ಸರ್ಕಾರಿ ನೌಕರರು ಆರೋಗ್ಯದ ಕಾಳಜಿ ವಹಿಸಲಿ: ತಹಸೀಲ್ದಾರ್‌ ನಾಗರಾಜ

| Published : Mar 21 2024, 01:08 AM IST

ಸಾರಾಂಶ

ಸರ್ಕಾರಿ ನೌಕರರು ದೈಹಿಕ ಮತ್ತು ಮಾನಸಿಕವಾಗಿ ಒತ್ತಡದಲ್ಲಿದ್ದು, ಅವರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ.

ಭಟ್ಕಳ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಸ್ಥಳೀಯ ಘಟಕ, ಕಸ್ತೂರಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ಶಿಬಿರವನ್ನು ತಹಸೀಲ್ದಾರ್‌ ನಾಗರಾಜ ನಾಯ್ಕಡ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಸರ್ಕಾರಿ ನೌಕರರು ದೈಹಿಕ ಮತ್ತು ಮಾನಸಿಕವಾಗಿ ಒತ್ತಡದಲ್ಲಿದ್ದು, ಅವರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಕೆಲವು ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಸರ್ಕಾರಿ ನೌಕರರು ಎರಡ್ಮೂರು ಹುದ್ದೆಗಳ ಜವಾಬ್ದಾರಿ ವಹಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒತ್ತಡದಲ್ಲಿ ಕಾರ್ಯ ಮಾಡುತ್ತಾ ಆರೋಗ್ಯದ ಕಡೆಗೆ ಗಮನ ವಹಿಸಲು ಸಾಧ್ಯವಿಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬಹುದಾದ ಉಚಿತ ಆರೋಗ್ಯ ಶಿಬಿರವನ್ನು ಸರ್ಕಾರಿ ನೌಕರರ ಸಂಘದಿಂದ ಆಯೋಜಿಸಿರುವುದು ಅತ್ಯಂತ ಪ್ರಶಂಸಾರ್ಹ ಎಂದರು.

ಅಧ್ಯಕ್ಷತೆ ವಹಿಸಿದ್ದ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ ಮಾತನಾಡಿ, ಸರ್ಕಾರಿ ನೌಕರರಿಗಾಗಿ ಸಾಂಸ್ಕೃತಿಕ ಸ್ಪರ್ಧೆಗಳು, ಕ್ರೀಡೆ, ಹೊನಲು ಬೆಳಕಿನ ವಾಲಿಬಾಲ್, ಪ್ರತಿಭಾ ಪುರಸ್ಕಾರ, ಅಶಕ್ತರಿಗೆ ಧನಸಹಾಯ ಹೀಗೆ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿದ್ದ ಸಂಘ ಇಂದು ಸರ್ಕಾರಿ ನೌಕರರಿಗೆ ಅತ್ಯಂತ ಅವಶ್ಯಕವಾಗಿ ಬೇಕಾಗಿದ್ದ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಿದೆ ಎಂದರು.ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ, ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶಾನಭಾಗ, ಡಾ. ಕವಿಶಾ ಮಾತನಾಡಿದರು.

ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಖಜಾಂಚಿ ಕುಮಾರ ನಾಯ್ಕ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಜಿ. ಹೆಗಡೆ ಉಪಸ್ಥಿತರಿದ್ದರು. ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ ಹೆಗಡೆ ವಂದಿಸಿದರು. ಶಿಕ್ಷಕ ಪರಮೇಶ್ವರ ನಾಯ್ಕ ನಿರೂಪಿಸಿದರು. ಶಿಕ್ಷಕಿ ಕುಸುಮಾ ಪ್ರಾರ್ಥಿಸಿದರು. ನೂರಾರು ನೌಕರರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಶಿಬಿರದಲ್ಲಿ ಹೃದ್ರೋಗ, ಮೂಳೆ ಮತ್ತು ಕೀಲು, ಸಾಮಾನ್ಯ ಚಿಕಿತ್ಸೆ, ಸ್ತ್ರೀ ರೋಗ, ಕಣ್ಣು, ಚರ್ಮರೋಗದ ಚಿಕಿತ್ಸೆಯನ್ನು ನೀಡಿದರು.