ಸರ್ಕಾರಿ ನೌಕರರು ಸಾರ್ವಜನಿಕರ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಾರೆ, ಆದರೆ ಈ ಭರದಲ್ಲಿ ತಮ್ಮ ಸ್ವಂತ ಆರೋಗ್ಯವನ್ನು ನಿರ್ಲಕ್ಷಿಸಬಾರದು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್

ಸರ್ಕಾರಿ ನೌಕರರು ಸಾರ್ವಜನಿಕರ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಾರೆ, ಆದರೆ ಈ ಭರದಲ್ಲಿ ತಮ್ಮ ಸ್ವಂತ ಆರೋಗ್ಯವನ್ನು ನಿರ್ಲಕ್ಷಿಸಬಾರದು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರದಂದು ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾದ ಅಧಿಕಾರಿಗಳಿಂದ ಮಾತ್ರ ಜನತೆಗೆ ಉತ್ತಮ ಹಾಗೂ ತ್ವರಿತ ಸೇವೆ ಒದಗಿಸಲು ಸಾಧ್ಯ ಎಂದ ಅವರು, ಆರೋಗ್ಯದ ಹಿತದೃಷ್ಟಿಯಿಂದ ಇಂತಹದೊಂದು ಅತ್ಯುತ್ತಮ ಹಾಗೂ ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದರು.

ಜಿಪಂ ಸಿಇಓ ಗಿಟ್ಟೆ ಮಾಧವ್ ವಿಠ್ಠಲರಾವ್ ಮಾತನಾಡಿ, ದಿನನಿತ್ಯದ ಕಚೇರಿ ಕೆಲಸದ ಒತ್ತಡ, ಬದಲಾದ ಆಹಾರ ಪದ್ಧತಿ ಹಾಗೂ ದೈಹಿಕ ಶ್ರಮದ ಕೊರತೆಯಿಂದಾಗಿ ಇಂದು ಜನರಲ್ಲಿ ರಕ್ತದೊತ್ತಡ (ಬಿಪಿ) ಹಾಗೂ ಮಧುಮೇಹ (ಶುಗರ್) ದಂತಹ ಗಂಭೀರ ಕಾಯಿಲೆಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿವೆ. ರೋಗ ಉಲ್ಬಣಿಸಿದ ಮೇಲೆ ಆಸ್ಪತ್ರೆಗೆ ಅಲೆಯುವ ಬದಲು, ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಜಾಣತನ. ಹೀಗಾಗಿ ಯಾವುದೇ ಲಕ್ಷಣಗಳಿಲ್ಲದಿದ್ದರೂ ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವುದರಿಂದ ಸಂಭವನೀಯ ಅಪಾಯಗಳನ್ನು ತಡೆಯಬಹುದು ಎಂದು ಕಿವಿಮಾತು ಹೇಳಿದರು.

ಸರ್ಕಾರಿ ನೌಕರರು ಸಾರ್ವಜನಿಕರ ಸೇವೆಗಾಗಿ ಶ್ರಮಿಸುತ್ತಾ ತಮ್ಮ ಸ್ವಂತ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸಾಮಾನ್ಯವಾಗಿದೆ. ಇದನ್ನು ಮನಗಂಡು ಈ ವಿಶೇಷ ಶಿಬಿರ ಆಯೋಜಿಸಲಾಗಿದೆ. ಬೀದರ್‌ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಯಾವುದೇ ನೆಪ ಹೇಳದೆ ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಳ್ಳಬೇಕು.

ಕಡ್ಡಾಯವಾಗಿ ತಪಾಸಣೆಗೊಳಗಾಗಿ, ಅಗತ್ಯವಿರುವವರು ವೈದ್ಯರು ಸೂಚಿಸುವ ಸೂಕ್ತ ಚಿಕಿತ್ಸೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ರಕ್ತದಾನ-ಜೀವದಾನ: ರಕ್ತದಾನದ ಮಹತ್ವದ ಬಗ್ಗೆಯೂ ಮಾತನಾಡಿದ ಸಿಇಒ ಅವರು, ರಕ್ತದಾನವು ಜೀವದಾನವಿದ್ದಂತೆ. ನಾವು ನೀಡುವ ರಕ್ತವು ತುರ್ತು ಸಂದರ್ಭದಲ್ಲಿ ಇನ್ನೊಬ್ಬರ ಪ್ರಾಣ ಉಳಿಸುತ್ತದೆ. ಹೀಗಾಗಿ ಈ ಶಿಬಿರದಲ್ಲಿ ಸ್ವಚ್ಛಂದವಾಗಿ ರಕ್ತದಾನ ಮಾಡಲು ಇಚ್ಛಿಸುವವರು ತಮ್ಮ ಹೆಸರನ್ನು ನೋಂದಾಯಿಸಿಕೊಂಡು, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಈ ಪುಣ್ಯದ ಕಾರ್ಯದಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದರು.

ಆರೋಗ್ಯ ತಪಾಸಣೆ ಶಿಬಿರ ಮತ್ತು ರಕ್ತದಾನ ಶಿಬಿರದಲ್ಲಿ ಸಾವಿರಕ್ಕೂ ಅಧಿಕ ಎಲ್ಲ ಇಲಾಖೆ ಅಧಿಕಾರಿ ಸಿಬ್ಬಂದಿ ವರ್ಗದವರ ಆರೋಗ್ಯ ತಪಾಸಣೆ ಆಗಲಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿಯ ಎಲ್ಲಾ ಶಾಖೆಯ ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಗೂ ಜಿಲ್ಲೆಯ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಹಾಗೂ ಇತರರು ಇದ್ದರು.