ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿರುವ ರಾಜ್ಯ ಸರ್ಕಾರ, ಜೂ. 25ರಿಂದ ಜು. 9ರೊಳಗೆ ‘ಎ’ ದರ್ಜೆಯಿಂದ ‘ಡಿ’ ದರ್ಜೆವರೆಗಿನ ನೌಕರರು, ಅಧಿಕಾರಿಗಳ ವರ್ಗಾವಣೆ ಮಾಡುವಂತೆ ಆಯಾ ಇಲಾಖಾ ಸಚಿವರಿಗೆ ಸೂಚಿಸಿದೆ.ಪದೇಪದೇ ವರ್ಗಾವಣೆ ಮಾಡುವ ಕಿರಿಕಿರಿಯನ್ನು ತಪ್ಪಿಸಲು ಆಯಾ ಆರ್ಥಿಕ ವರ್ಷದ ಆರಂಭದಲ್ಲಿ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಸರ್ಕಾರ ನಿಗದಿ ಮಾಡುವ ಅವಧಿಯಲ್ಲಿ ಆಯಾ ಇಲಾಖೆಯ ಸಚಿವರ ವಿವೇಚನೆಯಂತೆ ವರ್ಗಾವಣೆ ಮಾಡಲಾಗುತ್ತಿದ್ದು, ಆನಂತರ ವರ್ಗಾವಣೆ ಪ್ರಕ್ರಿಯೆ ನಡೆಸದಂತೆ ಸೂಚಿಸಲಾಗಿದೆ. ಅದರಂತೆ ಈ ವರ್ಷದ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಗೆ ಜೂ. 25ರಿಂದ ಚಾಲನೆ ನೀಡಲಾಗಿದ್ದು, ಜು. 9ರೊಳಗೆ ಇಲಾಖೆಯ ಎಲ್ಲ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಆಯಾ ಇಲಾಖಾ ಸಚಿವರಿಗೆ ತಿಳಿಸಲಾಗಿದೆ. ಅಲ್ಲದೆ, ವರ್ಗಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನೂ ಪ್ರಕಟಿಸಲಾಗಿದೆ.
ವರ್ಗಾವಣೆ ಸಂದರ್ಭದಲ್ಲಿ ಕಾರ್ಯನಿರತ ವೃಂದ ಬಲದ ಶೇ. 6ನ್ನು ಮೀರದಂತೆ ವರ್ಗಾವಣೆ ಮಾಡಬೇಕು ಎಂದು ಸೂಚಿಸಲಾಗಿದೆ. ಜತೆಗೆ ವರ್ಗಾವಣೆಗೊಂಡ ನೌಕರ ಸ್ಥಳ ನಿರೀಕ್ಷೆಯಲ್ಲಿರುವಂತೆ ಮಾಡಬಾರದು, ಕ್ರಿಮಿನಲ್/ಇಲಾಖಾ ವಿಚಾರಣೆಯಲ್ಲಿರುವ ನೌಕರರು ಹಾಗೂ ಗಂಭೀರ ಆರೋಪ ಹೊಂದಿರುವವರನ್ನು ಅವರ ಮೇಲಿನ ತನಿಖೆಯಲ್ಲಿ ಹಸ್ತಕ್ಷೇಪವನ್ನು ಮಾಡಲಾಗದಂತಹ ಹುದ್ದೆಗಳಿಗೆ ನೇಮಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.ವರ್ಗಾವಣೆಗೊಂಡ ನೌಕರ ಅಥವಾ ಅಧಿಕಾರಿ ವೈದ್ಯಕೀಯ ಕಾರಣ ನೀಡಿ ರಜೆಗೆ ಅರ್ಜಿ ಸಲ್ಲಿಸಿದರೆ ಅದಕ್ಕೆ ಸಂಬಂಧಿಸಿದ ಸೂಕ್ತ ದಾಖಲೆ ನೀಡಬೇಕು. ಅಂತಹ ಪ್ರಕರಣಗಳನ್ನು ಮಾತ್ರ ಪರಿಗಣಿಸಿ ವರ್ಗಾವಣೆಗೊಂಡ ಸ್ಥಳಕ್ಕೆ ನಿಯುಕ್ತಿಗೊಳ್ಳುವುದಕ್ಕೆ ವಿನಾಯಿತಿ ನೀಡಿ ರಜೆ ಮಂಜೂರು ಮಾಡಬೇಕು ಎಂದು ಹೇಳಲಾಗಿದೆ.
ಎ ಮತ್ತು ಬಿ ದರ್ಜೆಯ ಅಧಿಕಾರಿಗಳು ಒಂದೇ ಸ್ಥಳದಲ್ಲಿ 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿ ಕೆಲಸ ಮಾಡುತ್ತಿದ್ದರೆ, ಸಿ ದರ್ಜೆ ನೌಕರ 4 ವರ್ಷ ಹಾಗೂ ಡಿ ದರ್ಜೆ ನೌಕರ 7 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ ಅಂತಹವರು ವರ್ಗಾವಣೆ ಮಾಡುವುದಕ್ಕೆ ಅರ್ಹರಾಗಿರುತ್ತಾರೆ ಎಂದು ವಿವರಿಸಲಾಗಿದೆ.ಒಂದು ತಿಂಗಳು ವರ್ಗ ನಡೆದಿತ್ತು:
ಸಾರ್ವತ್ರಿಕ ವರ್ಗಾವಣೆಗೆ ಸಂಬಂಧಿಸಿದಂತೆ ಕಳೆದ ವರ್ಷ ಜೂ. 1ರಿಂದ 15ರವರೆಗೆ ಅವಧಿ ನಿಗದಿ ಮಾಡಲಾಗಿತ್ತು. ಆದರೆ, ವರ್ಗಾವಣೆ ಕೋರಿ ಇಲಾಖಾ ಸಚಿವರಿಗೆ ಬಂದ ಅರ್ಜಿಗಳ ಸಂಖ್ಯೆ ಹೆಚ್ಚಿದ್ದ ಕಾರಣ ಹಾಗೂ ಸರ್ಕಾರ ರಚನೆಯಾಗಿ ಒಂದು ತಿಂಗಳೂ ಪೂರೈಕೆಯಾಗದ ಕಾರಣ ಆ ಅವಧಿಯನ್ನು ಮತ್ತೆ 15 ದಿನಗಳ ಕಾಲ ವಿಸ್ತರಿಸಲಾಗಿತ್ತು. ಹೀಗಾಗಿ ಕಳೆದ ವರ್ಷ ಒಂದು ತಿಂಗಳವರೆಗೆ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ ನಡೆಸಲಾಗಿತ್ತು.