ಸಾರಾಂಶ
. ಬೋರ್ ವೆಲ್ ನೀರಿನ ಉಪ್ಪಿನ ಅಂಶದ ಕಾರಣಕ್ಕಾಗಿ ಭೂಮಿಯೊಳಗೆ ನೀರಿನ ಮೈನ್ ಪೈಪುಗಳು ಉಪ್ಪು ಕಟ್ಟಿಕೊಂಡು ಸಮರ್ಪಕವಾಗಿ ನೀರು ಬರುತ್ತಿಲ್ಲ.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ದಟ್ಟಗಳ್ಳಿ 3ನೇ ಹಂತದಲ್ಲಿರುವ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ಸೋಮನಾಥನಗರ ಬಡಾವಣೆಯ ನಿವಾಸಿಗಳ ಗೋಳನ್ನು ಕೇಳುವವರು ಯಾರೂ ಇಲ್ಲ. ಈ ಮೊದಲು ಮೂಡಾಕ್ಕೆ ಕಂದಾಯ ಕಟ್ಟುತ್ತಿದ್ದರೂ, ಯಾವುದೇ ನಾಗರೀಕ ಮೂಲಭೂತ ಸೌಲಭ್ಯವನ್ನು ನೀಡಿಲ್ಲ. ಮೂಡಾದಿಂದ ಈಗ ಸೋಮನಾಥನಗರವನ್ನು ಬೋಗಾದಿ ಪಟ್ಟಣ ಪಂಚಾಯಿತಿಗೆ ಸೇರಿಸಿದ್ದು, ನಿವಾಸಿಗಳ ಪಾಲಿಗೆ ಬೆಂಕಿಯಿಂದ ಬಾಣಲಿಗೆ ಬಿದ್ದಂತ ಅನುಭವ ಆಗಿದೆ.ಸಮಸ್ಯೆಗಳು ಬಗೆಹರಿಯುವ ಬದಲು ಮತ್ತಷ್ಟು ಹೆಚ್ಚಾಗುತ್ತಿವೆ. ಬೋರ್ ವೆಲ್ ನೀರಿನ ಉಪ್ಪಿನ ಅಂಶದ ಕಾರಣಕ್ಕಾಗಿ ಭೂಮಿಯೊಳಗೆ ನೀರಿನ ಮೈನ್ ಪೈಪುಗಳು ಉಪ್ಪು ಕಟ್ಟಿಕೊಂಡು ಸಮರ್ಪಕವಾಗಿ ನೀರು ಬರುತ್ತಿಲ್ಲ. ಹೀಗಾಗಿ ಬಹುತೇಕ ಎಲ್ಲಾ ನಿವಾಸಿಗಳು ಬೋಗಾದಿ ಪಟ್ಟಣ ಪಂಚಾಯಿತಿಗೆ ಕಂದಾಯ ಪಾವತಿಸುತ್ತಿದ್ದರೂ ಕಳೆದೆರಡು ತಿಂಗಳು ನೀರಿನ ಟ್ಯಾಂಕ್ ಮೂಲಕ ನೀರನ್ನು ತರಿಸುತ್ತಿದ್ದಾರೆ. ನೀರಿನ ಟ್ಯಾಂಕಿಗಾಗಿಯೇ ಪ್ರತಿ ತಿಂಗಳು 2- 3 ಸಾವಿರ ರೂ. ಸಂಸಾರ ನಿರ್ವಹಣೆಯ ಜೊತೆಗೆ ಹೆಚ್ಚುವರಿ ಖರ್ಚು ಮಾಡುತ್ತಿದ್ದಾರೆ.
ಈಗಾಗಲೇ ಸಿವಿಲ್ ಕಾಮಗಾರಿ ಮುಗಿದ್ದರೂ ಕಬಿನಿ ನೀರು ಸೋಮನಾಥನಗರಕ್ಕೆ ಸರಿಯಾಗಿ ಬರುತ್ತಿಲ್ಲ. ಹೀಗಾಗಿ ಕಬಿನಿ ನೀರು ನಿರಂತರವಾಗಿ ಬರಬೇಕು. ಬಹುತೇಕ ರಸ್ತೆಗಳು ಹಾಳಾಗಿವೆ. ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ. ಕಸದ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಖಾಲಿ ನಿವೇಶನಗಳಲ್ಲಿ ಗಿಡಗಂಟೆಗಳು ಬೆಳೆದು ಹಾವು, ಚೇಳು ಮತ್ತು ವಿಷಜಂತುಗಳ ಆಗರವಾಗಿದೆ.ಮೊದಲೇ ಬೀದಿ ದೀಪ ಇಲ್ಲ. ಜೊತೆಗೆ ರಾತ್ರಿಯಲ್ಲಿ ಓಡಾಡುವ ಈ ಹಾವು ಮತ್ತಿತರ ವಿಷಜಂತುಗಳಿಂದ ಸೋಮನಾಥನಗರ ನಿವಾಸಿಗಳ ವೃದ್ಧರು, ಹಿರಿಯ ನಾಗರೀಕರು, ಮಹಿಳೆಯರು ಮತ್ತು ಮಕ್ಕಳಿಗೆ ಕಷ್ಟವಾಗುತ್ತಿದೆ.
ಸೋಮನಾಥನಗರ ನಿವಾಸಿಗಳ ಮಹಿಳಾ ಒಕ್ಕೂಟ ಸದಸ್ಯರು ಮಂಗಳವಾರ ಬೋಗಾದಿಯಲ್ಲಿರುವ ಪಟ್ಟಣ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ, ಮುಖ್ಯಾಧಿಕಾರಿ ಎಂ. ಬಸವರಾಜು ಅವರಿಗೆ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಎಂ. ಬಸವರಾಜು ಅವರು, ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವುದಾಗಿ ಭರವಸೆ ನೀಡಿದರು.