ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು
ಬೂದು ನೀರು ನಿರ್ವಹಣೆಗೆ ಸರ್ಕಾರ ಅನುದಾನವನ್ನು ನೀಡಿದೆ. ಪರಿಸರ ಸಂರಕ್ಷಣೆಯಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಗ್ರಾಪಂನ ಪ್ರತಿಯೊಬ್ಬ ಅಧಿಕಾರಿಗಳು, ಜನಪ್ರತಿನಿಧಿಗಳು ಇದಕ್ಕೆ ಮಹತ್ವ ನೀಡಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.ತಾಲೂಕಿನ ಅಂಬಳೆ ಗ್ರಾಮ ಪಂಚಾಯಿತಿಯಲ್ಲಿ ಬೂದು ನಿರ್ವಹಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಪ್ರತಿ ನಗರ, ಪಟ್ಟಣ ಹಾಗೂ ಗ್ರಾಮಗಳಲ್ಲಿ ಸಂಗ್ರಹವಾಗುವ ಕಲುಷಿತ ನೀರು, ನದಿ, ಕಾಲುವೆಗಳನ್ನು ಸೇರುತ್ತದೆ. ಇದರಿಂದ ಶುದ್ಧ ನೀರು ಕಲುಷಿತಗೊಳ್ಳುತ್ತದೆ. ಇದನ್ನು ಮೂಲದಲ್ಲೇ ಸಂಸ್ಕರಿಸಿ, ಶುದ್ಧಗೊಳಿಸಿ ಇದನ್ನು ನೀರಿನ ಮೂಲಕ್ಕೆ ಬಿಡುವುದರಿಂದ ನೀರು ಕಲುಷಿತಗೊಳ್ಳುವುದನ್ನು ತಡೆಯಬಹುದು.ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಬೂದು ನಿರ್ವಹಣೆ, ಚರಂಡಿ ಹಾಗೂ ಇನ್ ಲೈನ್ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ೯ ಗ್ರಾಪಂಗಳಿಗೆ ೨.೧೦ ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಅಂಬಳೆ ಗ್ರಾಮದಲ್ಲಿ ೭ ಕಡೆ ೩೩ ಲಕ್ಷ ರು. ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದ್ದು ಇದಕ್ಕೆ ಚಾಲನೆ ನೀಡಲಾಗಿದೆ ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಆಸಕ್ತಿ ವಹಿಸಿ ಕೆಲಸ ಮಾಡಬೇಕು ಎಂದು ಮಾಹಿತಿ ನೀಡಿದರು.ಕಂದಹಳ್ಳಿ ಮಹದೇಶ್ವರ ದೇಗುಲದಿಂದ ಅಂಬಳೆ ಮಾರ್ಗವಾಗಿ ಆಲೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ೨೫ ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದು ಹಾಳಾಗಿತ್ತು. ಈಗ ಈ ರಸ್ತೆಗೆ ೫ ಕೋಟಿ ರು. ಬಿಡುಗಡೆಯಾಗಿದ್ದು ಶೀಘ್ರದಲ್ಲೇ ಇದರ ಕಾಮಗಾರಿ ಆರಂಭಗೊಳ್ಳಲಿದೆ. ಅಲ್ಲದೆ ಒಟ್ಟು. ೫೩.೧೬ ಕೋಟಿ ರು. ವೆಚ್ಚದಲ್ಲಿ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುರಸ್ತಿಗೆ ಕ್ರಮ ವಹಿಸಲಾಗಿದ್ದು ಆದಷ್ಟು ಬೇಗ ಈ ಕಾಮಗಾರಿ ಆರಂಭಗೊಳ್ಳಲಿದ್ದು ಗ್ರಾಮೀಣ ರಸ್ತೆಗಳಿಗೆ ಹೊಸ ಕಾಯಕಲ್ಪ ನೀಡಲಾಗುವುದು ಎಂದರು.ಗ್ರಾಪಂ ಅಧ್ಯಕ್ಷ ನವೀನ್‌ಕುಮಾರ್, ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ, ಸದಸ್ಯ ಸಿದ್ಧನಾಯಕ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್ ಇಒ ಉಮೇಶ್ ಮಾತನಾಡಿದರು. ಗ್ರಾಪಂ ಸದಸ್ಯರಾದ ಮಹದೇವಸ್ವಾಮಿ ಪಿಡಿಒ ಕಾವ್ಯ, ಕಾರ್ಯದರ್ಶಿ ಪುಟ್ಟರಾಜು ಜಿಪಂ ನೀರಾವರಿ ವಿಭಾಗದ ಎಇಇ ಚಂದ್ರಶೇಖರಮೂರ್ತಿ ಇದ್ದರು.