ ಪ್ರತಿಭಾವಂತ ಮಕ್ಕಳನ್ನು ಗುರುತಿಸುವ ಮೂಲಕ ಸೌಲಭ್ಯವನ್ನು ತಲುಪಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಬಿ.ಸಿ.ಸುರೇಶ್, ಹಿರಿಯ ಕಾರ್ಮಿಕ ನಿರೀಕ್ಷಕರಾದ ಗಿರಿಜಾ, ಪ್ರವೀಣ್‌ಕುಮಾರ್, ಮಹಮ್ಮದ್ ಅರೀಫ್, ಯೋಜನಾ ನಿರ್ದೇಶಕ ಬಿ.ಎಂ.ಪ್ರವೀಣ್ ಕುಮಾರ್ ಇದ್ದರು.