ಸರ್ಕಾರಿ ನೌಕರರು ಸರ್ಕಾರದ ಆಧಾರಸ್ತಂಭ: ಶಾಸಕ ಬಸವರಾಜ ಶಿವಣ್ಣನವರ

| Published : Apr 22 2025, 01:56 AM IST

ಸಾರಾಂಶ

ನೌಕರರು ವೃತ್ತಿ ಜೀವನದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಬೇಕು.

ಬ್ಯಾಡಗಿ: ಸರ್ಕಾರಿ ನೌಕರರು ಸರ್ಕಾರದ ಆಧಾರಸ್ತಂಭಗಳಾಗಿದ್ದಾರೆ. ನೌಕರರ ಸಾಮರ್ಥ್ಯದ ಮೇಲೆ ಸರ್ಕಾರಕ್ಕೆ ವಿಶ್ವಾಸವಿದೆ. ಆದರೆ ನೌಕರರು ಕರ್ತವ್ಯದಲ್ಲಿ ಇನ್ನಷ್ಟು ದಕ್ಷತೆ ಹೆಚ್ಚಿಸಿಕೊಂಡಲ್ಲಿ ಮಾತ್ರ ಆಡಳಿತಾರೂಢ ಸರ್ಕಾರಗಳು ಗೌರವದಿಂದ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವೆಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯಪಟ್ಟರು.

ಪಟ್ಟಣದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ನೌಕರರ ಸಂಘದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ, ಸರ್ಕಾರಿ ನೌಕರರ ದಿನಾಚರಣೆ ಹಾಗೂ ನಿವೃತ್ತ ನೌಕರರು ಹಾಗೂ ವಿಶೇಷ ಸಾಧಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರದ ಕೆಲಸ ದೇವರ ಕೆಲಸ. ಇಲ್ಲಿ ತಾವು ಮಾಡುತ್ತಿರುವ ಸೇವೆ ದೇವರಿಗೆ ಅರ್ಪಿತವಾಗಲಿದೆ. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವದಂತೆ ಮಾಡುವ ಕೆಲಸ ಇನ್ನೊಬ್ಬರಿಗೆ ಮಾದರಿಯಾಗಬೇಕು. ಹೀಗಾಗಿ ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವ ಮಾತುಗಳು ಇದೀಗ ರೂಢಿಯಲ್ಲಿ ಉಳಿದುಕೊಳ್ಳುತ್ತಿದ್ದು, ಬಹುತೇಕ ಆಡಳಿತಾರೂಢ ಸರ್ಕಾರಗಳು ನೌಕರರ ಮೇಲೆ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿವೆ ಎಂದರು.

ನೌಕರರು ವೃತ್ತಿ ಜೀವನದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಬೇಕು. ನೌಕರರ ಹಲವಾರು ಬೇಡಿಕೆಗಳಿಗೆ ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಂದಿಸಿದ್ದಾರೆ. ಯಾವುದೇ ತೊಂದರೆಯಿಲ್ಲದೇ ನಿರ್ಭಯವಾಗಿ ನೌಕರರು ಕೆಲಸ ಮಾಡುವಂತೆ ಸೂಚನೆಗಳನ್ನು ನೀಡಿದ್ಧಾರೆ ಎಂದರು.

ನೌಕರರ ಸಂಘದ ತಾಲೂಕಾಧ್ಯಕ್ಷ ಎಂ.ಎನ್. ಕಂಬಳಿ ಪ್ರಾಸ್ತಾವಿಕವಾಗಿ ಮಾತನಾಡಿ, ನೌಕರರ ಸಂಘದ ಕಟ್ಟಡದ ದುರಸ್ತಿಗೆ ₹20 ಲಕ್ಷ ಅನುದಾನ ನೀಡುವಂತೆ ಶಾಸಕರಲ್ಲಿ ಮನವಿ ಮಾಡಿದರು.

ವೇದಿಕೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ, ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ, ತಹಸೀಲ್ದಾರ್ ಫೀರೋಜ ಷಾ ಸೋಮನಕಟ್ಟಿ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಉಪಸ್ಥಿತರಿದ್ದರು. ರಾಜ್ಯ ಪರಿಷತ್ ಸದಸ್ಯ ಮಾಲತೇಶ ಚಳಗೇರಿ ಸ್ವಾಗತಿಸಿದರು. ಕಾರ್ಯದರ್ಶಿ ಗುರುರಾಜ ಚಂದ್ರಿಕೇರ ನಿರೂಪಿಸಿದರು. ಖಜಾಂಚಿ ವಿಶ್ವನಾಥ ಜುಮನಾಳ ವಂದಿಸಿದರು.ಕೃಷಿ ಇಲಾಖೆಯಿಂದ ಉಪಕರಣ ವಿತರಣೆ

ರಾಣಿಬೆನ್ನೂರು: ರೈತರಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದು ಆರ್ಥಿಕಾಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಸೋಮವಾರ 2024- 25ನೇ ಸಾಲಿನ ಕೃಷಿ ಯಾಂತ್ರೀಕರಣ ಯೋಜನೆ ಅಡಿ ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಕೃಷಿ ಉಪಕರಣ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದರು.

ರೈತರು ವಿತರಿಸಿದ ಉಪಕರಣಗಳನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಆದಾಯ ಪಡೆದು ಅಭಿವೃದ್ಧಿ ಹೊಂದಬೇಕೆಂದು ಎಂದರು.ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ., ತಾಂತ್ರಿಕ ಅಧಿಕಾರಿ ಶಿವಾನಂದ ಹಾವೇರಿ, ಬಸವರಾಜ ಎಫ್.ಎಂ., ಅರವಿಂದ ಎಂ. ಮತ್ತು ಕೃಷಿ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.