ಗದಗ: ಈ ವರ್ಷ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದರೂ ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ತಾಲೂಕಿನ ಹಿರೇಹಂದಿಗೋಳ ರಸ್ತೆಯಲ್ಲಿರುವ ರೈತರ ಹೊಲಗಳಿಗೆ ತೆರಳಿ ಬರ ವೀಕ್ಷಿಸಿ ಮಾತನಾಡಿ, ಪ್ರಾರಂಭದಲ್ಲಿ ಮಳೆ ಬಂದಿದ್ದರಿಂದ ರೈತರು ಆಶಾಭಾವನೆಯಿಂದ ಬಿತ್ತನೆ ಕಾರ್ಯ ಮಾಡಿದ್ದರು. ಆದರೆ ಜುಲೈ ತಿಂಗಳಲ್ಲಿ ಮಳೆ ಸಂಪೂರ್ಣವಾಗಿ ಇಲ್ಲದ ಕಾರಣ ಬೆಳೆಗಳು ಒಣಗುತ್ತಿವೆ. ಅನೇಕ ಕಡೆ ರೈತರು ಬಿತ್ತನೆಯನ್ನೇ ಮಾಡಿಲ್ಲ. ಬಿತ್ತನೆ ಮಾಡಿದವರ ಬೆಳೆಗಳು ಕೂಡ ಸಂಪೂರ್ಣ ಹಾಳಾಗಿವೆ. ಹೊಲಗಳಲ್ಲಿ ಎಲೆಗಳು ಹಳದಿಯಾಗುತ್ತಿದ್ದು, ಹೆಸರಿನ ಬೆಳೆ ಸಂಪೂರ್ಣ ವಿಫಲವಾಗಿದೆ ಎಂದರು.

ಸರ್ಕಾರ ಇದುವರೆಗೆ ಯಾವುದೇ ಪ್ರಾಥಮಿಕ ಸಮೀಕ್ಷೆಯನ್ನೂ ಮಾಡಿಲ್ಲ. ಕಂದಾಯ ಸಚಿವರು ಡಿಸಿಗಳಿಂದ ವರದಿ ತರಿಸುವುದಾಗಿ ಹೇಳುತ್ತಿದ್ದಾರೆ. ಆದರೆ ವೈಜ್ಞಾನಿಕವಾಗಿ ಕಂದಾಯ, ಸಾಂಖ್ಯಿಕ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ನೀಡಿದಾಗ ಮಾತ್ರ ಅದು ಅಧಿಕೃತವಾಗುತ್ತದೆ ಎಂದರು.

ಬರ ನಿರ್ವಹಣೆಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ತುರ್ತು ಯೋಜನೆ ರೂಪಿಸಿಲ್ಲ. ಕುಡಿಯುವ ನೀರಿಗೂ ಪರ್ಯಾಯ ವ್ಯವಸ್ಥೆ ಮಾಡಲಾಗಿಲ್ಲ. ಪಶ್ಚಿಮ ಘಟ್ಟಗಳಲ್ಲಿ ಮಳೆಯಾಗಿದ್ದರಿಂದ ನದಿಗಳಲ್ಲಿ ನೀರು ಬಂದಿದ್ದರೂ, ಆ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಸುಮಾರು 145 ಏತ ನೀರಾವರಿ ಯೋಜನೆಗಳು ದುರಸ್ತಿ ಮತ್ತು ವಿದ್ಯುತ್ ಬಿಲ್ ಪಾವತಿಸದ ಕಾರಣ ಸ್ಥಗಿತಗೊಂಡಿವೆ. ಇದು ಸರ್ಕಾರದ ವೈಫಲ್ಯವಾಗಿದೆ ಎಂದರು.

​ಕೇವಲ ಪತ್ರ ವ್ಯವಹಾರ ನಡೆಸುವುದೇ ಸರ್ಕಾರದ ಕೆಲಸವಲ್ಲ. ಕೂಡಲೇ ರಾಜ್ಯ ಸರ್ಕಾರ ವೈಜ್ಞಾನಿಕವಾಗಿ ಬೆಳೆ ಸಮೀಕ್ಷೆ ನಡೆಸಿ, ಅಧಿಕೃತ ವರದಿಯನ್ನು ಸಿದ್ಧಪಡಿಸಬೇಕು. ಅದರ ಆಧಾರದ ಮೇಲೆ ಎನ್‌ಡಿಆರ್‌ಎಫ್ ನಿಯಮಾವಳಿಗಳ ಪ್ರಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.


ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಎಂ.ಎಸ್. ಕರಿಗೌಡ್ರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಇದ್ದರು.