ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆ ಈಡೇರದಿದ್ದರೇ ಜುಲೈ 29ರಿಂದ ಕಚೇರಿ ಕೆಲಸಕ್ಕೆ ಯಾರು ಹೋಗದೇ ಮನೆಯಲ್ಲೆ ಇರಲಾಗುವುದು. ಈ ವೇಳೆ ಸರ್ಕಾರವು ಸೇಡು ತೀರಿಸಿಕೊಳ್ಳಲು ನನ್ನ ಕೆಲಸದಿಂದ ತೆಗೆದು ಹಾಕಿ ಜೈಲಿಗೆ ಕಳುಹಿಸಿದರೂ ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಎಚ್ಚರಿಸಿದರು.ನಗರದ ಹಾಸನಂಬ ಕಲಾಕ್ಷೇತ್ರದಲ್ಲಿ ಜಿಲ್ಲಾ ಸರ್ಕಾರಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಮತ್ತು ತಾಲೂಕು, ಜಿಲ್ಲಾ ಘಟಕದ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, 7ನೇ ವೇತನ ಆಯೋಗದ ವರದಿ ಸಲ್ಲಿಕೆಯಾಗಿ 10 ತಿಂಗಳು ಕಳೆದರೂ ಜಾರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಯಾವುದಕ್ಕೂ ಅಂಜದೆ, ಹೆದರದೆ ಪ್ರತಿಭಟನೆ ನಡೆಸುತ್ತೇವೆ. ಸರ್ಕಾರಿ ನೌಕರರೆಲ್ಲರೂ ಈಗಾಗಲೇ ತೀರ್ಮಾನಿಸಿದ್ದು, ಸರ್ಕಾರಕ್ಕೆ ಗಡುವು ನೀಡಲಾಗಿದೆ. ಆದರೂ ಕ್ರಮಕೈಗೊಂಡಿಲ್ಲ. ಆದ್ದರಿಂದ "ನಮ್ಮ ಹಕ್ಕು, ನಮ್ಮ ಬೇಡಿಕೆ " ಎಂಬ ಘೋಷವಾಕ್ಯದೊಂದಿಗೆ ಹೋರಾಟ ನಡೆಸಲು ಸಿದ್ಧವಾಗಿದ್ದೇವೆ. ಸ್ವಾಭಿಮಾನದ ಬದುಕಿಗಾಗಿ ಏಳನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸುತ್ತಿದ್ದೇವೆ. ನಮ್ಮ ಹಕ್ಕಿಗಾಗಿ ಜುಲೈ 29ರಿಂದ ಕೆಲಸಕ್ಕೆ ಗೈರಾಗುವ ಮೂಲಕ ಅಸಹಕಾರ ಚಳವಳಿ ನಡೆಸಲು ನಿರ್ಧರಿಸಿದ್ದೇವೆ ಎಂದರು.
ಹೊರೆಯಾಗುವುದಿಲ್ಲ: ರಾಜ್ಯ ಸರ್ಕಾರ ಆರನೇ ಗ್ಯಾರಂಟಿಯಾಗಿ ಏಳನೇ ವೇತನ ಆಯೋಗದ ವರದಿ ಅನುಷ್ಠಾನಗೊಳಿಸಬೇಕಿತ್ತು. ಗ್ಯಾರಂಟಿ ಯೋಜನೆಗಾಗಿ ಪ್ರತಿವರ್ಷ 50ರಿಂದ 60 ಸಾವಿರ ಕೋಟಿ ರು. ವ್ಯಯಿಸುತ್ತಿರುವ ಸರ್ಕಾರಕ್ಕೆ ನಮಗೆ ನೀಡುವ 10 ಸಾವಿರ ಕೋಟಿ ರು. ಹೊರೆಯಾಗುವುದಿಲ್ಲ. ಹೋರಾಟದ ರೂಪುರೇಷೆ ರೂಪಿಸಲು ಜು. 23ರಂದು ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ ಎಂದರು.ವೇತನ ಹೆಚ್ಚಿಸಬೇಕು: ರಾಜ್ಯ ಸರ್ಕಾರಿ ನೌಕರರಿಗೆ ತುರ್ತಾಗಿ 7ನೇ ವೇತನ ಆಯೋಗ, ಹಳೆಯ ಪಿಂಚಣಿ ಯೋಜನೆ ಜಾರಿ ಹಾಗು ಉಚಿತ ಆರೋಗ್ಯ ಯೋಜನೆ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಸಂಘ ಆರಂಭದಿಂದಲೂ ಹೋರಾಟ ನಡೆಸುತ್ತಿದೆ. ಹಿಂದಿನ ಸರ್ಕಾರಕ್ಕೂ ಸಹ ಇದೇ ಬೇಡಿಕೆ ಸಲ್ಲಿಸಲಾಗಿತ್ತು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೇ.17ರಷ್ಟು ವೇತನ ಹೆಚ್ಚಿಸಿ ಮಧ್ಯಂತರ ಆದೇಶ ಹೊರಡಿಸಿದ್ದರು. ಒಟ್ಟಾರೆಯಾಗಿ ಶೇ.27.50ರಷ್ಟು ವೇತನ ಹೆಚ್ಚಿಸಬೇಕು ಎನ್ನುವುದು ನಮ್ಮ ಬೇಡಿಕೆ. ಈಗಾಗಲೇ ಶೇ. 17ರಷ್ಟು ಹೆಚ್ಚಿಸಿರುವುದರಿಂದ ಬಾಕಿ ಶೇ. 10.50 ರಷ್ಟು ಏರಿಕೆಯಾಗಬೇಕು. ಅದಕ್ಕೆ ಸರ್ಕಾರಕ್ಕೆ ವಾರ್ಷಿಕ 12 ಸಾವಿರ ಕೋಟಿ ರು. ಮಾತ್ರ ಹೊರೆಯಾಗುತ್ತದೆ. ಆದರೆ ಯಾರದೋ ಮಾತಿಗೆ ಬೆಲೆ ಕೊಟ್ಟು ನಮ್ಮ ಬೇಡಿಕೆಗಳನ್ನು ಕಡೆಗಣಿಸುವುದು ಸರಿಯಲ್ಲ ಎಂದು ಹೇಳಿದರು.
ಕಿವಿಗೊಡಬೇಡಿ: ಸಿ.ಎಸ್.ಷಡಕ್ಷರಿ ಆಮಿಷಗಳಿಗೆ ಬಲಿಯಾಗಿ ಪ್ರತಿಭಟನೆಯಿಂದ ಹಿಂದೆ ಸರಿಯುತ್ತಾರೆಂಬ ಊಹಾಪೋಹಗಳಿಗೆ ಕಿವಿಗೊಡಬೇಡಿ. ನನ್ನ ವಿರುದ್ಧ ಸರ್ಕಾರ ಸೇಡು ತೀರಿಸಿಕೊಳ್ಳಲು ಅಮಾನತು, ಸೇವೆಯಿಂದ ವಜಾಗೊಳಿಸಲಿ ಅಥವಾ ಜೈಲಿಗೆ ಕಳುಹಿಸಬಹುದು. ಆದರೆ ಏಳನೇ ವೇತನ ಜಾರಿಗಾಗಿ ನಾನು ನೌಕರಿ ತ್ಯಜಿಸಲು ಸಿದ್ಧನಿದ್ದೇನೆ. ಬದುಕುವ ಕಲೆ ಗೊತ್ತಿರುವುದರಿಂದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾದರೆ ಯಾವುದಾದರೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತೇನೆ ಎಂದು ನುಡಿದರು.2019ರಲ್ಲಿ ಸಂಘದ ರಾಜ್ಯಾಧ್ಯಕ್ಷನಾಗುವ ವೇಳೆ ಶೇ. 40ರಷ್ಟು ವೇತನ ಹೆಚ್ಚಿಸುತ್ತೇನೆಂದು ಭರವಸೆ ನೀಡಿದ್ದೆ. ಆ ನಿಟ್ಟಿನಲ್ಲಿ ಹೋರಾಟ ಸಹ ಕೈಗೊಂಡಿದ್ದೇನೆ. 2026ಕ್ಕೆ ಕೇಂದ್ರ ಸರ್ಕಾರದ ವೇತನ ಪರಿಷ್ಕರಣೆ ಆಗಲಿದ್ದು, ಆ ವೇಳೆಯೂ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯಾಗುತ್ತದೆ. ಆದ್ದರಿಂದ ಬಾಕಿಯಿರುವ ಶೇ. 10.50 ವೇತನ ಹೆಚ್ಚಿಸಬೇಕೆಂಬ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
ಎಸ್‌ಎಸ್‌ಎಲ್‌ಸಿ ಹಾಗು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿ ಪೋಷಕರ ಕೀರ್ತಿ ಹೆಚ್ಚಿಸಿರುವ ವಿದ್ಯಾರ್ಥಿಗಳು ಮುಂದಿನ ಜೀವನವನ್ನು ಗೌರವದಿಂದ ನಡೆಸಬೇಕು. ತಂದೆ-ತಾಯಿ ಕಷ್ಟಪಟ್ಟು ಬೆಳೆಸುತ್ತಾರೆ. ಜೀವನದ ಯಾವುದಾದರೂ ಒಂದು ಘಟ್ಟದಲ್ಲಿ ಮಾಡುವ ಸಣ್ಣ ತಪ್ಪು ಜೀವನ ಪೂರ್ತಿ ಪೋಷಕರು ತಲೆ ತಗ್ಗಿಸುವ ಹಾಗೆ ಮಾಡುತ್ತದೆ. ಯಾರೂ ಸಹ ಅಂತಹ ತಪ್ಪು ದಾರಿಯತ್ತ ಹೆಜ್ಜೆ ಹಾಕಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿ ಸಿದ್ರಾಮಣ್ಣ ಅವರು ಮಾತನಾಡಿ, ಈಗಿನ ಯಶಸ್ಸು ಸಾವಧಾನದಿಂದ ಸ್ವೀಕರಿಸಬೇಕು. ಮನುಷ್ಯನಿಗೆ ಗರ್ವ ಬಂದರೆ ಅದರ ಪರಿಣಾಮಗಳು ಘೋರವಾಗಿರುತ್ತವೆ ಎಂದರು.
ನೌಕರರ ಸಂಘದ ಜಿಲ್ಲಾಧ್ಯಕ್ಷ ಈ. ಕೃಷ್ಣೇಗೌಡ ಮಾತನಾಡಿ, ನಾನು ಜಿಲ್ಲಾಧ್ಯಕ್ಷನಾದ ಮೇಲೆ ನೌಕರರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಮತ್ತು ಪ್ರತಿ ವರ್ಷವೂ ಮಕ್ಕಳಿಗೆ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಬಿ.ಡಿ. ದಿನೇಶ್, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ, ರುದ್ರಪ್ಪ, ಟಿ.ಎಸ್. ಕುಮಾರಸ್ವಾಮಿ, ಪ್ರದೀಪಕುಮಾರ್, ಸಿ.ಕೆ.ರಘು, ಕಸಾಪ ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಪ್ರದೀಪ್ ಕುಮಾರ್, ಮಂಜೇಗೌಡ ಉಪಸ್ಥಿತರಿದ್ದರು.