ಗೃಹಲಕ್ಷ್ಮಿಯೋಜನೆ ಅನುಷ್ಠಾನದಲ್ಲಿ ಸರ್ಕಾರ ವಿಫಲ

| Published : Jan 03 2024, 01:45 AM IST

ಸಾರಾಂಶ

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆ.15ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿತು. ಆದರೆ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಈ ಕುರಿತು ಮುಂದಿನ ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು.

ಮಾಜಿ ಸಚಿವ ರೇಣುಕಾಚಾರ್ಯ ಆರೋಪ । ತರಗನಹಳ್ಳಿ ಮಹಿಳೆಯರಿಂದ ದಾಖಲೆ ಪ್ರದರ್ಶನ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ಬ್ಯಾಂಕ್ ಖಾತೆಗೆ ₹2 ಸಾವಿರ ಹಾಕುವುದಾಗಿ ಹೇಳಿ ಮತ ಪಡೆದಿದ್ದರು. ಆದರೆ ಈಗ ಬ್ಯಾಂಕ್‌ ಖಾತೆಗೆ ಹಣ ಬಾರದೇ ಮಹಿಳೆಯರು ಸರ್ಕಾರಕ್ಕೆ ಹಿಡಿಶಾಪ ಹಾಕುವಂತಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು.

ತಾಲೂಕಿನ ತರಗನಹಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆ.15ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿತು. ಆದರೆ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಈ ಕುರಿತು ಮುಂದಿನ ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಸುಮಾರು 3.86 ಲಕ್ಷ ಮಹಿಳೆಯರಿದ್ದು ಪ್ರತಿಯೊಬ್ಬರಿಗೂ ಗೃಹಲಕ್ಷ್ಮಿಯೋಜನೆಯಡಿ ಹಣ ಹಾಕಬೇಕು. ಸರ್ಕಾರಕ್ಕೆ ತಾನು ನೀಡಿದ ಭರವಸೆಗಳ ಈಡೇರಿಸಲು ಸುಮಾರು ಒಂದು ಲಕ್ಷ ಕೋಟಿ ರುಪಾಯಿ ಬೇಕು ಆದರೆ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಎಂದು ಆರೋಪಿಸಿದರು.

ರೈತರಿಗೆ ಅನುಕೂಲ ಮಾಡಲಿ:

ಈ ಸಂದರ್ಭದಲ್ಲಿ ತರಗನಹಳ್ಳಿಯ ಸುಷ್ಮಾ ಪಟೇಲ್, ಯಶೋಧಮ್ಮ ಮಾತನಾಡಿ, ರಾಜ್ಯ ಸರ್ಕಾರ ಗೃಹಲಕ್ಷ್ಮಿ ಹಣ ಕೋಡ್ತಿವಿ ಎಂದು ಮೋಸ ಮಾಡಿದೆ. ಮಹಿಳೆಯರಿಗೆ ಎರಡು ಸಾವಿರ ರುಪಾಯಿ ಕೊಡುವ ಬದಲಿಗೆ ವಿದ್ಯಾರ್ಥಿಗಳು , ರೈತರಿಗೆ ಅನುಕೂಲ ಮಾಡಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂಸಿಂಹ ಬಂಧನದ ಹಿಂದೆಯೂ ದ್ವೇಷದ ರಾಜಕಾರಣವಿದೆ, ಅದೇ ಹಿಂದೂಗಳ ಹತ್ಯೆಯಾದಾಗ ನೇರವಾಗಿ ಆರೋಪಿತರ ಯಾಕೆ ಬಂಧಿಸಲ್ಲ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಮುಖಂಡರಾದ ರಮೇಸ್ ಗೌಡ ತರಗನಹಳ್ಳಿ ಸೇರಿದಂತೆ ಅನೇಕ ಮುಖಂಡರು, ಮಹಿಳೆಯರು ಇದ್ದರು.ಕಾಂಗ್ರೆಸ್‌ನಿಂದ ಪ್ರತಿ ವಿಚಾರದಲ್ಲೂ ರಾಜಕೀಯ

ಮಾಜಿ ಸಚಿವ ಎಚ್‌.ಆಂಜನೇಯ ರಾಮಮಂದಿರ ಕುರಿತ ಹೇಳಿಕೆ ಖಂಡಿಸಿದ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್‌ ಪ್ರತಿ ವಿಚಾರದಲ್ಲೂ ರಾಜಕೀಯ ಮಾಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಲ್ಲೇ ರಾಮ ಇದೆ ಆದರೇ ಅವರು ಇದಕ್ಕೆ ತದ್ವಿರುದ್ದವಾಗಿದ್ದಾರೆ. ರಾಮನ ಬಗ್ಗೆ ಇಲ್ಲಸಲ್ಲದ ಮಾತಗಳಾಡುವುದು ಪ್ರಭು ಶ್ರೀರಾಮನಿಗೆ ಮಾಡುವ ಅವಮಾನ ಮಾತ್ರವಲ್ಲ ಬದಲಿಗೆ ಇಡೀ ದೇಶಕ್ಕೆ ಮಾಡಿದ ಅಪಮಾನ ಎಂದು ರೇಣುಕಾಚಾರ್ಯ ಹೇಳಿದರು.